3 ಜಿಲ್ಲೆಗಳಲ್ಲಿ ನಿಲ್ಲದ ಕಬ್ಬು ರೈತರ ಹೋರಾಟ

| Published : Nov 13 2025, 01:00 AM IST

3 ಜಿಲ್ಲೆಗಳಲ್ಲಿ ನಿಲ್ಲದ ಕಬ್ಬು ರೈತರ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಕಬ್ಬು ದರವನ್ನು ಟನ್‌ಗೆ ₹3300 ನಿಗದಿ ಮಾಡಿದ್ದರೂ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರ ಹೋರಾಟ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರ ಕಬ್ಬು ದರವನ್ನು ಟನ್‌ಗೆ ₹3300 ನಿಗದಿ ಮಾಡಿದ್ದರೂ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರ ಹೋರಾಟ ಮುಂದುವರಿದಿದೆ. ₹3500 ದರ ನೀಡಬೇಕು ಎಂದು ರೈತರು ಪಟ್ಟು ಹಿಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರೈತರು ಹೆದ್ದಾರಿಗಳನ್ನು ಬಂದ್‌ ಮಾಡಿ ಧರಣಿ ನಡೆಸಿದರೆ, ಬೀದರ್‌ ಜಿಲ್ಲೆಯ ಹುಮನಾಬಾದ್‌ನಲ್ಲಿ ರೈತರು ಎತ್ತಿನ ಗಾಡಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಇನ್ನು ಹಾವೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರೈತರು, ಕಾರ್ಖಾನೆ ಮಾಲೀಕರೊಂದಿಗೆ ನಡೆದ ಸಭೆ ವಿಫಲವಾಗಿದ್ದು, ಹೋರಾಟ 3ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಶುಗರ್ಸ್‌ ಸಕ್ಕರೆ ಕಾರ್ಖಾನೆ ರೈತರ ಪ್ರತಿಭಟನೆಗೆ ಮಣಿದು ₹3300 ದರ ಘೋಷಣೆ ಮಾಡಿದೆ.

ಮುಧೋಳದಲ್ಲಿ ಬುಧವಾರ ಬೆಳಗ್ಗೆಯೇ ರೈತರು ಮುಧೋಳ-ಬೆಳಗಾವಿ, ಮುಧೋಳ-ಧಾರವಾಡ, ಮುಧೋಳ-ನಿಪ್ಪಾಣಿ, ಮುಧೋಳ-ವಿಜಯಪುರ ರಾಜ್ಯ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದರಿಂದ ಪ್ರಯಾಣಿಕರು ಪರದಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪೂರ ನೇತೃತ್ವದಲ್ಲಿ ಮಂಗಳವಾರ ತಡರಾತ್ರಿವರೆಗೆ ನಡೆದ ಸಂಧಾನ ಸಭೆ ವಿಫಲವಾಗಿದ್ದರಿಂದ ರೈತರು ಆಕ್ರೋಶಗೊಂಡು ಹೆದ್ದಾರಿ ತಡೆ ನಡೆಸಿ ಆಕ್ರೋಶ ಹೊರಹಾಕಿದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಲವು ಬಾರಿ ಸಭೆ ನಡೆಸಿದರೂ ಇಬ್ಬರು ತಮ್ಮ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ. ತಾಲೂಕಿನ ಹುಲ್ಯಾಳ, ಹಿಪ್ಪರಗಿ ಗ್ರಾಮಗಳಲ್ಲಿ ರೈತರು ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಇನ್ನು ಹುಮನಾಬಾದ್‌ನಲ್ಲಿ ಕಬ್ಬಿನ ಬೆಲೆ ನಿಗದಿ, ಹಿಂಬಾಕಿ ಪಾವತಿ, ಬೆಳೆ ಹಾನಿ ಪರಿಹಾರ ವಿತರಣೆ ವಿಳಂಬ ಧೋರಣೆ ವಿರುದ್ಧ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಸಾವಿರಾರು ಸಂಖ್ಯೆಯಲ್ಲಿ ಸೇರಿದ ರೈತರು ಎತ್ತಿನ ಗಾಡಿಯೊಂದಿಗೆ ಮುಂಬೈ-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಇತ್ತ ಹಾವೇರಿ ಡೀಸಿ, ಜಿಲ್ಲೆಯ 3 ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಹೋರಾಟ ನಿರತರನ್ನು ಕರೆದು ಸಂಧಾನ ಸಭೆ ನಡೆಸಿದರು. ಇಳುವರಿ ಆಧಾರದ ಮೇಲೆ ಎಫ್‌ಆರ್‌ಪಿ ದರ ಮತ್ತು ಅದಕ್ಕೆ ಸರ್ಕಾರದ ₹50 ಮಾತ್ರ ಕೊಡಲು ಸಾಧ್ಯ ಎಂದು ಕಾರ್ಖಾನೆ ಮಾಲೀಕರು ವಾದಿಸಿರು. ಆದರೆ ಇದಕ್ಕೆ ರೈತ ಮುಖಂಡರು ಒಪ್ಪಲಿಲ್ಲ. ಇದರಿಂದ ರಾತ್ರಿವರೆಗೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.