ಬಜೆಟ್‌ ಅಧಿವೇಶನ ಬಳಿಕ ರಾಜ್ಯದ 2ನೇ ಭಾಷೆ ತುಳು ಬಗ್ಗೆ ತೀರ್ಮಾನ: ಸ್ಪೀಕರ್ ಯು.ಟಿ.ಖಾದರ್‌

| Published : Mar 16 2025, 01:45 AM IST

ಬಜೆಟ್‌ ಅಧಿವೇಶನ ಬಳಿಕ ರಾಜ್ಯದ 2ನೇ ಭಾಷೆ ತುಳು ಬಗ್ಗೆ ತೀರ್ಮಾನ: ಸ್ಪೀಕರ್ ಯು.ಟಿ.ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ತುಳುವನ್ನು ರಾಜ್ಯದ 2ನೇ ಭಾಷೆಯಾಗಿ ಮಾನ್ಯತೆ ನೀಡಲು ಬಜೆಟ್‌ ಅಧಿವೇಶನ ಬಳಿಕ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಚರ್ಚಿಸಿ ಅಂತಿಮ ರೂಪುರೇಷೆ ಹಾಕಿಕೊಳ್ಳಲಾಗುವುದು ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ತುಳುವನ್ನು ರಾಜ್ಯದ 2ನೇ ಭಾಷೆಯಾಗಿ ಮಾನ್ಯತೆ ನೀಡಲು ಬಜೆಟ್‌ ಅಧಿವೇಶನ ಬಳಿಕ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಚರ್ಚಿಸಿ ಅಂತಿಮ ರೂಪುರೇಷೆ ಹಾಕಿಕೊಳ್ಳಲಾಗುವುದು ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಶನಿವಾರ ಇಲ್ಲಿನ ತುಳು ಭವನದಲ್ಲಿ ಏರ್ಪಡಿಸಿದ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತುಳು ಭಾಷೆಗೆ ರಾಜ್ಯದಲ್ಲಿ ಮಾನ್ಯತೆ ನೀಡುವ ಬಗ್ಗೆ ಈಗಾಗಲೇ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ತುಳು ಭಾಷೆ ಮಂಗಳೂರಿನಿಂದ ಬ್ರಹ್ಮಾವರ ವರೆಗೆ ಮಾತ್ರ ಇದ್ದು, ನಂತರ ತುಳು ಅರ್ಥವಾಗುವುದಿಲ್ಲ. ಒಟ್ಟಾರೆ ತುಳು ಭಾಷಿಕರ ಸಂಖ್ಯೆ 10 ಲಕ್ಷಕ್ಕೂ ಕಡಿಮೆ ಇದೆ. ಕರಾವಳಿಯ ಹಿರಿಯರ, ತುಳು ವಿದ್ವಾಂಸರ ಸಲಹೆ, ಸೂಚನೆ ಪಡೆದುಕೊಂಡು ಸಿಎಂ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈಗ ಲಂಬಾಣಿ ಭಾಷಿಕರೂ ಅವರ ಭಾಷೆಗೆ ಮಾನ್ಯತೆ ನೀಡುವಂತೆ ಒತ್ತಡ ತರುತ್ತಿದ್ದಾರೆ. ತುಳುವರ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದರು.

ಉಳ್ಳಾಲದಲ್ಲಿ ‘ತುಳು ಗ್ರಾಮ’: ಹೊರಗಿನವರು ಮಂಗಳೂರಿಗೆ ಬಂದಾಗ ಅವರಿಗೆ ತುಳು ಭಾಷೆ, ಸಂಸ್ಕೃತಿ, ವಿಚಾರಗಳನ್ನು ನಮ್ಮ ಯುವಕರು ತಿಳಿಸಬೇಕು. ಅಂತಹ ಅವಕಾಶ ಈಗ ಕಾಣುತ್ತಿಲ್ಲ. ಅದಕ್ಕಾಗಿ ಉಳ್ಳಾಲದಲ್ಲಿ ಒಂದೂವರೆ ಎಕರೆ ಜಾಗದಲ್ಲಿ ‘ತುಳು ಗ್ರಾಮ’ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಪುಸ್ತಕ ಆಯೋಜನೆಯಾಗಲಿ: ಬೆಂಗಳೂರು ವಿಧಾನಸೌಧದಲ್ಲಿ ಪುಸ್ತಕ ಮೇಳ ಏರ್ಪಡಿಸಿದಂತೆ ಮುಂದೆ ಬೆಳಗಾವಿ ಸುವರ್ಣ ಸೌಧದಲ್ಲೂ ಪುಸ್ತಕ ಮೇಳ ಏರ್ಪಡಿಸಲು ಚಿಂತಿಸಲಾಗಿದೆ. ಬೆಂಗಳೂರಲ್ಲಿ ಪುಸ್ತಕ ಮೇಳ ಮುಂದೆಯೂ ಮುಂದುವರಿಯಲಿದೆ. ಈ ಬಾರಿ ಎಲ್ಲ ಅಕಾಡೆಮಿ ಹಾಗೂ ಪುಸ್ತಕ ಸಂಸ್ಥೆಗಳಿಗೆ ಉಚಿತವಾಗಿ ಸ್ಟಾಲ್‌ ಜೊತೆಗೆ ಆತಿಥ್ಯವನ್ನೂ ನೀಡಲಾಗಿದೆ ಎಂದರು. ಭಾಷಾ ನಾಶದ ಆತಂಕ:

