ಎರಡು ಬೃಹತ್ ಸಬ್‌ಸ್ಟೇಷನ್‌ಗಳ ಸ್ಥಾಪನೆಗೆ ಚಾಲನೆ ನೀಡಲಾಗಿದೆ.

ಹೊಸಪೇಟೆ: ವಿಜಯನಗರ ಜಿಲ್ಲೆಯ ದೀರ್ಘಕಾಲದ ವಿದ್ಯುತ್ ಸಮಸ್ಯೆಗೆ ಶಾಶ್ವತವಾಗಿ ಸಮಸ್ಯೆ ನೀಗಿಸಲು ಸುಮಾರು ₹50 ಕೋಟಿಗೂ ಅಧಿಕ ವೆಚ್ಚದ ವಿದ್ಯುತ್ ಉಪಕೇಂದ್ರ ಹಾಗೂ ರೈತರ ಆಶೋತ್ತರವಾದ ಸಕ್ಕರೆ ಕಾರ್ಖಾನೆಯ ಪುನಶ್ಚೇತನಗೊಳಿಸಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.

ನಗರ ಮತ್ತು ತಾಲೂಕಿನ ಹೊರವಲಯದಲ್ಲಿ ನಾಗೇನಹಳ್ಳಿಯಲ್ಲಿ ಸುಮಾರು ₹50 ಕೋಟಿ ಮೊತ್ತದ 2 ವಿದ್ಯುತ್ ಉಪಕೇಂದ್ರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪದೇಪದೇ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎರಡು ಬೃಹತ್ ಸಬ್‌ಸ್ಟೇಷನ್‌ಗಳ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ನಾಗನಹಳ್ಳಿ ಸಬ್‌ಸ್ಟೇಷನ್ ₹23.26 ಕೋಟಿ ವೆಚ್ಚದಲ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣ ನಗರ ಪ್ರದೇಶದ ಬೇಡಿಕೆಯನ್ನು ಪೂರೈಸಲು ₹27 ಕೋಟಿ ವೆಚ್ಚದಲ್ಲಿ ಮತ್ತೊಂದು ಸಬ್‌ಸ್ಟೇಷನ್ ಸೇರಿ ಒಟ್ಟು ₹50 ಕೋಟಿ ಮೊತ್ತದ ನೂತನ ವಿದ್ಯುತ್ ಉಪಕೇಂದ್ರ ಸ್ಥಾಪಿಸಲಾಗುವುದು ಎಂದು ಹೇಳಿದರು.

ರಾಯರಕೆರೆಯ ಹಳೆಯ ಸಬ್‌ಸ್ಟೇಷನ್ ಅನ್ನು 2*20 ಎಂವಿಎ ಸಾಮರ್ಥ್ಯಕ್ಕೆ ಏರಿಸಲಾಗುತ್ತಿದೆ. ಇದರಿಂದ ಈ ಭಾಗದ ಜನತೆಗೆ 24* 7 ವಿದ್ಯುತ್ ದೊರೆಯಲಿದೆ. ಈ ಯೋಜನೆಗಳು 2027ರ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ. ಕಾಮಗಾರಿ ಪೂರ್ಣಗೊಂಡ ನಂತರ ತೋರಣಗಲ್ಲು ಮತ್ತು ಮುನಿರಾಬಾದ್ ಲೈನ್‌ಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಸ್ಥಳೀಯವಾಗಿ ವಿದ್ಯುತ್ ನಿರ್ವಹಣೆ ಸುಲಭವಾಗಲಿದೆ ಎಂದು ಶಾಸಕ ಎಚ್ ಆರ್ ಗವಿಯಪ್ಪ ಮಾಹಿತಿ ನೀಡಿದರು.

ಸಕ್ಕರೆ ಕಾರ್ಖಾನೆ ಪುನಾರಂಭ:

ದಶಕಗಳಿಂದ ಸ್ಥಗಿತಗೊಂಡಿರುವ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ರೈತರ ಆಶಯದಂತೆ ಸರ್ಕಾರವು ಸಹ ಅಂತಿಮವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ತಮಿಳುನಾಡು ಮಾದರಿಯನ್ನು ಅನುಸರಿಸಿ, ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆ ಪುನಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ರೈತರಿಗೆ ಕಬ್ಬಿನ ಸರಿಯಾದ ಬೆಲೆ ಸಿಗುವುದಲ್ಲದೆ, ಸಕಾಲಕ್ಕೆ ಕಟಾವು ಪ್ರಕ್ರಿಯೆಯೂ ಸುಗಮವಾಗಲಿದೆ ಎಂದರು.

ಶೀಘ್ರದಲ್ಲೇ ಜಿಲ್ಲಾಸ್ಪತ್ರೆ ಉದ್ಘಾಟನೆ:

ಜಿಲ್ಲೆಯ ಜನತೆಯ ಬಹುದಿನದ ಕನಸಾದ ಸುಸಜ್ಜಿತ ಜಿಲ್ಲಾಸ್ಪತ್ರೆ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಶೇ.90 ಕಾಮಗಾರಿಗಳು ಪೂರ್ಣಗೊಂಡಿವೆ. ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ಖರೀದಿ ಮತ್ತು ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ. ಮುಂದಿನ 15 ರಿಂದ 20 ದಿನಗಳಲ್ಲಿ ಭವ್ಯವಾದ ಆಸ್ಪತ್ರೆಯ ಉದ್ಘಾಟನೆ ದಿನದ ಕುರಿತು ಮಾಹಿತಿ ನೀಡಲಾಗುವುದು ಎಂದರು.

ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಕೆ.ಶಿವಮೂರ್ತಿ, ಎಸ್ಪಿ ಎಸ್‌.ಜಾಹ್ನವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ, ಡಿವೈಎಸ್ಪಿ ಡಾ.ಟಿ. ಮಂಜುನಾಥ್, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್, ಕೆಪಿಟಿಸಿಎಲ್ ಕಾರ್ಯ ನಿರ್ವಾಹಕ ಅಭಿಯಂತರ ಎಚ್.ಎಂ. ನಟರಾಜ, ತಹಶೀಲ್ದಾರ್ ಶೃತಿ ಎಂ, ತಾಪಂ ಇಒ ಆಲಂಬಾಷಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.