ಸುಹಾಸ್‌ ಹತ್ಯೆ : ಆರೋಪಗಳಿಗೆ ಸ್ಪೀಕರ್‌ ಖಾದರ್‌ ಸ್ಪಷ್ಟೀಕರಣ

| N/A | Published : May 06 2025, 12:23 AM IST / Updated: May 06 2025, 12:35 PM IST

UT Khader
ಸುಹಾಸ್‌ ಹತ್ಯೆ : ಆರೋಪಗಳಿಗೆ ಸ್ಪೀಕರ್‌ ಖಾದರ್‌ ಸ್ಪಷ್ಟೀಕರಣ
Share this Article
  • FB
  • TW
  • Linkdin
  • Email

ಸಾರಾಂಶ

 ಜಿಲ್ಲೆಯ ಶಾಂತಿ ಹಾಗೂ ಅಭಿವೃದ್ದಿ ಬಯಸುವ ಜನರಿಗೆ ಈ ಸ್ಪಷ್ಟೀಕರಣ ನೀಡುತ್ತಿರುವುದಾಗಿ ಯು.ಟಿ. ಖಾದರ್‌ ಫರೀದ್‌ ಹೇಳಿದ್ದಾರೆ.

 ಮಂಗಳೂರು :  ಹಿಂದೂ ಕಾರ್ಯಕರ್ತ ಸುಹಾಸ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆ ಮೇಲಿನ ಟೀಕೆಗಳಿಗೆ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಸ್ಪಷ್ಟೀಕರಣ ನೀಡಿದ್ದಾರೆ.

ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವು ಕೊಲೆಯ ಹಿಂದೆ ಮತೀಯ ಕಾರಣವಿದೆ ಎಂಬ ವದಂತಿಗಳಿಂದ ಸ್ಥಳೀಯ ಮಟ್ಟದಲ್ಲಿ ಉದ್ವಿಗ್ನ ಪರಿಸ್ಥಿತಿ. ಆಗ ನಾನು ಮಾಧ್ಯಮದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ, ಈ ಘಟನೆ ರೌಡಿಗಳ ನಡುವಿನ ಗ್ಯಾಂಗ್ ವಾರ್ ಆಗಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿದ್ದೇನೆ. ಜತೆಗೆ, ಆರೋಪಿಗಳ ಬಂಧನದ ನಂತರವೇ ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಬೆಳಕಿಗೆ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದೆ.

ಘಟನೆ ನಡೆದ ಕೂಡಲೆ ಅದು ‘ಫಾಝಿಲ್ ಹತ್ಯೆಗೆ ಪ್ರತೀಕಾರ’ ಎಂಬ ಸುದ್ದಿ ಹಬ್ಬುತ್ತಿದ್ದಂತೆ, ಫಾಝಿಲ್ ತಂದೆ ಮತ್ತು ಸಹೋದರರು ನನಗೆ ಕರೆ ಮಾಡಿ, ಈ ಘಟನೆಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದನ್ನು ನಾನು ಮಾಧ್ಯಮದೊಂದಿಗೆ ಉಲ್ಲೇಖ ಮಾಡಿದ್ದೆನೇ ಹೊರತು, ಈ ಕೃತ್ಯದಲ್ಲಿ ಅವರ ಪಾತ್ರವಿಲ್ಲ ಎಂದು ಎಲ್ಲಿಯೂ ಹೇಳಿಲ್ಲ.

 ಜತೆಗೆ, ಅದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಂತಕರ ಬಂಧನಕ್ಕೆ ಪ್ರಯತ್ನಿಸುತ್ತಿದ್ದು, ಬಂಧನದ ನಂತರ ವಿಚಾರಣೆಯ ಮೂಲಕ ಈ ಕೃತ್ಯದಲ್ಲಿ ಯಾರೆಲ್ಲ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎಂದು ತಿಳಿದುಬರಲಿದೆ ಹಾಗೂ ಅಪರಾಧಿಗಳಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡಲಾಗುವುದು ಎಂಬುದನ್ನೂ ಸ್ಪಷ್ಟಪಡಿಸಿದ್ದೆ. ಅಂತಹ ಸಮಯದಲ್ಲಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಾನು ಪ್ರಯತ್ನಿಸಿದ್ದೇನೆಯೇ ಹೊರತು, ಯಾರ ಪರವಾಗಿಯೂ ಆಗಲಿ, ಯಾರ ವಿರೋಧವಾಗಿಯೂ ಆಗಲಿ ಮಾತನಾಡುವ ಉದ್ದೇಶ ನನ್ನದಾಗಿರಲಿಲ್ಲ. ಜಿಲ್ಲೆಯ ಶಾಂತಿ ಹಾಗೂ ಅಭಿವೃದ್ದಿ ಬಯಸುವ ಜನರಿಗೆ ಈ ಸ್ಪಷ್ಟೀಕರಣ ನೀಡುತ್ತಿರುವುದಾಗಿ ಯು.ಟಿ. ಖಾದರ್‌ ಫರೀದ್‌ ಹೇಳಿದ್ದಾರೆ.