ಕಬ್ಬು ದರ ಕಿಚ್ಚು: ರೈತರ ಆಕ್ರೋಶ ಇನ್ನಷ್ಟು ಹೆಚ್ಚು

| Published : Nov 06 2025, 03:00 AM IST

ಸಾರಾಂಶ

ಪ್ರತಿಟನ್‌ ಕಬ್ಬಿಗೆ ₹3500 ದರ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ ಬಳಿ ರೈತರು ನಡೆಸುತ್ತಿರುವ ಹೋರಾಟ ಬುಧವಾರ 7ನೇ ದಿನಕ್ಕೆ ಕಾಲಿಟ್ಟಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರತಿಟನ್‌ ಕಬ್ಬಿಗೆ ₹3500 ದರ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ ಬಳಿ ರೈತರು ನಡೆಸುತ್ತಿರುವ ಹೋರಾಟ ಬುಧವಾರ 7ನೇ ದಿನಕ್ಕೆ ಕಾಲಿಟ್ಟಿದೆ.

ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ರಾತ್ರಿಯೀಡಿ ಕೊರೆಯುವ ಚಳಿಯಲ್ಲೇ ರೈತರ ಜೊತೆಗೆ ಮಲಗಿದರು. ವಿಜಯೇಂದ್ರ ಬೆಂಬಲ ನೀಡಿರುವುದರಿಂದ ರೈತರ ಹೋರಾಟಕ್ಕೆ ಬಲಬಂದಂತಾಗಿದೆ.ರೈತರ ಪ್ರತಿಭಟನೆ ಜನಾಂದೋಲನ ಸ್ವರೂಪ ಪಡೆದುಕೊಂಡಿದ್ದು, ಲಕ್ಷಾಂತರ ರೈತರು ಪ್ರತಿಭಟನಾ ಸ್ಥಳಕ್ಕೆ ಧಾವಿಸುತ್ತಿದ್ದಾರೆ. ರೈತರು ರಾಜ್ಯ ಹೆದ್ದಾರಿ ‌ತಡೆದು ನಡೆಯುತ್ತಿರುವ ಪ್ರತಿಭಟನೆ ಕಿಚ್ಚು ಕೂಡ ಜೋರಾಗಿದೆ. ಪ್ರತಿಭಟನಾ ಟೆಂಟ್‌ ಪಕ್ಕದಲ್ಲೇ ಲಕ್ಷಾಂತರ ರೈತರಿಗೆ ಊಟ, ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಪ್ರತಿಭಟನಾಕಾರರಿಗೆ ತಮ್ಮ ಜಮೀನಿನಲ್ಲಿ ಬೆಳೆದ ತರಕಾರಿ, ಆಹಾರ ಧಾನ್ಯ, ಅಕ್ಕಿ, ತರಕಾರಿ, ಬೇಳೆ, ರೊಟ್ಟಿ ಹೀಗೆ ವಿವಿಧ ಧಾನ್ಯ ನೀಡುತ್ತಿದ್ದಾರೆ. ಒಂದೂವರೆ ಲಕ್ಷ ಜನರಿಗೆ ಅಡುಗೆ ಮಾಡಿ ಬಡಿಸಲು ಇನ್ನೂರು ಜನರು ಸಿದ್ಧಗೊಂಡಿದ್ದಾರೆ. ಇನ್ನು ಜಿಲ್ಲೆಯಾದ್ಯಂತ ರೈತರ ಹೋರಾಟದ ಕಿಚ್ಚು ಹೊತ್ತಿದೆ. ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಬೆಳಗಾವಿ, ಅಥಣಿ, ರಾಯಬಾಗ, ಹುಕ್ಕೇರಿ, ಚಿಕ್ಕೋಡಿಯಲ್ಲಿಯೂ ರೈತರ ಹೋರಾಟ ಮುಂದುವರೆದಿದೆ. ವಿವಿಧ ಸಂಘಟನೆಗಳು ಕೂಡ ರೈತರ ಹೋರಾಟಕ್ಕೆ ಸಾಥ್‌ ಕೊಟ್ಟಿವೆ.ಹೋರಾಟಕ್ಕೆ ರೈತ ಮಹಿಳೆಯರು ಸಾಥ್‌:

ಕಬ್ಬಿಗೆ ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ರೈತ ಮಹಿಳೆಯರು, ಮಕ್ಕಳು ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತ ಮಹಿಳೆಯರು ಹೋರಾಟಗಾರರಿಗೆ ಖಡಕ್‌ ರೊಟ್ಟಿ ವಿತರಿಸಿದರು. ಮಧ್ಯಾಹ್ನದ ಊಟಕ್ಕೆ ಸಾವಿರಾರು ಮಹಿಳೆಯರು ತಮ್ಮ ಮನೆಯಲ್ಲಿ ಅಡಿಗೆ ಮಾಡಿ, ತಲೆ ಮೇಲೆ ರೊಟ್ಟಿಹೊತ್ತು ತಂದು ರೈತರಿಗೆ ಊಟ ಬಡಿಸಿದರು. ರಾಯಬಾಗ ತಾಲೂಕಿನ ಮುಗಳಖೋಡ ಮತ್ತು ಹಂದಿಗುಂದ ಗ್ರಾಮದ ಮಹಿಳೆಯರು ರೊಟ್ಟಿ ಊಟ ಊಣಬಡಿಸಿದರು. ತಮಗೆ ಊಟ ಹಾಕಿದ ರೈತ ಮಹಿಳೆಯರಿಗೆ ಪ್ರತಿಭಟನಾನಿರತ ರೈತರು ಅಭಿನಂದನೆ ಸಲ್ಲಿಸಿದರು.ಜನ್ಮದಿನ ಧಿಕ್ಕರಿಸಿದ ವಿಜಯೇಂದ್ರ

ತಮ್ಮ ಜನ್ಮದಿನ ಧಿಕ್ಕರಿಸಿ ರೈತರ ಹೋರಾಟದಲ್ಲಿ ಅಹೋರಾತ್ರಿ ಭಾಗಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪ್ರತಿಭಟನಾ ಸ್ಥಳದಲ್ಲೇ ರೈತರು ಜನ್ಮದಿನದ ಶುಭ ಕೋರಿದರು. ರೈತರ ಪ್ರತಿಭಟನೆ ಸ್ಟೇಜ್‌ ಮೇಲೆಯೇ ವಿಜಯೇಂದ್ರ ಮಲಗಿದ್ದರು. ಮಧ್ಯರಾತ್ರಿ ವೇಳೆ ಅವರನ್ನು ಎಬ್ಬಿಸಿದ ರೈತರು ಜನ್ಮದಿನದ ಶುಭಕೋರಿದರು. ಇದೇ ವೇಳೆ ರೈತ ಮಹಿಳೆಯರಿಂದ ಆರತಿ ಬೆಳಗಿಸಿಕೊಳ್ಳಲು ವಿಜಯೇಂದ್ರ ನಿರಾಕರಿಸಿದರು. ಗುರ್ಲಾಪುರ ಗ್ರಾಮದ ರೈತ ವೇದಿಕೆ ಮುಂಭಾಗದಲ್ಲಿ ರೈತರಿಂದ ಕಬ್ಬು, ಬೆಲ್ಲ ಪಡೆಯುವ ಮೂಲಕ ಜನ್ಮದಿನ ಆಚರಿಸಿಕೊಂಡ ವಿಜಯೇಂದ್ರ ಅವರು, ರೈತರಿಗೆ ಧನ್ಯವಾದ ಸಲ್ಲಿಸಿದರು.

ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ವಿಜಯೇಂದ್ರ ಮಾಹಿತಿ ನೀಡಿದರು. ತಮಗೆ ಜನ್ಮದಿನದ ಶುಭಾಶಯ ಕೋರಲು ಕರೆ ಮಾಡಿದ್ದ ಅಮಿತ್‌ ಶಾ ಅವರಿಗೆ ನಾನು ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ. ಕಬ್ಬಿನ ದರ ನಿಗದಿಗೆ ಆಗ್ರಹಿಸಿ ರೈತರು ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.