ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಿರ್ಮಾಣ ಹಂತದ ಮನೆ ತೆರವು ಮಾಡಲು ಮುಂದಾಗಿದ್ದಕ್ಕೆ ವ್ಯಕ್ತಿಯೋರ್ವ ತಹಸೀಲ್ದಾರ್ ಅವರ ಹೆಸರು ಉಲ್ಲೇಖಿಸಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಗಿಡಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗಿಡಗಾನಹಳ್ಳಿ ನಿವಾಸಿ ಜಿ.ರಾಧಾಕೃಷ್ಣ ಎಂಬವರು ಆ್ಯಂಟಿಬಯೊಟಿಕ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಕ್ಕೂ ಮುನ್ನ ರಾಧಾಕೃಷ್ಣ ಅವರು ಡೆತ್‌ನೋಟ್ ಬರೆದಿಟ್ಟಿದ್ದಾರೆ. ತನ್ನ ಸಾವಿಗೆ ಮಂಚೇನಹಳ್ಳಿ ತಹಸೀಲ್ದಾರ್ ಪೂರ್ಣಿಮಾ ಹಾಗೂ ಜಿಲ್ಲಾಡಳಿತ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಸದ್ಯ ರಾಧಾಕೃಷ್ಣ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಧಾಕೃಷ್ಣ ವಿರುದ್ಧ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಸ್ವಂತ ಜಮೀನಿನ ಪಕ್ಕದಲ್ಲೇ ಸರ್ಕಾರಿ ಜಮೀನು ಇದ್ದು, ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಮಂಚೇನಹಳ್ಳಿ ತಹಸೀಲ್ದಾರ್ ಪೂರ್ಣಿಮಾ ಮನೆ ತೆರವು ಮಾಡಲು ಮುಂದಾಗಿದ್ದ ವೇಳೆ ರಾಧಾಕೃಷ್ಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಏನಿದು ಘಟನೆ:


ಜಿ.ರಾಧಾಕೃಷ್ಣ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ.ಇವರ ಪತ್ನಿ ಗ್ರಾಮ ಪಂಚಾಯಿತಿಯಲ್ಲಿ ನೌಕರರಾಗಿದ್ದಾರೆ. ಇನ್ನು ಗಿಡಗಾನಹಳ್ಳಿ ಗ್ರಾಮದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ರಾಧಾಕೃಷ್ಣಗೆ ಸ್ವಂತ ಜಮೀನಿದೆ. ಸ್ವಂತ ಜಮೀನಿನ ಪಕ್ಕದಲ್ಲಿ ಸರ್ಕಾರಿ ಜಮೀನಿದೆ. ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರಿಂದ ಮಂಚೇನಹಳ್ಳಿ ತಹಸೀಲ್ದಾರ್ ಪೂರ್ಣಿಮಾ ನಿರ್ಮಾಣ ಹಂತದ ಮನೆಯನ್ನು ತೆರೆವುಗೊಳಿಸಲು ಮುಂದಾಗಿದ್ದರು. ಇದರಿಂದ ಕೆರಳಿದ ರಾಧಾಕೃಷ್ಣ ತಹಸೀಲ್ದಾರರನ್ನು ಬೆದರಿಸಲು ಅವರ ವಿರುದ್ದವೇ ಡೆತ್‍ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಗಿಡಗಾನಹಳ್ಳಿ ಹಾಗೂ ಬುದ್ದಿವಂತನಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ರಾಜ್ಯಸರ್ಕಾರ, ಸರ್ಕಾರಿ ಕಟ್ಟಡಗಳ ಸಾರ್ವಜನಿಕ ಉದ್ದೇಶಕ್ಕಾಗಿ ಜಮೀನನ್ನು ಕಾಯ್ದಿರಿಸಿದೆ. ಸ್ಥಳೀಯ ಗೌಡಗೆರೆ ಗ್ರಾಪಂ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಂದಾಯ ಜಮೀನಿಗೆ ಖಾತೆ ಮಾಡಿ ಕಟ್ಟಡ ಪರವಾನಿಗೆ ನೀಡಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ತನಿಖೆಗೆ ಸೂಚಿಸಿದ್ದಾರೆ. ಇದರಿಂದ ನಮ್ಮನ್ನು ಎದುರಿಸಲು ರಾಧಾಕೃಷ್ಣ ಮುಂದಾಗಿದ್ದಾರೆಂದು ಮಂಚೇನಹಳ್ಳಿ ತಹಶೀಲ್ದಾರ್ ಪೂರ್ಣಿಮಾ ಸ್ಪಷ್ಟನೆ ನೀಡಿದ್ದಾರೆ.

ಸಿಕೆಬಿ-4 ತಹಸೀಲ್ದಾರ್ ಪೂರ್ಣಿಮಾ

ಸಿಕೆಬಿ-5 ಆತ್ಮಹತ್ಯೆಗೆ ಯತ್ನಿಸಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿ.ರಾಧಾಕೃಷ್ಣ