ಕಬ್ಬು ಕಟಾವು ವಿಳಂಬ: ವಿಷದ ಬಾಟಲ್ ಹಿಡಿದು ರೈತರ ಪ್ರತಿಭಟನೆ

| Published : Dec 25 2024, 12:46 AM IST

ಸಾರಾಂಶ

ಕಳೆದ 7-8 ತಿಂಗಳ ಹಿಂದೆಯೇ ಕಡಿಯಬೇಕಾದ ಕಬ್ಬನ್ನು ಇನ್ನೂ ಕಟಾವು ಮಾಡಿಲ್ಲ. ಹಲವು ಬಾರಿ ಮೇಲ್ವಿಚಾರಕರನ್ನು ಸಂಪರ್ಕಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಕಬ್ಬು ಒಣಗಿ ಹೋಗುತ್ತಿದೆ. 20 ದಿನದಲ್ಲಿ ಫ್ಯಾಕ್ಟರಿ ಬಂದ್ ಮಾಡಲಾಗುತ್ತಿದೆ ಎನ್ನವ ಆತಂಕವು ಎದುರಾಗಿದೆ. ಜೊತೆಗೆ ಕಬ್ಬು ಕಟಾವು ಕಾರ್ಮಿಕರು ದುಪ್ಪಟ್ಟು ಕೂಲಿ ಕೇಳುತ್ತಿದ್ದಾರೆ. ಸಾಲ ಮಾಡಿ ಕಬ್ಬು ಬೆಳೆದ ರೈತರು ಬದುಕುವುದಾದರೂ ಹೇಗೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಅವಧಿ ಮೀರುತ್ತಿದ್ದರೂ ಕಬ್ಬು ಕಟಾವು ಮಾಡಿಕೊಳ್ಳದ ಚಾಮುಂಡೇಶ್ವರಿ ಸಕ್ಕರೆ ಕಂಪನಿ ವಿರುದ್ಧ ತಾಲೂಕಿನ ಗಾಜನೂರು ಗ್ರಾಮದ ರೈತರು ಪಟ್ಟಣದ ಸುಲ್ತಾನ್ ರಸ್ತೆಯ ಚಾಂಷುಗರ್ ಕಂಪನಿಯ ಉಪ ವಿಭಾಗದ ಕಚೇರಿ ಎದುರು ವಿಷದ ಬಾಟಲ್ ಹಿಡಿದು ಪ್ರತಿಭಟನೆ ನಡೆಸಿದರು.

ಕಂಪನಿ ಉಪ ವಿಭಾಗದ ಕಚೇರಿ ಎದುರು ಆಗಮಿಸಿದ ರೈತರು ವಿಷದ ಬಾಟಲ್ ಹಿಡಿದು ಕಚೇರಿ ಎದುರು ಧರಣಿ ಕುಳಿತು ಬಾಗಿಲು ತೆಗೆಯಲು ಸಹ ಅಡ್ಡಿ ಪಡಿಸಿ ಕೂಡಲೇ ಕಬ್ಬು ಕಟಾವಿಗೆ ಅನುಮತಿ ನೀಡಬೇಕೆಂದು ಆಗ್ರಹಿಸಿದರು.

ಕಚೇರಿ ಟೇಬಲ್ ಮೇಲೆ ವಿಷದ ಬಾಟಲ್ ಇಟ್ಟಿಕೊಂಡೇ ಮಾತನಾಡಿದ ರೈತ ಮುಖಂಡರು, ಕಳೆದ 7-8 ತಿಂಗಳ ಹಿಂದೆಯೇ ಕಡಿಯಬೇಕಾದ ಕಬ್ಬನ್ನು ಇನ್ನೂ ಕಟಾವು ಮಾಡಿಲ್ಲ. ಹಲವು ಬಾರಿ ಮೇಲ್ವಿಚಾರಕರನ್ನು ಸಂಪರ್ಕಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಕಬ್ಬು ಒಣಗಿ ಹೋಗುತ್ತಿದೆ. 20 ದಿನದಲ್ಲಿ ಫ್ಯಾಕ್ಟರಿ ಬಂದ್ ಮಾಡಲಾಗುತ್ತಿದೆ ಎನ್ನವ ಆತಂಕವು ಎದುರಾಗಿದೆ. ಜೊತೆಗೆ ಕಬ್ಬು ಕಟಾವು ಕಾರ್ಮಿಕರು ದುಪ್ಪಟ್ಟು ಕೂಲಿ ಕೇಳುತ್ತಿದ್ದಾರೆ. ಸಾಲ ಮಾಡಿ ಕಬ್ಬು ಬೆಳೆದ ರೈತರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಎಜಿಎಂ ಮಹಾದೇವ ಪ್ರಭು ಸ್ಥಳಕ್ಕೆ ಆಗಮಿಸಿ ಮನವೊಲಿಸುವ ಪ್ರಯತ್ನ ನಡೆಸಿ ಉಳಿದಿರುವ ಎಲ್ಲಾ ಕಬ್ಬನ್ನು ಅರೆದ ನಂತರ ಕಾರ್ಖಾನೆಯನ್ನು ನಿಲ್ಲಿಸಲಾಗುವುದು. ರೈತರು ಆತಂಕ ಪಡಬೇಕಾಗಿಲ್ಲ. ತಕ್ಷಣದಿಂದಲೇ ಕಬ್ಬು ಕಟಾವು ಮಾಡಲು ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸತೀಶ್, ಮಂಜುನಾಥ್, ನಾಗರಾಜು, ಶ್ರೀನಿಧಿ, ಜಯಮ್ಮ, ಸಿದ್ದರಾಜು, ಬಸವರಾಜು, ವೆಂಕಟೇಶ್, ಮತ್ತಿತರರು ಇದ್ದರು.