ಕಬ್ಬು ಬೆಳೆಗಾರರ ಹೋರಾಟ ಬೇರೆ ರಾಜ್ಯಗಳಲ್ಲೇಕಿಲ್ಲ?: ಕೇಂದ್ರ ಸಚಿವ ಜೋಶಿ

| Published : Nov 09 2025, 02:45 AM IST

ಕಬ್ಬು ಬೆಳೆಗಾರರ ಹೋರಾಟ ಬೇರೆ ರಾಜ್ಯಗಳಲ್ಲೇಕಿಲ್ಲ?: ಕೇಂದ್ರ ಸಚಿವ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ದರ ನಿಗದಿ ಸೇರಿದಂತೆ ಹಲವು ಕಾರಣಗಳಿಗಾಗಿ ಕಬ್ಬು ಬೆಳೆಗಾರರ ಹೋರಾಟಗಳು ಕರ್ನಾಟಕದಲ್ಲಷ್ಟೇ ನಡೆಯುತ್ತಿವೆ. ಇತರೆ ಸಕ್ಕರೆ ಉತ್ಪಾದನಾ ರಾಜ್ಯಗಳಲ್ಲಿ ಏಕಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

ಧಾರವಾಡ: ಕಬ್ಬು ಬೆಳೆಗಾರರ ಹೋರಾಟದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಮುಖಂಡರ ನಡೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀವ್ರವಾಗಿ ಟೀಕಿಸಿದ್ದು, ರಾಜ್ಯ ಕಾಂಗ್ರೆಸ್‌ ಸರ್ಕಾರದ ದುರಾಡಳಿತ, ಬೆಲೆ ಏರಿಕೆಯಿಂದಾಗಿಯೇ ರಾಜ್ಯದ ಕಬ್ಬು ಬೆಳೆಗಾರರು ಇಂದು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ ನಿಗದಿ ಸೇರಿದಂತೆ ಹಲವು ಕಾರಣಗಳಿಗಾಗಿ ಕಬ್ಬು ಬೆಳೆಗಾರರ ಹೋರಾಟಗಳು ಕರ್ನಾಟಕದಲ್ಲಷ್ಟೇ ನಡೆಯುತ್ತಿವೆ. ಇತರೆ ಸಕ್ಕರೆ ಉತ್ಪಾದನಾ ರಾಜ್ಯಗಳಲ್ಲಿ ಏಕಿಲ್ಲ? ರಾಜ್ಯ ಸರ್ಕಾರ ರೈತರಿಗೆ ಸಿಗಬೇಕಾದ ಲಾಭವನ್ನು ತಲುಪಿಸುವಲ್ಲಿ ವಿಫಲವಾಗಿರುವುದೇ ಇದಕ್ಕೆ ಕಾರಣ ಎಂದರು.

ಮಹಾರಾಷ್ಟ್ರ, ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಕಬ್ಬಿನ ಬೆಲೆಯು ಕರ್ನಾಟಕಕ್ಕಿಂತ ಹೆಚ್ಚಿದೆ ಎಂದ ಅವರು, ಈ ರಾಜ್ಯಗಳೂ ಸಹ ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ (MSP) ಅನ್ವಯಿಸಿವೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಇನ್ನೂ ಪವರ್ ಪರ್ಚೇಸ್ ಅಗ್ರಿಮೆಂಟ್‌ (PPA) ಅನ್ನು ಸಕ್ಕರೆ ಕಾರ್ಖಾನೆಗಳೊಂದಿಗೆ ಅಂತಿಮಗೊಳಿಸಿಲ್ಲ. ಇದರಿಂದಾಗಿ ಕಾರ್ಖಾನೆ ಮಾಲೀಕರು ಬೆಲೆಯನ್ನು ಹೆಚ್ಚಿಸಲು ಮುಂದೆ ಬಂದಿಲ್ಲ. ಕಾರ್ಖಾನೆಗಳು ವಿದ್ಯುತ್‌ ಉತ್ಪಾದಿಸುತ್ತಿದ್ದರೂ, ಸರ್ಕಾರ ಖರೀದಿಸಲು ಸಿದ್ಧವಿಲ್ಲ ಎಂದು ಜೋಶಿ ರಾಜ್ಯ ಸರ್ಕಾರದ ನೀತಿಗಳನ್ನು ಟೀಕಿಸಿದರು.

ಸರ್ಕಾರದ ಹಣಕಾಸಿನ ದುರ್ವ್ಯವಸ್ಥೆಯಿಂದ ರೈತರ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಿದೆ. ಸರ್ಕಾರ ತನ್ನ ಖಾಲಿಯಾದ ಖಜಾನೆ ತುಂಬಿಕೊಳ್ಳಲು ತನ್ನ ಭರವಸೆ ಯೋಜನೆಗಳ ಹೊರೆಗಾಗಿ ರಸ್ತೆ ತೆರಿಗೆ ಹೆಚ್ಚಿಸಿದೆ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ ₹3 ಹೆಚ್ಚುವರಿ ಸೆಸ್ ವಿಧಿಸಿದೆ. ಇದರಿಂದ ಕಟಾವು ಮತ್ತು ಸಾರಿಗೆ ವೆಚ್ಚಗಳು ಹೆಚ್ಚಿವೆ ಎಂದರು.

