ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಬಾಗ
ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್‌ದಲ್ಲಿ ಕಬ್ಬು ಬೆಳೆಗಾರರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ಕಬ್ಬಿನ ಬೆಲೆ ಪ್ರತಿ ಟನ್‌ಗೆ ₹3500 ನಿಗದಿಗಾಗಿ ನಡೆಸುತ್ತಿರುವ ಆಹೋರಾತ್ರಿ ಹೋರಾಟವನ್ನು ಬೆಂಬಲಿಸಿ ಮಂಗಳವಾರ ರೈತ ಸಂಘ ಮುಖಂಡರು, ರಸಗೊಬ್ಬರ ಮಾರಾಟಗಾರರು ಮತ್ತು ವಿವಿಧ ಸಂಘಟನೆಗಳು ಕೂಡಿಕೊಂಡು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಝೇಂಡಾ ಕಟ್ಟೆವರೆಗೆ ಪಾದಯಾತ್ರೆ ನಡೆಸಿ, ಸುಮಾರು 2 ಗಂಟೆಗಳ ಕಾಲ ಮುಖ್ಯ ರಸ್ತೆ ಬಂದ ಮಾಡಿ ಪ್ರತಿಭಟನೆ ನಡೆಸಿದರು.ಕರವೇ ಅಧ್ಯಕ್ಷ ಅಶೋಕ ಅಂಗಡಿ ಮಾತನಾಡಿ, ಸತತ 6 ದಿನಗಳಿಂದ ರೈತರು ಅಹೋರಾತ್ರಿ ಧರಣಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದರೂ ಕಾರ್ಖಾನೆಯ ಮಾಲೀಕರು ಮತ್ತು ಸರ್ಕಾರ ರೈತರ ಬೇಡಿಕೆ ಸ್ಪಂದಿಸುತ್ತಿಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದರು.ಕಾರ್ಖಾನೆ ಮಾಲೀಕರು ಕಬ್ಬು ನುರಿಸಲು ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಕೂಡಲೇ ರೈತರ ಬೇಡಿಕೆ ಈಡೇರಿಸದಿದ್ದರೇ ಪಟ್ಟಣದ ಎಲ್ಲ ಸರ್ಕಾರಿ ಕಚೇರಿಗಳಿಗೆ ಬೀಗ ಜಡಿದು, ಝೇಂಡಾ ಕಟ್ಟೆ ಹತ್ತಿರ ರಸ್ತೆ ಬಂದ ಮಾಡಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ರಸ್ತೆ ಬಂದ್ ಮಾಡಿದ್ದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಹಾದೇವ ಸನಮುರಿ ಮತ್ತು ಸಿಪಿಐ ಬಿ.ಎಸ್.ಮಂಟೂರ ಪ್ರತಿಭಟನಾಕಾರರನ್ನು ಉದ್ದೇಶಿ ಮಾತನಾಡಿ, ತಮ್ಮ ಬೇಡಿಕೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿ, ಯಾವುದೇ ಕಾರಣಕ್ಕೂ ರೈತರ ಹೋರಾಟ ಮುಗಿಯುವವರೆಗೆ ಕಾರ್ಖಾನೆ ಪ್ರಾರಂಭಿಸಲು ಬಿಡುವುದಿಲ್ಲ ಎಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದು ಗುರ್ಲಾಪೂರ ಕ್ರಾಸ್‌ದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಲು ತೆರಳಿದರು.ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ, ರೈತ ಸಂಘ ಅಧ್ಯಕ್ಷ ರಮೇಶ ಕಲ್ಹಾರ, ಆರ್.ಎಸ್.ಶಿರಗಾಂವೆ, ಬಿ.ಎನ್.ಬಂಡಗರ, ಮಹಾದೇವ ಹೊಳ್ಕರ, ರಾಜು ಜಾಧವ, ನಾಮದೇವ ಕಾಂಬಳೆ, ವಿದ್ಯಾಧರ ಕುಲಗುಡೆ, ನಾರಾಯಣ ಮೇತ್ರಿ, ರಮೇಶ ಕುಂಬಾರ, ಸುನೀಲ ಪೂಜಾರಿ, ಧರೆಪ್ಪ ನಾಗನೂರ, ಲಕ್ಷ್ಮನ ನಾಯಿಕ ಸೇರಿ ಅನೇಕರು ಪಾಲ್ಗೊಂಡಿದ್ದರು.
;Resize=(128,128))