ಸಾರಾಂಶ
- ಹೊನ್ನಾಳಿ ಸಭೆಯಲ್ಲಿ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಿಗೆ ಮುಖಂಡ ರೇಣುಕಾಚಾರ್ಯ ಸಲಹೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್ ಅಧಿಕಾರಾವಧಿ ಮುಕ್ತಾಯವಾಗಲಿದೆ. ಈ ಸ್ಥಾನಕ್ಕೆ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಹಾಗೂ ಎಲ್ಲರನ್ನೂ ಸಹಮತದಿಂದ ಜೊತೆಗೆ ಕೊಂಡೊಯ್ಯುವ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗಿದೆ. ಈ ಹಿನ್ನೆಲೆ ಬಿಜೆಪಿ ಜಿಲ್ಲಾ ಮತ್ತು ರಾಜ್ಯಮಟ್ಟದ ಮುಖಂಡರು ಸಭೆಗೆ ಆಗಮಿಸಿದ್ದು, ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳು ತಮ್ಮ ಹೆಸರನ್ನು ಮುಕ್ತವಾಗಿ ತಿಳಿಸಬೇಕು ಎಂದು ಮಾಜಿ ಸಚಿವ, ಬಿಜೆಪಿ ಮುಖಡ ಎಂ.ಪಿ. ರೇಣುಕಾಚಾರ್ಯ ಹೇಳಿದರು.ಪಕ್ಷದ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್ ನಿವಾಸದಲ್ಲಿ ಶುಕ್ರವಾರ ನೂತನ ಅಧ್ಯಕ್ಷರ ಹೆಸರು ಆಯ್ಕೆ ಹಿನ್ನೆಲೆ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಈ ಹಿಂದೆ ತಾಲೂಕು ಹಂತದಲ್ಲಿಯೇ ಪಕ್ಷದ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಅಧ್ಯಕ್ಷರ ಆಯ್ಕೆ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದೆ. ತಾಲೂಕು ಹಂತದಲ್ಲಿ ಅಧ್ಯಕ್ಷ ಅಕಾಂಕ್ಷಿಗಳ ಪಟ್ಟಿಯನ್ನು ಜಿಲ್ಲಾ ಹಂತಕ್ಕೆ ಕಳುಹಿಸಬೇಕಾಗಿದೆ. ಇದರಲ್ಲಿ ಯಾವುದೇ ರೀತಿಯ, ಯಾರ ಹಸ್ತಕ್ಷೇಪವೂ ಇರುವುದಿಲ್ಲ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಾಗಿ ಅರಕೆರೆ ನಾಗರಾಜ್, ಡಿ.ಎಂ. ಗಿರೀಶ್ ದೊಡ್ಡೇರಿ, ಅನಿಲ್ ಕುಮಾರ್ ಕುಂದೂರು ಹಾಗೂ ತರಗನಹಳ್ಳಿ ಟಿ.ಜಿ.ರಮೇಶ್ ಗೌಡ ಹೆಸರು ನೋಂದಾಯಿಸಿದ್ದೀರಿ. ನೀವೆಲ್ಲರೂ ಒಂದೆಡೆ ಸೇರಿ ಚರ್ಚಿಸಿ, ಒಬ್ಬರ ಹೆಸರನ್ನು ಅಂತಿಮಗೊಳಿಸಿಕೊಳ್ಳಿ. ಬಳಿಕ ನಾನೂ ಸೇರಿದಂತೆ ಇಲ್ಲಿ ಉಪಸ್ಥಿತರಿರುವ ಜಿಲ್ಲಾ ಮುಖಂಡರು ನೀವು ಸೂಚಿಸುವ ವ್ಯಕ್ತಿ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಳಿಸಲು ಜಿಲ್ಲಾ ಸಮಿತಿಗೆ ತಲುಪಿಸುತ್ತೇವೆ. ಆನಂತರ ಜಿಲ್ಲಾ ಸಮಿತಿಯಿಂದ ಆ ಹೆಸರನ್ನು ಅಂಗೀಕರಿಸಿ, ರಾಜ್ಯ ವರಿಷ್ಠರೊಂದಿಗೆ ಚರ್ಚಿಸಿ, ಹೆಸರು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.ಬಸ್ ದರ ಏರಿಕೆಗೆ ಖಂಡನೆ:
ಸಭೆಯಲ್ಲಿ ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಸ್ ದರವನ್ನು ಶೇ.15ರಷ್ಟು ಏರಿಕೆ ಮಾಡುವ ನಿರ್ಧಾರ ಕೈಗೊಂಡಿದೆ. ಇದು ತೀವ್ರ ಖಂಡನೀಯ. ಒಂದು ಕಡೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ಹೇಳುತ್ತಾರೆ, ಇನ್ನೊಂದೆಡೆ ಪುರುಷರಿಗೆ ಶೇ.15ರಷ್ಟು ಬಸ್ ಪ್ರಯಾಣ ದರ ಏರಿಸಿದ್ದು ಅತ್ಯಂತ ದುರಾದೃಷ್ಟಕರ ಸಂಗತಿ. ಮುಂದಿನ ದಿನಗಳಲ್ಲಿ ಇಒದರ ವಿರುದ್ಧ ಉಗ್ರವಾದ ಹೋರಾಟ ನಡೆಸಲಾಗುವುದು ಎಂದ ಅವರು, ಗುತ್ತಿದಾರನ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ನೈತಿಕ ಹೊಣೆ ಹೊತ್ತು ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಮಾಜಿ ಶಾಸಕ, ಜಿಲ್ಲಾ ಚುನಾವಣಾ ಸಹ ಉಸ್ತುವಾರಿ ರಾಜೇಶ್, 3 ಜಿಲ್ಲೆಗಳ ಚುನಾವಣಾ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ದತ್ತಾತ್ರೇಯ, ಜಿಲ್ಲಾ ಅಧ್ಯಕ್ಷ ರಾಜಶೇಖರ್, ದಾವಣಗೆರೆ ಜಿಲ್ಲಾ ಉಸ್ತುವಾರಿ ಭೈರಪ್ಪ, ತಾಲೂಕು ಉಸ್ತುವಾರಿ ಕಡ್ಲೆಬಾಳು ಧನಂಜಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣೇಶ್, ಸಂಘಟನಾ ಕಾರ್ಯದರ್ಶಿ ಪಿ.ಸಿ.ಶ್ರೀನಿವಾಸ್, ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಕೆ.ಪಿ.ಕುಬೇಂದ್ರಪ್ಪ, ಎಸ್.ಎಸ್. ಬೀರಪ್ಪ, ಶಿವಾನಂದ್, ಪಾಲಾಕ್ಷಪ್ಪ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಬಿಜೆಪಿ ಮುಖಂಡರು ಇದ್ದರು.
- - - -3ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್ ನಿವಾಸದಲ್ಲಿ ಶುಕ್ರವಾರ ನೂತನ ಅಧ್ಯಕ್ಷರ ಹೆಸರು ಆಯ್ಕೆಗೆ ಕರೆಯಲಾಗಿದ್ದ ಜಿಲ್ಲಾ ಮತ್ತು ತಾಲೂಕು ಬಿಜೆಪಿ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು, ಜಿಲ್ಲಾ, ತಾಲೂಕು ಮುಖಂಡರು, ಕಾರ್ಯಕರ್ತರು ಇದ್ದರು.