ಕುದೂರು: ಸುಗ್ಗನಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು
ಕುದೂರು: ಸುಗ್ಗನಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಬಾಲಕೃಷ್ಣ, ಇಂದು ನಾಡಿನ 108 ದೇವಾಲಯದಲ್ಲಿ ನರಸಿಂಹಸ್ವಾಮಿಯ ರಥೋತ್ಸವ ಇರುತ್ತದೆ ಎಂಬುದೇ ಇಲ್ಲಿನ ಏಕ ನಡಾವಳಿಗೆ ಸಾಕ್ಷಿಯಾಗಿದೆ. ಪುರಾಣ ಪ್ರಸಿದ್ದ ಸ್ಥಳ ಸುಗ್ಗನಹಳ್ಳಿ ದೇವಾಲಯವನ್ನು ಭಕ್ತ ಪ್ರಹ್ಲಾದರ ಕಾಲದಲ್ಲಿ ಇದರ ಸ್ಥಾಪನೆ ಆಯಿತು ಎಂಬುದನ್ನು ಪುರಾಣಗಳು ಹೇಳುತ್ತವೆ ಎಂದರು.ರಥೋತ್ಸವ ಎಷ್ಟೊತ್ತಿಗೆ ಎಳೆಯಬೇಕೆಂದು ಪಂಚಾಂಗದಿಂದ ತೀರ್ಮಾನವಾದರೂ ಇದಕ್ಕೆ ಪೂರಕವಾಗಿ ಮೊದಲೇ ನಿರ್ಧರಿಸಿದಂತೆ ಗರುಡಪಕ್ಷಿಯೂ ರಥೋತ್ಸವದ ಮೇಲ್ಪಾಭಾಗದಲ್ಲಿ ಪ್ರದಕ್ಷಿಣೆ ಹಾಕಿದ ನಂತರವೇ ರಥವನ್ನು ಎಳೆಯುವ ಸಂಪ್ರದಾಯ ಎಂತಹವರಿಗೂ ಬೆರಗು ಮೂಡಿಸುತ್ತದೆ ಎಂದು ಹೇಳಿದರು.
ಒಂದು ಜಾತ್ರೆ ನಡೆಯುವುದರಿಂದ ಬಾಂಧವ್ಯಗಳು ಗಟ್ಟಿಯಾಗುವುದರ ಜೊತೆಗೆ ನೂರಾರು ರೀತಿಯ ಸಾವಿರಾರು ವ್ಯಾಪಾರಿಗಳಿಗೆ ಬದುಕಾಗುತ್ತದೆ. ಇಂದಿನ ಮೊಬೈಲ್ ಕಂಪ್ಯೂಟರ್ ನಡುವೆಯೂ ಜಾತ್ರೆಯ ಪೀಪಿ, ಬೊಂಬೆ, ಕಡ್ಲೆಪುರಿ, ಬತಾಸು, ಜಿಲೇಬಿ ಮಕ್ಕಳ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.ಸಂಸದ ಡಾ.ಮಂಜುನಾಥ್ ಮಾತನಾಡಿ, ಇದೊಂದು ಅತ್ಯಂತ ಶಕ್ತಿದಾಯಕ ಸ್ಥಳವಾಗಿದೆ. ಜಾತ್ರೆಗಳ ಸಂಭ್ರಮ ಸಡಗರ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಮಹತ್ವ ಕಾಣುತ್ತಿದೆ. ಇಂದಿನ ತರುಣ ಜನರು ಇಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ಸ್ವ ಆಸಕ್ತಿಯಿಂದ ಭಾಗಿಯಾಗುತ್ತಿರುವುದು ಒಳ್ಳೆಯ ಸೂಚನೆಗಳು ಎಂದು ಹೇಳಿದರು.
ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ನಾಡಿನ ಹಿರಿಯರು ರೂಪಿಸಿದ ಜಾತ್ರಾ ಸಂಪ್ರದಾಯ ಎಂತಹ ಕಠಿಣ ಮನಸುಗಳನ್ನು ಮೆದು ಮಾಡುತ್ತದೆ. ಶಾಶ್ವತ ಶತೃತ್ವಕ್ಕೆ ತೆರೆ ಎಳೆಯುತ್ತದೆ. ಒತ್ತಡದ ಬದುಕಿನಿಂದ ಹೊರಗೆ ಬಂದು ಹಗುರಾಗಲು ಇಂತಹ ಜಾತ್ರೆಗಳು ಬಹಳ ಮಹತ್ವ ಪಾತ್ರ ವಹಿಸುತ್ತವೆ. ದೇವಾಲಯದ ಹಿಂಭಾಗದಲ್ಲಿರುವ ಬದರೀವೃಕ್ಷ ಐದು ಋಷಿಮುನಿಗಳು ತಪ ಮಾಡಿದ ಸಾಕ್ಷಿಯಾಗಿ ಹುಟ್ಟಿ ಐದು ಕವಲುಗಳಾಗಿ ಹುಟ್ಟಿರುವುದು ನಿಜಕ್ಕೂ ವಿಸ್ಮಯವಾಗಿದೆ ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಸುಗ್ಗನಹಳ್ಳಿಯ ಜಾತ್ರಾ ಅಂಗವಾಗಿ ನಡೆಯುವ ದನಗಳ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಮಾತ್ರವಲ್ಲದೆ ನೆರೆಯ ತಮಿಳುನಾಡು ಮತ್ತು ಆಂದ್ರಪ್ರದೇಶದಿಂದಲೂ ಇಲ್ಲಿಗೆ ರಾಸುಗಳು ಬರುತ್ತವೆ. ಇಲ್ಲಿನ ಜನರ ಪರಿಸರ ಪ್ರಜ್ಞೆಗೆ ಸಾಕ್ಷಿಯಾಗಿ ನೂರಾರು ಮರಗಳ ತೋಪನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬರುತ್ತಿರುವುದೇ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಾಲಯದ ಸುತ್ತಲೂ ವಿವಿಧ ಜನಾಂಗದವರಿಂದ ಏರ್ಪಡಿಸಿದ್ದ ಅರವಂಟಿಕೆಗಳಿಂದ ಅನ್ನದಾನ ಏರ್ಪಡಿಸಲಾಗಿತ್ತು. ಮಾಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಂಗಧಾಮಯ್ಯ, ದೇವಾಲಯದ ಪ್ರದಾನ ಅರ್ಚಕ ನರಸಿಂಹಭಟ್ಟರು, ಪಾರುಪತ್ತೇದಾರ ಸಂಪತ್ಕುಮಾರ್, ಲಾಯರ್ ಪಾಪಣ್ಣ, ಕುದೂರು ಮಂಜುನಾಥ್ ರಾಮಯ್ಯ ಮತ್ತಿತರರು ಹಾಜರಿದ್ದರು.5ಕೆಆರ್ ಎಂಎನ್ 6,7.ಜೆಪಿಜಿ
6.ಮಾಗಡಿ ತಾಲೂಕು ಸುಗ್ಗನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಬ್ರಹ್ಮರಥೋತ್ಸವ ನೆರವೇರಿತು.7.ಸುಗ್ಗನಹಳ್ಳಿಯ ಪ್ರಧಾನ ದೇವತಾ ಮೂರ್ತಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ.