ಮಹಿಳೆಯರಿಗೆ ಸುಜಾತ ಪವಾರ್‌ ಮಾದರಿ: ಸಂಸದ ಶೆಟ್ಟರ ಚಾಲನೆ

| Published : Nov 10 2025, 01:30 AM IST

ಮಹಿಳೆಯರಿಗೆ ಸುಜಾತ ಪವಾರ್‌ ಮಾದರಿ: ಸಂಸದ ಶೆಟ್ಟರ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಒಬ್ಬ ಮಹಿಳೆ ಬೇರೆ ಬೇರೆ ರಂಗದಲ್ಲಿ ಸಾಧನೆ ಮಾಡಲು ಸುಜಾತಾ ಮಾದರಿಯಾಗಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ಹುಬ್ಬಳ್ಳಿ: ಕಲಾವಿದೆ ಸುಜಾತಾ ಪವಾರ್ ಅವರ ಮೈ ಜರ್ನಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಕಲಾಕೃತಿಗಳ ಮೂಲಕ ತಮ್ಮ ಭಾವನೆಗಳನ್ನು ಬಿಂಬಿಸಿದ್ದಾರೆ. ಒಬ್ಬ ಮಹಿಳೆ ಬೇರೆ ಬೇರೆ ರಂಗದಲ್ಲಿ ಸಾಧನೆ ಮಾಡಲು ಸುಜಾತಾ ಮಾದರಿಯಾಗಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿಯಲ್ಲಿ ಭಾನುವಾರದಿಂದ 23ರ ವರೆಗೆ ನಡೆಯಲಿರುವ ಕಲಾವಿದೆ ಸುಜಾತಾ ಪವಾರ್ ಅವರ ಮೈ ಜರ್ನಿ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದ ಕಲಾವಿದರನ್ನು ಒಂದೆಡೆ ಸೇರಿಸಿ ಬೃಹತ್‌ ಚಿತ್ರಸಂತೆ ನಡೆಸಿದರೆ, ಕಲಾವಿದರ ಕಲಾಕೃತಿ ಮಾರಾಟವಾಗುವುದಲ್ಲದೆ, ಅವರ ಸಾಧನೆಗಳು ಮತ್ತು ಪರಿಚಯ ಒಬ್ಬರಿಗೊಬ್ಬರಿಗೆ ಆಗುತ್ತದೆ. ಹುಬ್ಬಳ್ಳಿಗೆ ಹೆಸರು ಬರುವುದಲ್ಲದೆ, ಸ್ಥಳೀಯ ಕಲಾವಿದರ ಸಂಘಟನೆಯ ಕ್ರಿಯಾಶೀಲತೆಯೂ ಎಲ್ಲೆಡೆ ಹಬ್ಬುತ್ತದೆ. ಸಹಜವಾಗಿ ಕಲಾವಿದರಿಗೆ ಪ್ರೋತ್ಸಾಹವೂ ಸಿಕ್ಕಂತಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆರ್ಟ್ ಗ್ಯಾಲರಿಯ ಅಧ್ಯಕ್ಷ ಆರ್.ವಿ. ಗರಗ ಮಾತನಾಡಿ, ಸಾಕಷ್ಟು ಪ್ರತಿಭಟನೆ, ಒತ್ತಡದ ಪರಿಣಾಮ ಪಾಲಿಕೆಯಿಂದ ಕಲಾವಿದರಿಗೆ ಆರ್ಟ್‌ ಗ್ಯಾಲರಿ ದೊರಕಿದೆ. ಉತ್ತಮ ಸ್ಥಳಾವಕಾಶವಿದ್ದು, 300ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಬಹುದು. ಕಟ್ಟಡದ ಗೋಡೆಗಳು ಮಾಸಿದ್ದು, ಬಣ್ಣ ಬಳಿಯಬೇಕಿದೆ. ಇದಕ್ಕೆ ಸರ್ಕಾರ ನೆರವು ನೀಡಬೇಕೆಂದರು

ಕಲಾವಿದೆ ಸುಜಾತಾ ಪವಾರ್ ಮಾತನಾಡಿ, ತಮ್ಮ ಕಲಾ ಪಯಣ ನಡೆದು ಬಂದ ದಾರಿ ವಿವರಿಸಿದರು. ಉದ್ಯಮಿ ನಾರಾಯಣ ನಿರಂಜನ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹೇಶ ಬುರ್ಲಿ, ವೀರೇಶ ಉಪ್ಪಿನ, ರಮೇಶ ದಂಡಪ್ಪನವರ ಇದ್ದರು. ಕಲಾವಿದೆ ಸುಜಾತಾ ಪವಾರ ಅವರು ಬಿಡಿಸಿದ 90ಕ್ಕೂ ಹೆಚ್ಚು ವೈವಿಧ್ಯಮಯ ಕಲಾಕೃತಿಗಳು ನ. 23ರ ವರೆಗೆ ಪ್ರದರ್ಶನವಾಗಲಿವೆ.