ಬಾಕಿ ಹಣ ಪಾವತಿಸದ ಹೊರತು ಕಾರ್ಖಾನೆಗೆ ಕಬ್ಬು ನೀಡಲ್ಲ

| Published : Oct 09 2025, 02:01 AM IST

ಸಾರಾಂಶ

ಯಂತ್ರ ಹೊರಗಡೆ ಅಳವಡಿಸಬೇಕು ಹಾಗೂ ಬಾಕಿ ಹಣ ಪಾವತಿಸದ ಹೊರತು ಕಾರ್ಖಾನೆಗೆ ಕಬ್ಬನ್ನು ನೀಡಲಾರೆವು ಎಂದು ಕಬ್ಬು ಬೆಳೆಗಾರರು ಎಚ್ಚರಿಸಿದ್ದಾರೆ.

ಕಾರ್ಖಾನೆಗೆ ಕಬ್ಬು ನೀಡದಿರಲೂ ಕಬ್ಬು ಬೆಳೆಗಾರರ ಎಚ್ಚರಿಕೆ

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೂರು ತಾಸು ಸಭೆ ನಡೆದರೂ ಮೂಡದ ಸ್ಪಷ್ಟ ನಿರ್ಧಾರ

ಕನ್ನಡಪ್ರಭ ವಾರ್ತೆ ಹಳಿಯಾಳ

ಸರ್ಕಾರ ಸೂಚಿಸಿದಂತೆ ಕಾರ್ಖಾನೆಯ ಹೊರಗಡೆ ತೂಕದ ಯಂತ್ರ ಅಳವಡಿಸುವುದು ಹಾಗೂ ಕಬ್ಬಿನ ಬಾಕಿ ಪಾವತಿಸಲು ಈಐಡಿ ಪ್ಯಾರಿ ಕಾರ್ಖಾನೆಯವರು ಮತ್ತೇ ತೋರಿದ ಜಿಗುಟತನದ ಚೌಕಾಶಿ ಮಾತುಕತೆಗೆ ಸುತಾರಾಂ ಒಪ್ಪದ ಕಬ್ಬು ಬೆಳೆಗಾರರು ಯಂತ್ರ ಹೊರಗಡೆ ಅಳವಡಿಸಬೇಕು ಹಾಗೂ ಬಾಕಿ ಹಣ ಪಾವತಿಸದ ಹೊರತು ಕಾರ್ಖಾನೆಗೆ ಕಬ್ಬನ್ನು ನೀಡಲಾರೆವು ಎಂದು ಎಚ್ಚರಿಸಿದ್ದಾರೆ.

ಬುಧವಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಲಕ್ಷ್ಮೀಪ್ರಿಯಾ ಅಧ್ಯಕ್ಷತೆಯಲ್ಲಿ ತಾಲೂಕಾ ಆಡಳಿತ ಸೌಧದಲ್ಲಿ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯವರ ಸಭೆ ನಡೆಯಿತು. ಮೂರು ತಾಸುಗಳವರೆಗೂ ಸುದೀರ್ಘ ಸಭೆ ನಡೆದರೂ ಸರ್ಕಾರ ಸೂಚಿಸಿದಂತೆ ಕಬ್ಬು ಬೆಳೆಗಾರರ ನ್ಯಾಯಯುತವಾದ ಬೇಡಿಕೆಗಳಿಗೆ ಕಾರ್ಖಾನೆಯವರು ಸ್ಪಂದಿಸಲು ತಾಳಿದ ಮೀನಮೇಷ ಧೋರಣೆಯನ್ನು ವಿರೋಧಿಸಿ ಕಬ್ಬು ಬೆಳೆಗಾರರ ಬಿಗಿಪಟ್ಟಿನಿಂದಾಗಿ ಸಭೆಯು ಸ್ಪಷ್ಟ ನಿರ್ಧಾರಕ್ಕೆ ಬರದೇ ಮುಕ್ತಾಯಗೊಂಡಿತು.