ದಿಕ್ಸೂಚಿ ಭಾಷಣ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ರಾಜ್ಯದಲ್ಲಿ 230 ಸಣ್ಣ ಸಣ್ಣ ಭಾಷೆಗಳಿದ್ದು, ಅದರಲ್ಲಿ ತುಳು ದೊಡ್ಡ ಭಾಷೆ. ಕುಂದಾಪುರದ ಬೆಳಾರಿ ಭಾಷೆ ನಮ್ಮ ಕಣ್ಣ ಮುಂದೆಯೇ ನಶಿಸುತ್ತಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಸುಮಾರು 50,000 ಮಂದಿ ಕೊರಗ ಭಾಷೆ ಮಾತನಾಡುತ್ತಿದ್ದರು, ಸದ್ಯ 2,000 ಮಂದಿಗೆ ಇಳಿದಿದೆ. ಈ ರೀತಿಯ ಎಲ್ಲ ಭಾಷೆಗಳನ್ನು ಉಳಿಸಬೇಕು ಎಂದರು.

ತುಳು ಭಾಷೆ ಉಳಿವಿಗಾಗಿ ಜಾತಿ ಗಣತಿ ವೇಳೆ ಮಾತೃ ಭಾಷೆ ಕಾಲಂನಲ್ಲಿ ‘ತುಳು’ ಎಂದು ನಮೂದಿಸಬೇಕು. ತುಳು, ಬ್ಯಾರಿ, ಕೊಂಕಣಿ ಮತ್ತಿತರ ಭಾಷೆಗಳ ಉಳಿವಿಗೆ ಸಮಗ್ರ ಮಾಹಿತಿಯನ್ನು ಅಕಾಡೆಮಿಗಳು ಹೊಂದಿರಬೇಕು. ಇಲ್ಲದಿದ್ರೆ ಇನ್ನು 30 ವರ್ಷಗಳಲ್ಲಿ ದೇಶದಲ್ಲಿ ಶೇ.92ರಷ್ಟು ಮಂದಿ ಉಳಿಕೆಯಾಗುವ ಶೇ.6ರಷ್ಟು ಮಂದಿ ಮಾತನಾಡುವ ಭಾಷೆಯನ್ನಷ್ಟೇ ಮಾತನಾಡುವ ಪರಿಸ್ಥಿತಿ ಬರಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್‌ ಗಟ್ಟಿಕಾಪಿಕಾಡ್‌ ಅಧ್ಯಕ್ಷತೆ ವಹಿಸಿದ್ದರು.ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಉಮಾನಾಥ ಕೋಟ್ಯಾನ್‌, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್‌. ಗಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್‌ ಯು.ಎಚ್‌., ಪ್ರಮುಖರಾದ ಡಾ. ಅಮರಶ್ರೀ ಅಮರನಾಥ ಆಳ್ವ, ಡಾ. ಇಂದಿರಾ ಹೆಗ್ಡೆ, ಉಷಾ ರೈ ಮತ್ತಿತರರು ಇದ್ದರು.ಸದಸ್ಯರಾದ ನಾಗೇಶ್‌ ಕುಮಾರ್‌ ಉದ್ಯಾವರ ಸ್ವಾಗತಿಸಿದರು. ದುರ್ಗಾಪ್ರಸಾದ್‌ ರೈ ನಿರೂಪಿಸಿದರು.

------------------ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ2022ನೇ ಸಾಲಿನ ವಿವಿಧ ಕ್ಷೇತ್ರದಲ್ಲಿ ಪ್ರಶಸ್ತಿಯನ್ನು ಡಾ. ರಘಪತಿ ಕೆಮ್ತೂರು, ರತ್ನಮಾಲ ಪುರಂದರ ಬೆಂಗಳೂರು, ಪ್ರಭಾಕರ ಶೇರಿಗಾರ ಉಡುಪಿ, 2023ನೇ ಸಾಲಿನ ವಿವಿಧ ಕ್ಷೇತ್ರದಲ್ಲಿ ಪ್ರಶಸ್ತಿಯನ್ನು ಸಿಮಂತೂರು ಚಂದ್ರಹಾಸ ಸುವರ್ಣ ಮುಂಬಯಿ, ನೆಕ್ಕಿದಪುಣಿ ಗೋಪಾಲಕೃಷ್ಣ ಬೆಂಗಳೂರು, ಲಕ್ಷ್ಮಣ ಕಾಂತ ಕಣಂತೂರು, 2024ನೇ ಸಾಲಿನಲ್ಲಿ ಯಶವಂತ ಬೋಳೂರು, ಸರೋಜಿನಿ ಎಸ್‌. ಶೆಟ್ಟಿ, ಬಿ.ಕೆ. ದೇವರಾವ್‌, ಪುಸ್ತಕ ಪ್ರಶಸ್ತಿಯನ್ನು ರಾಜೇಶ್‌ ಶೆಟ್ಟಿದೋಟ, ರಘ ಇಡ್ಕಿದು, ರಾಜಶ್ರೀ ಟಿ. ರೈ ಪೆರ್ಲ, ಕುಶಾಲಾಕ್ಷಿ ವಿ. ಕುಲಾಲ್‌, ದತ್ತಿ ನಿಧಿ ಪುಸ್ತಕ ಪ್ರಶಸ್ತಿಯನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್‌, ಡಾ. ಚಿನ್ನಪ್ಪ ಗೌಡ, ಯಶೋದ ಮೋಹನ್‌, ಡಾ. ವಿ.ಕೆ. ಯಾದವ್‌, ಶಾರದಾ ಅಂಚನ್‌, ರಘುನಾಥ ವರ್ಕಾಡಿ ಅವರಿಗೆ ನೀಡಿ ಗೌರವಿಸಲಾಯಿತು.

--------------