ಕನ್ನಡಪ್ರಭ ವಾರ್ತೆ ವಿಜಯಪುರ

ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ತೂಕದಲ್ಲಿ ಅಕ್ರಮ ನಡೆಸಿ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಮಾಡಿದ ಪ್ರಕರಣವನ್ನು ಬಬಲೇಶ್ವರ ಪೊಲೀಸರು ಭೇದಿಸಿದ್ದು, 8 ಆರೋಪಿಗಳನ್ನು ಬಂಧಿಸಿ ₹11.32 ಕೋಟಿಗೂ ಅಧಿಕ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಧರೆಪ್ಪ ನಾವಿ, ಬೀರಪ್ಪ ಗಾಡದರ, ಯಲ್ಲಪ್ಪ ಗಾಡದರ, ಪ್ರಕಾಶ ಗಡ್ಡಿ, ಪರಮಾನಂದ ಗಡ್ಡಿ, ಮಹಾದೇವ ಕಾಂಬಳೆ, ಬಾಳಪ್ಪ ಚೋಪಡೆ, ಪ್ರಭಾಕರ ಸಿಂಗೆ ಬಂಧಿತ ಆರೋಪಿಗಳು.

ಪ್ರಕರಣದ ಹಿನ್ನೆಲೆ:

ಆರು ವರ್ಷಗಳಲ್ಲಿ ಕಬ್ಬಿನ ಹಂಗಾಮಿನ ವೇಳೆ ತೂಕದಲ್ಲಿ ವಂಚಿಸುತ್ತಿದ್ದ ಆರೋಪಿಗಳ ಕುರಿತು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ 2026ರ ಫೆಬ್ರುವರಿ 12ರಂದು ಪ್ರಕರಣ ದಾಖಲಾಗಿತ್ತು. ಬಬಲೇಶ್ವರ ತಾಲೂಕಿನ ನಂದಿ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಅಶೋಕ ಸಂಗಪ್ಪ ತಿಪ್ಪರೆಡ್ಡಿ ಅವರು ನೀಡಿದ ದೂರಿನ ಮೇರೆಗೆ, ಕಾರ್ಖಾನೆಯ ಕಬ್ಬು ತೂಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಧರೆಪ್ಪ ನಾವಿ ಹಾಗೂ ಇತರರು ಸೇರಿ 2020-21ರಿಂದ 2025-26ರವರೆಗೆ ಆರು ಹಂಗಾಮುಗಳಲ್ಲಿ ಕೃತಕ ಟೋಕನ್ ಹಾಗೂ ಬೋಗಸ್ ಬಿಲ್‌ ಸೃಷ್ಟಿಸಿ ರೈತರ ಹೆಸರಿನಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ನಕಲಿ ಟೋಕನ್‌ ಸೃಷ್ಟಿ, ಬೋಗಸ್ ಬಿಲ್‌ ತಯಾರಿಕೆ:


ಪೊಲೀಸರ ತನಿಖೆಯಲ್ಲಿ ಆರೋಪಿಗಳು ಕಾರ್ಖಾನೆಯ ತೂಕ ಮಾಪನ ವ್ಯವಸ್ಥೆಯಲ್ಲಿದ್ದ ಕೆಲ ಸಿಬ್ಬಂದಿಯ ಸಹಕಾರದೊಂದಿಗೆ ನಕಲಿ ಟೋಕನ್‌ ಸೃಷ್ಟಿಸಿ, ಕಬ್ಬು ಸಾಗಣೆ ವಾಹನಗಳ ತೂಕಕ್ಕೆ ಹೊಂದಾಣಿಕೆ ಮಾಡಿ ಬೋಗಸ್ ಬಿಲ್‌ ತಯಾರಿಸುತ್ತಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಮೂಲಕ ಸುಮಾರು 34,490.699 ಮೆಟ್ರಿಕ್ ಟನ್ ಕಬ್ಬಿನ ತೂಕ ಕೃತಕವಾಗಿ ದಾಖಲಿಸಿ ₹12,33,22,793 ಹಣವನ್ನು 91 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ದುರುಪಯೋಗ ಮಾಡಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ಪೊಲೀಸರ ತನಿಖೆಯಲ್ಲಿ ಆರೋಪಿಗಳು ಈ ಹಿಂದೆ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲಿಯೂ ಇದೇ ರೀತಿಯ ವಂಚನೆ ನಡೆಸಿದ್ದ ಹಿನ್ನೆಲೆ ಹೊಂದಿದ್ದಾರೆ. ಪ್ರಮುಖ ಆರೋಪಿ ಧರೆಪ್ಪ ನಾವಿಯಿಂದ ₹21 ಲಕ್ಷ ನಗದು, ಆತನ ಬ್ಯಾಂಕ್ ಖಾತೆಯಲ್ಲಿದ್ದ ₹4,80,47,981 ಹಾಗೂ ಇತರೆ ಖಾತೆಗಳಿಂದ ₹5,48,52,102 ಸೇರಿ ಒಟ್ಟು ₹10,50,00,083 ಹಣ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಬ್ಯಾಂಕ್ ಖಾತೆಗಳಲ್ಲಿ ₹82,07,569 ಮೊತ್ತ ಫ್ರೀಜ್ ಮಾಡಲಾಗಿದ್ದು, ಒಟ್ಟಾರೆ ಈ ಪ್ರಕರಣದಲ್ಲಿ ₹11,32,07,569 ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 8 ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಇತರೆ ಆರೋಪಿತರ ಕುರಿತು ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹಾಗೂ ಗ್ರಾಮೀಣ ಡಿವೈಎಸ್ಪಿ ಟಿ.ಎಸ್. ಸುಲ್ಫಿ ಅವರ ಮೇಲ್ವಿಚಾರಣೆಯಲ್ಲಿ, ಸಿಪಿಐ ರಮೇಶ ಅವಜಿ ನೇತೃತ್ವದ ವಿಶೇಷ ತನಿಖಾ ತಂಡ ಪ್ರಕರಣವನ್ನು ಅಲ್ಪಾವಧಿಯಲ್ಲಿ ಭೇದಿಸಿ ಆರೋಪಿಗಳನ್ನು ಪತ್ತೆಹಚ್ಚಿದೆ. ಅತ್ಯುತ್ತಮ ತನಿಖೆ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಆರು ವರ್ಷಗಳ ಕಬ್ಬು ನುರಿಸುವ ಹಂಗಾಮಿನಲ್ಲಿ ತೂಕದಲ್ಲಿ ಬೋಗಸ್ ಬಿಲ್ ತಯಾರಿಸಿ ವಂಚಿಸಿದ 8 ಆರೋಪಿಗಳನ್ನು ಬಂಧಿಸಲಾಗಿದೆ. ಕೋಟಿ ಕೋಟಿ ಹಣ ವಂಚಿಸಿದ್ದ ಪ್ರಕರಣದ ತನಿಖೆಗೆ ತಂಡ ರಚಿಸಲಾಗಿತ್ತು. ಈ ವೇಳೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಧರೆಪ್ಪ ನಾವಿ ಹಾಗೂ ಬೆಳಗಾವಿ ಮೂಲದ 7 ಆರೋಪಿಗಳನ್ನು ಬಂಧಿಸಲಾಗಿದೆ. ಅವರು ವಂಚಿಸಿದ ₹11,32,07,569 ನಗದನ್ನು ವಶಪಡಿಸಿಕೊಳ್ಳಲಾಗಿದೆ. ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿನಂದಿಸಲಾಗಿದೆ.

-ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