ತೂಕದ ಯಂತ್ರಕ್ಕಾಗಿ ರೈತರ ಪಟ್ಟು:

ಸಭೆಯ ಅರಂಭದಲ್ಲಿ ತೂಕದ ಯಂತ್ರವನ್ನು ಕಾರ್ಖಾನೆ ಹೊರಗಡೆ ಆಳವಡಿಸಬೇಕೆಂದು ಕಬ್ಬು ಬೆಳೆಗಾರರು ವಾದಿಸಿದರು. ಕಬ್ಬು ಬೆಳೆಗಾರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸದ ಕಾರ್ಖಾನೆಯ ಆಡಳಿತ ಮಂಡಳಿಯ ಪ್ರಮುಖರು ಕಾರ್ಖಾನೆಯ ಹೊರಗಡೆ ತೂಕದ ಯಂತ್ರ ಅಳವಡಿಕೆಯಿಂದ ಉಂಟಾಗುವ ಸಂಚಾರ ಸಮಸ್ಯೆ ಸೇರಿದಂತೆ ಇತರ ಸಬೂಬಗಳನ್ನು ಹೇಳಲಾರಂಭಿಸಿದರು. ಕಾರ್ಖಾನೆಯವರ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ ಬೆಳೆಗಾರರ ಮುಖಂಡರು ಯಾವುದೇ ಕಾರಣಕ್ಕೂ ತೂಕದ ಯಂತ್ರ ಹೊರಗಡೆ ಅಳವಡಿಸಲೇ ಬೇಕು ಎಂದು ವಾದ ಮಂಡಿಸಿದರು. ಕಬ್ಬು ಬೆಳೆಗಾರರ ಒತ್ತಡಕ್ಕೆ ಮಣಿದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ತೂಕದ ಯಂತ್ರವನ್ನು ಹೊರಭಾಗದಲ್ಲಿ ಅಳವಡಿಸಲು ಒಲ್ಲದ ಮನಸ್ಸಿನಿಂದಲೇ ಭರವಸೆ ನೀಡಿದರು.

ಆದರೆ ಆಡಳಿತ ಮಂಡಳಿಯವರ ಭರವಸೆಗೆ ಸಂದೇಹ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾಗುವ ಮೊದಲೇ ತೂಕದ ಯಂತ್ರವನ್ನು ಹೊರಭಾಗದಲ್ಲಿ ಸ್ಥಾಪಿಸಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿಗಳು ತೂಕದ ಯಂತ್ರ ಅಳವಡಿಸಲು ಸ್ಥಳ ಪರಿಶೀಲನೆ ಮಾಡಲಾಗಿದ್ದು, ತೂಕದ ಯಂತ್ರ ಸ್ಥಾಪನಯ ಕಾಮಗಾರಿ ಆರಂಭಿಸುವಂತೆ ಕಾರ್ಖಾನೆಯವರಿಗೆ ಆದೇಶಿಸಿದರು. ಬಾಕಿ ಹಣ ಪಾವತಿಗೆ ಕ್ರಮ:

ಕಾರ್ಖಾನೆಯವರು ಕಬ್ಬು ಕಟಾವು ಮತ್ತು ಸಾಗಾಟಕ್ಕಾಗಿ ಆಕರಿಸಿದ ಹೆಚ್ಚುವರಿ ಹಣ ಪ್ರತಿ ಟನ್‌ಗೆ ₹256 ಪಾವತಿಸಬೇಕೆಂಬ ಬೇಡಿಕೆಯನ್ನು ಕಬ್ಬು ಬೆಳೆಗಾರರ ಮಂಡಿಸಿದರು. ಸಕ್ಕರೆ ಆಯುಕ್ತರು ₹ 256 ಪಾವತಿಸಲು ಹೊರಡಿಸಿದ ಆದೇಶಕ್ಕೆ ಮೊದಲು ಸಮ್ಮತಿ ಸೂಚಿಸಿದ ಕಾರ್ಖಾನೆಯವರು ಬಾಕಿ ಪಾವತಿಸದೇ ಆಯುಕ್ತರ ಆದೇಶಕ್ಕೆ ನ್ಯಾಯಾಲಯದಿಂದ ತಂದ ತಡೆಯಾಜ್ಞೆ ತೆರವಾಗಿದ್ದರು, ಹಣ ಪಾವತಿಸುತ್ತಿಲ್ಲ ಎಂದು ಆರೋಪಿಸಿದರು. ರೈತರ ಆರೋಪಗಳಿಗೆ ಉತ್ತರಿಸಿದ ಕಾರ್ಖಾನೆಯವರು ₹256 ಬಾಕಿ ಪಾವತಿಯ ವಿಷಯದ ಬಗ್ಗೆ ನಮ್ಮ ಕಾನೂನು ವಿಭಾಗದೊಂದಿಗೆ ಚರ್ಚೆ ನಡೆಸುತ್ತೆವೆ ಎಂದರು.

ಇಬ್ಬರ ವಾದವನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸಕ್ಕರೆ ಆಯುಕ್ತರ ಆದೇಶದಂತೆ ಕಾರ್ಖಾನೆಯವರು ಹಣ ಪಾವತಿಸಬೇಕು, ಆದರೇ ಈವರೆಗೂ ಪಾವತಿಸಿಲ್ಲ, ಈ ಕುರಿತು ಜಿಲ್ಲಾಡಳಿತವು ಆಯುಕ್ತರಿಗೆ ಪತ್ರ ಬರೆದಿದೆ, ಒಂದು ವಾರದೊಳಗೆ ಸಕ್ಕರೆ ಆಯುಕ್ತರು ನಮಗೆ ನಿರ್ದೇಶನ ನೀಡಲಿದ್ದಾರೆ, ಅವರ ನಿರ್ದೇಶನದಂತೆ ಬಾಕಿ ಹಣ ಪಾವತಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಇತರ ಬೇಡಿಕೆಗಳು:

ತಾಲೂಕಿನಾದ್ಯಂತ ಹದಗೆಟ್ಟಿರುವ ರಸ್ತೆ ದುರಸ್ತಿ, ಕಾಡಂಚಿನ ಹೊಲಗದ್ದೆಗಳಿಗೆ ವನ್ಯಪ್ರಾಣಿಗಳ ಹಾವಳಿ, ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪನೆಯ ಕುರಿತು ಮಂಡಿಸಿದ ಬೇಡಿಕೆಗಳಿಗೆ ಜಿಲ್ಲಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಎಸ್ಪಿ ದೀಪನ್ ಎಂ.ಎನ್., ಅಪರ್ ಜಿಲ್ಲಾಧಿಕಾರಿ ಸಾಜೀದ ಮುಲ್ಲಾ, ಕಾರವಾರ ಎಸಿ ಶ್ರವಣಕುಮಾರ, ಧಾರವಾಡ ಎಸಿ ಶಾರುಖ ಹುಸೇನ್ಮ, ಡಿವೈಎಸ್ಪಿ ಶಿವಾನಂದ ಮದರಖಂಡಿ, ರೈತ ಮುಖಂಡರಾದ ಶಂಕರ ಕಾಜಗಾರ, ಅಶೋಕ ಮೇಟಿ, ಕುಮಾರ ಬೊಬಾಟೆ, ನಾಗೇಂದ್ರ ಜಿವೋಜಿ, ಧಾರವಾಡ ಜಿಲ್ಲಾ ರೈತಪ್ರಮುಖರಾದ ಮಹೇಶ ಬೆಳಗಾಂವಕರ, ಪರಶುರಾಮ ಎತ್ತಿನಗುಡ್ಡ ಹಾಗೂ ನೂರಾರು ರೈತರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.