ಸಕ್ಕರೆ ಕಾರ್ಖಾನೆ ಆರಂಭವಾದರೆ ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ಸುಮಾರು 500 ರಿಂದ 600 ಕುಟುಂಬಗಳಿಗೆ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯಲಿವೆ.

ಹೊಸಪೇಟೆ: ವಿಜಯನಗರ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಸಕ್ಕರೆ ಕಾರ್ಖಾನೆ ನನ್ನ ಕನಸಾಗಿತ್ತು. ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ಹಗರಿಬೊಮ್ಮನಹಳ್ಳಿ ತಾಲೂಕಿನ ಕೆಚ್ಚನಬಂಡಿ ಗ್ರಾಮದ ಸಮೀಪದಲ್ಲಿ ಕರ್ನಾಟಕ ಬಂಗಾರು ಶುಗರ್ಸ್‌ ಪ್ರೈವೇಟ್‌ ಲಿಮಿಟೆಡ್‌ನಿಂದ (ಕೆಬಿಎಸ್‌ಪಿಎಲ್) ಅತೀ ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಕಾಂಗ್ರೆಸ್‌ ಮುಖಂಡರು ಹಾಗೂ ಉದ್ಯಮಿ ಬಿ. ಎಲ್‌.ರಾಣಿ ಸಂಯುಕ್ತ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಹೊಸೇಟೆಯಲ್ಲಿದ್ದ ಸಕ್ಕರೆ ಕಾರ್ಖಾನೆ ಮುಚ್ಚಿದ ನಂತರ ಕಬ್ಬು ಬೆಳೆಯುವ ರೈತರಿಗೆ ಸಾಕಷ್ಟು ತೊಂದರೆಯಾಗಿತ್ತು. ರೈತರ ಹಿತ ದೃಷ್ಠಿಯಿಂದ ಕೆಚ್ಚನಬಂಡಿ ಸಮೀಪದಲ್ಲಿ ತಮ್ಮ ಸ್ವಂತ 100 ಎಕರೆ ಜಮೀನು ಇರುವುದರಿಂದ ನಮ್ಮ ಕುಟುಂಬದಿಂದಲೇ ಸುಮಾರು ₹400 ರಿಂದ ₹450 ಕೋಟಿ ಬಂಡವಾಳದಲ್ಲಿ ಸಕ್ಕರೆ ಕಾರ್ಖನೆ ಆರಂಭಿಸಲಾಗುವುದು. ಸಿಎಂ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೂಮಿ ಪೂಜೆಗೆ ಆಹ್ವಾನಿಸಿದ್ದೇವೆ. ಅವರ ಸಮಯ ನೋಡಿಕೊಂಡು ಅತೀ ಶೀಘ್ರದಲ್ಲೇ ಸಕ್ಕರೆ ಕಾರ್ಖಾನೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.

ಸಕ್ಕರೆ ಕಾರ್ಖಾನೆ ಆರಂಭವಾದರೆ ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ಸುಮಾರು 500 ರಿಂದ 600 ಕುಟುಂಬಗಳಿಗೆ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯಲಿವೆ. ಜಿಲ್ಲಾ ಕೇಂದ್ರದಿಂದ ಅಂದರೆ ಹೊಸಪೇಟೆಯಿಂದ ಕೇವಲ 25 ರಿಂದ 30 ಕಿಮೀ ದೂರದಲ್ಲಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಕೆಚ್ಚನಬಂಡಿ ಗ್ರಾಮದಲ್ಲಿ ಕರ್ನಾಟಕ ಬಂಗಾರು ಶುಗರ್ಸ್‌ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಈಗಾಗಲೇ ಎಲ್ಲ ರೀತಿಯ ಪರವಾನಗಿ ಪಡೆದುಕೊಂಡಿದ್ದೇವೆ. ಸಾಧ್ಯವಾದರೆ ಇದೇ ತಿಂಗಳಲ್ಲಿಯೇ ಸಕ್ಕರೆ ಕಾರ್ಖಾನೆಯ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

ಕರ್ನಾಟಕ ಬಂಗಾರು ಶುಗರ್ಸ್‌ ನೂತನ ಸಕ್ಕರೆ ಕಾರ್ಖಾನೆಯಲ್ಲಿ ದಿನಕ್ಕೆ 6 ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಸಹ ​ಉತ್ಪಾದನಾ ಘಟಕ ಸ್ಥಾಪಿಸಿ 24 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯೂ ಇದೆ. ಅಲ್ಲದೆ, ಎಥೆನಾಲ್ ಉತ್ಪಾದನೆಗೂ ಹೆಚ್ಚಿನ ಸಾಮರ್ಥ್ಯದ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಸಕ್ಕರೆ ಉತ್ಪಾದನೆಯ ಜತೆಗೆ ವಿದ್ಯುತ್ ಮತ್ತು ಎಥೆನಾಲ್ ಉತ್ಪಾದನೆಯ ಮೂಲಕವೂ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದರು.