ರಾಜ್ಯ ಸರ್ಕಾರವು ಡೀಸೆಲ್‌ ಸೆಸ್‌ನಿಂದ ಸುಮಾರು ₹7,500 ಕೋಟಿ ಸಂಗ್ರಹಿಸಿದೆ. ಆದರೆ, ರೈತರಿಗೆ ಅದರ ಲಾಭ ನೀಡಿಲ್ಲ. ಹಿಂದಿನ ವರ್ಷ ಸಾರಿಗೆ ವೆಚ್ಚ ಪ್ರತಿ ಟನ್ನಿಗೆ ₹550 ಇದ್ದು, ಈ ವರ್ಷ ಅದು ₹790ಕ್ಕೆ ಏರಿದೆ. ಈ ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಸರ್ಕಾರವೇ ಪೂರ್ಣವಾಗಿ ಹೊಣೆಗಾರ ಎಂದರು.

ಕಬ್ಬಿನ ಬಾಕಿ ಪಾವತಿ ವಿಚಾರವಾಗಿ ಮಾತನಾಡಿದ ಅವರು, ಎನ್‌ಡಿಎ ಸರ್ಕಾರ 2017ರಲ್ಲಿ ಬಾಕಿ ತೆರವು ನೀತಿ ಜಾರಿಗೆ ತಂದ ಬಳಿಕ ದೇಶಾದ್ಯಂತ ಪಾವತಿಗಳ ಪ್ರಮಾಣ ಶೇ. 97ರಷ್ಟು ತಲುಪಿದ್ದು, ಕಳೆದ ವರ್ಷ ಶೇ. 99.99ಕ್ಕೆ ತಲುಪಿದೆ. ಆದರೆ, ಯುಪಿಎ ಸರ್ಕಾರ 2014ರಲ್ಲಿ ₹35,000 ಕೋಟಿ ಬಾಕಿ ಉಳಿಸಿತ್ತು ಎಂದು ಹೇಳಿದರು. ಕಬ್ಬು ಬೆಳೆಗಾರರಿಗೆ ನೆರವಾಗಲು ಮೋದಿ ಸರ್ಕಾರ ₹16,500 ಕೋಟಿ ಪ್ರೋತ್ಸಾಹ ಪ್ಯಾಕೇಜ್‌ ನೀಡಿತ್ತು ಎಂದು ಜೋಶಿ ಹೇಳಿದರು.

ದೂರುವ ಅಭ್ಯಾಸ

ಕಾಂಗ್ರೆಸ್ ನಾಯಕರಿಗೆ ಎಲ್ಲ ವಿಷಯಗಳಿಗೂ ಕೇಂದ್ರವನ್ನು ದೂರುವುದು ಅಭ್ಯಾಸವಾಗಿ ಹೋಗಿದೆ. ಇದು ರಾಹುಲ್‌ ಗಾಂಧಿ ಸೇರಿ ದೆಹಲಿಯಲ್ಲಿರುವ ತಮ್ಮ ನಾಯಕರನ್ನು ತೃಪ್ತಿ ಪಡಿಸಲು ಮಾತ್ರ. ಒಂಭತ್ತು ದಿನಗಳ ಕಾಲ ಸುಮ್ಮನೆ ಕೂತು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ದರ ನಿಗದಿ ಮಾಡಿದ್ದು, ಅದನ್ನು ಬರೀ ಮಾತಿನಲ್ಲಿ ಮಾತ್ರವಲ್ಲ, ಕಾರ್ಯದಲ್ಲಿಯೂ ತೋರಿಸಿ ಕಬ್ಬು ಬೆಳೆಗಾರರ ನಿಜವಾದ ಬೇಡಿಕೆಗಳನ್ನು ಶೀಘ್ರದಲ್ಲೇ ಪೂರೈಸಬೇಕು ಎಂದು ಜೋಶಿ ಆಗ್ರಹಿಸಿದರು.

ಶಾಸಕ ಅರವಿಂದ ಬೆಲ್ಲದ್ ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಪ್ರಮೋದ ಕಾರಕೂನ, ಶಂಕರ ಶೆಳಕೆ, ಶಂಕರ ಮುಗದ ಮತ್ತಿತರರಿದ್ದರು.ದ್ವೇಷ ಮಾಡಲು ಅಧಿಕಾರ ನೀಡಿಲ್ಲ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಕೇಂದ್ರವನ್ನು, ಪ್ರಧಾನಿ ಮೋದಿ ಅವರನ್ನು ದ್ವೇಷ ಮಾಡಲು ರಾಜ್ಯದ ಜನರು ಅಧಿಕಾರ ನೀಡಿಲ್ಲ. ನಿಮ್ಮ ದುರುದ್ದೇಶಗಳಿಂದ ರಾಜ್ಯದಲ್ಲಿ ಮೂರ್ಖತನದ ಅಧಿಕಾರ ಮಾಡುತ್ತಿದ್ದೀರಿ. ನಿಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಿದ್ದರೂ ಮತ್ತೊಬ್ಬರ ಎಲೆಯಲ್ಲಿನ ನೊಣ ಹುಡುಕುತ್ತಿದ್ದೀರಿ. ಒಟ್ಟಾರೆ ನಿಮ್ಮ ತಪ್ಪಿನಿಂದ ಕೇಂದ್ರದತ್ತ ಬೊಟ್ಟು ಮಾಡುವುದನ್ನು ಕೈ ಮುಖಂಡರು ಇನ್ನಾದರೂ ನಿಲ್ಲಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಹೇಳಿದ್ದಾರೆ.