ಕಬ್ಬಿನ ಹಣ ನೀಡುವಂತೆ ಆಗ್ರಹಿಸಿ ಇಲ್ಲಿನ ಸಂಗೂರ ಸಕ್ಕರೆ ಕಾರ್ಖಾನೆ ಮುಂದೆ ರೈತನೊಬ್ಬ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಹಾವೇರಿ: ಕಬ್ಬಿನ ಹಣ ನೀಡುವಂತೆ ಆಗ್ರಹಿಸಿ ಇಲ್ಲಿನ ಸಂಗೂರ ಸಕ್ಕರೆ ಕಾರ್ಖಾನೆ ಮುಂದೆ ರೈತನೊಬ್ಬ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಹಾವೇರಿ ತಾಲೂಕಿನ ಸಂಗೂರು ಬಳಿ ಇರುವ ಸಕ್ಕರೆ ಕಾರ್ಖಾನೆ, ಜಿಎಂ ಶುಗರ್ಸ್ ಮಾಲೀಕತ್ವದಲ್ಲಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶೀಗಿಹಳ್ಳಿ ಗ್ರಾಮದ ಅಂಗವಿಕಲ ರೈತ ಪ್ರದೀಪ ಉಳ್ಳಾಗಡ್ಡಿ ಎರಡು ತಿಂಗಳ ಹಿಂದೆ 140ಕ್ಕೂ ಅಧಿಕ ಟನ್ ಕಬ್ಬು ಕಾರ್ಖಾನೆಗೆ ನೀಡಿದ್ದಾರೆ. ಆದರೆ ಈ ವರೆಗೂ ಕಬ್ಬಿನ ಒಂದು ರುಪಾಯಿ ಹಣ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕಬ್ಬು ಬೆಳೆಗಾರ ಪ್ರದೀಪ ಉಳ್ಳಾಗಡ್ಡಿ , ಸಕ್ಕರೆ ಕಾರ್ಖಾನೆಯ ಆಡಳಿತ ಕಚೇರಿಯ ಮುಂದೆ ಕ್ರಿಮಿನಾಶಕ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.ಕಾರ್ಖಾನೆಯ ಮ್ಯಾನೇಜರ್ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ತಮಗೆ ಹಣ ಪಾವತಿ ಆಗಿಲ್ಲ, ಸಾಲ ನೀಡಿದ ಜನರು ಹಣ ವಾಪಸ್ ಕೇಳುತ್ತಿದ್ದಾರೆ. ಕಾರ್ಖಾನೆಗೆ ಕಬ್ಬು ಸಾಗಿಸಿದ 15 ದಿನದ ಒಳಗೆ ಹಣ ನೀಡಬೇಕು ಎಂಬ ನಿಯಮವಿದೆ. ಆದರೆ ಎರಡು ತಿಂಗಳು ಕಳೆದರೂ ಹಣ ಪಾವತಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಈ ವೇಳೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮತ್ತು ಪದಾಧಿಕಾರಿಗಳು ಪ್ರದೀಪ ಉಳ್ಳಾಗಡ್ಡಿ ಅವರ ಮನವೊಲಿಸಿ ಪ್ರತಿಭಟನೆ ವಾಪಸ್ ತೆಗೆಸಿದರು. ಅಲ್ಲದೇ ಜಿ.ಎಂ. ಶುಗರ್ಸ್ ಮಾಲೀಕರ ಮನೆಯಾದ ದಾವಣಗೆರೆಗೆ ತೆರಳಿ ಕಬ್ಬು ಬಾಕಿ ಹಣ ಪಾವತಿ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಜಿ.ಎಂ. ಶುಗರ್ಸ್ ಮಾಲೀಕರು ಸೋಮವಾರ ಕಬ್ಬಿನ ಬಾಕಿ ಹಣ ಪಾವತಿ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತುತ ರೈತ ಪ್ರತಿಭಟನೆ ಹಿಂಪಡೆದಿದ್ದಾರೆ.