ಸಕ್ಕರೆ ಕಾರ್ಖಾನೆಯಲ್ಲಿ ನೀರಿನ ಮರುಬಳಕೆಗೆ ಆದ್ಯತೆ: ಕಾರ್ಖಾನೆಯಲ್ಲಿ ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗುತ್ತದೆ. ಸ್ಥಳೀಯ ಬೋರ್‌ವೆಲ್‌ ನೀರನ್ನು ಬಳಸಿಕೊಳ್ಳುವುದರ ಜತೆಗೆ ನೀರಿನ ಮರುಬಳಕೆ ವ್ಯವಸ್ಥೆ ಅಳವಡಿಸಿ ನೀರಿನ ವ್ಯರ್ಥತೆ ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಮಾಲಿನ್ಯ ನಿಯಂತ್ರಣ ಕ್ರಮ ಅನುಸರಿಸುವ ಮೂಲಕ ಪರಿಸರ ಸ್ನೇಹಿ ಕೈಗಾರಿಕಾ ಘಟಕವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದರು.

18 ರಿಂದ 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ: ಸಕ್ಕರೆ ಕಾರ್ಖಾನೆ ಕಾಮಗಾರಿ ಆರಂಭವಾದ ದಿನದಿಂದ 18 ರಿಂದ 24 ತಿಂಗಳೊಳಗೆ ಕಾರ್ಖಾನೆ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆಗೆ ಭೂಮಿ ನೀಡಿದರೆ ಹೊಸಪೇಟೆಯಲ್ಲಿಯೂ ನಾವು ಇನ್ನೊಂದು ಸಕ್ಕರೆ ಕಾರ್ಖಾನೆ ಖಂಡಿತವಾಗಿಯೂ ಆರಂಭಿಸುತ್ತೇವೆ.ಸಕ್ಕರೆ ಕಾರ್ಖಾನೆಗೆ ಬೇಕಾಗುವಷ್ಟು ಭೂಮಿ ನೀಡಿದರೆ ಸಾಕು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಹೊಸಪೇಟೆ ನಗರದಲ್ಲಿ ಆರ್‌ಬಿಎಸ್‌ಎಸ್‌ಎನ್‌ಗೆ 64.50 ಎಕರೆ ಜಮೀನು ಮತ್ತೆ ಸರ್ಕಾರ ಲೀಜ್‌ ನೀಡುವಾಗ ತಾವು ವಿರೋಧ ವ್ಯಕ್ತಪಡಿಸಿರಲಿಲ್ಲ. ಸಕ್ಕರೆ ಕಾರ್ಖಾನೆಗೆ ಭೂಮಿ ಬೇಕಾಗಬಹುದು ಎಂದು ಧ್ವನಿ ಎತ್ತಲಿಲ್ಲ ಯಾಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಕುರಿತು ಮುಂದಿನ ದಿನಗಳಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಮಾತನಾಡುವೆ ಎಂದರು.

ಮುಂದಿನ ದಿನಗಳಲ್ಲಿ ಹಗರಿಬೊಮ್ಮನಹಳ್ಳಿ ಅಥವಾ ಹೊಸಪೇಟೆ ಮಹಿಳೆಯರಿಗೆ ಮೀಸಲಾದರೆ ಮುಂದಿನ ನಿಮ್ಮ ನಡೆ ಎಂದು ಕೇಳಲಾದ ಪ್ರಶ್ನೆಗೆ ಈ ಸುದ್ದಿಗೋಷ್ಠಿಯಲ್ಲಿ ರಾಜಕೀಯ ವಿಷಯ ಬೇಡ. ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಸಾಕಷ್ಟು ಮಾತನಾಡಬೇಕಾಗಿರುವುದರಿಂದ ಮತ್ತೊಮ್ಮೆ ಸುದ್ದಿಗೋಷ್ಠಿ ಕರೆದು ನಾನೇ ರಾಜಕೀಯವಾಗಿ ಮಾತನಾಡುವೆ ಎಂದು ಹೇಳಿದರು.

ರೈತ ಸಂಘದ ಮುಖಂಡ ಗೋಸಲಭರಮಪ್ಪ, ಪಿ.ವಿ. ವೆಂಕಟೇಶ್‌, ಗುಜ್ಜಲ್‌ ಗಣೇಶ್‌, ವ್ಯಾಸನಕೆರೆ ಶ್ರೀನಿವಾಸ, ಅನಂತಪದ್ಮನಾಭ, ವೀರಾಂಜಿನೇಯ, ಗಾಳೆಪ್ಪ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.