ಗರ್ಭಾಶಯ ಕೊರಳಿನ ಕ್ಯಾನ್ಸರ್‌ನಿಂದ ಹೆಚ್ಚಿನ ಸಾವು

| Published : Feb 09 2024, 01:48 AM IST

ಸಾರಾಂಶ

ಮಹಿಳೆಯರಿಗೆ ಕ್ಯಾನ್ಸರ್ ಸ್ಕ್ರೀನಿಂಗ್‌ ಪರೀಕ್ಷೆಯು ಪ್ರತಿಯೊಬ್ಬ ಮಹಿಳೆಗೆ ಅವಶ್ಯ. ಸಂಸ್ಥೆಯು ಹಲವಾರು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಗರ್ಭಾಶದ ಕೋರಳಿನ ಕ್ಯಾನ್ಸರ್ ತಡೆಯಲು ಮಹಿಳೆಯರಿಗೆ ಈ ಶಿಬಿರ ಯೋಜಿಸಲಾಗಿದೆ

ಧಾರವಾಡ: ಪ್ರಸ್ತುತ ವರ್ಷದಲ್ಲಿ ಮಹಿಳೆಯರಲ್ಲಿ ಗರ್ಭಾಶಯ ಕೊರಳಿನ ಕ್ಯಾನ್ಸರ್‌, ಸ್ತನ ಕ್ಯಾನ್ಸರ್‌ ಹೆಚ್ಚುತ್ತಿದ್ದು, ಈ ಕಾರಣದಿಂದಲೇ ಹೆಚ್ಚಿನ ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ ಎಂದು ಫ್ಯಾಮಿಲಿ ಪ್ಲಾನಿಂಗ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ (ಎಫ್.ಪಿ.ಎ.ಐ) ಧಾರವಾಡ ಶಾಖಾ ವ್ಯವಸ್ಥಾಪಕಿ ಸುಜಾತಾ ಆನಿಶೆಟ್ಟರ್‌ ಹೇಳಿದರು.

ರೋಟರಿ ಕ್ಲಬ್‌ ಆಫ್‌ ಧಾರವಾಡ, ಐಎಂಎ ಮಹಿಳಾ ವೈದ್ಯರ ಸಂಘವು ಬೆಳಕು ಸಂಸ್ಥೆ ಜೊತೆಗೂಡಿ ತಾಲೂಕಿನ ಬೇಲೂರು ಗ್ರಾಮದಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ್ದ ಗರ್ಭಾಶಯದ ಕೊರಳಿನ ಕ್ಯಾನ್ಸರ್‌ ತಪಾಸಣೆ, ದಂತ ತಪಾಸಣೆ, ಕಣ್ಣು-ಮೂಗು-ಗಂಟಲು ತಪಾಸಣೆ ಹಾಗೂ ಮಕ್ಕಳ ತಪಾಸಣಾ ಶಿಬರದಲ್ಲಿ ಮಾತನಾಡಿದ ಅವರು, ಒಟ್ಟಾರೆ ಪ್ರಸ್ತುತ ವಿಶ್ವದಲ್ಲಿ 19.3 ಮಿಲಿಯನ್‌ ಜನರಿಗೆ ಹೊಸದಾಗಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. 10 ಮಿಲಿಯನಷ್ಟು ಜನರು ಪ್ರತಿ ವರ್ಷ ಈ ರೋಗದಿಂದ ಸಾವಿಗೀಡಾಗುತ್ತಿದ್ದಾರೆ. ಅದರಲ್ಲಿ ಭಾರತದಲ್ಲಿ ಕೂಡಾ ಗರ್ಭಾಶಯ ಕೊರಳಿನ ಕ್ಯಾನ್ಸರ್ ಹೆಚ್ಚುತ್ತಿದೆ. ಮುನ್ನೆಚ್ಚರಿಕೆ ಮತ್ತು ಸೂಕ್ತ ತಪಾಸಣೆಯ ಹಾಗೂ 9 ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಎಚ್.ಪಿ.ವ್ಹಿ ಲಸಿಕೆ ಹಾಕಿಸುವದರ ಮೂಲಕ ಈ ರೋಗ ತಡೆಯಬಹುದಾಗಿದೆ ಎಂದು ಎಚ್ಚರಿಸಿದರು.

ಐ.ಎಂ.ಎ. ಮಹಿಳಾ ವೈದ್ಯರ ಸಂಘದ ಅಧ್ಯಕ್ಷೆ ಡಾ.ಕವಿತಾ ಮಂಕನಿ, ಮಹಿಳೆಯರಿಗೆ ಕ್ಯಾನ್ಸರ್ ಸ್ಕ್ರೀನಿಂಗ್‌ ಪರೀಕ್ಷೆಯು ಪ್ರತಿಯೊಬ್ಬ ಮಹಿಳೆಗೆ ಅವಶ್ಯ. ಸಂಸ್ಥೆಯು ಹಲವಾರು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಗರ್ಭಾಶದ ಕೋರಳಿನ ಕ್ಯಾನ್ಸರ್ ತಡೆಯಲು ಮಹಿಳೆಯರಿಗೆ ಈ ಶಿಬಿರ ಯೋಜಿಸಲಾಗಿದೆ. ಎಫ್.ಪಿ.ಎ.ಐ ಪ್ರತಿ ತಿಂಗಳು ಸುಮಾರು 200ಕ್ಕೂ ಹೆಚ್ಚು ಮಹಿಳೆಯರಿಗೆ ಕ್ಯಾನ್ಸರ್ ಸ್ಕ್ರೀನಿಂಗ್‌ ಒಳಪಡಿಸಿ ವಿಐಎ ಅಂತಹ ಸೇವೆ ನೀಡುತ್ತಿದೆ. ಹೆಚ್ಚಿನ ಚಿಕಿತ್ಸೆ ಬೇರೆಡೆಗೆ ಕಳುಹಿಸಿ ಗುಣಪಡಿಸುವ ಕಾರ್ಯವನ್ನು ಕಳೆದ ಹಲವಾರು ವರ್ಷಗಳಿಂದ ಮಾಡಲಾಗುತ್ತಿದೆ ಎಂದರು.

ಐಎಂಎ ಮಹಿಳಾ ವೈದ್ಯರ ಸಂಘದ ಕಾರ್ಯದರ್ಶಿ ಡಾ.ಪಲ್ಲವಿ ದೇಶಪಾಂಡೆ, ಈ ತಪಾಸಣೆ ಅತ್ಯಂತ ಸರಳ ಮತ್ತು ಯಾವುದೇ ಹಾನಿಕಾರಕವಲ್ಲ. ಇಂತಹ ಸೇವೆ ಪಡೆದ ಅನೇಕ ಮಹಿಳೆಯರು ಕ್ಯಾನ್ಸರ್ ಸ್ಕ್ರೀನಿಂಗ್‌ಗೆ ಒಳಪಟ್ಟು ಪ್ರಾರಂಭದ ಹಂತದಲ್ಲಿ ಗುಣಮುಖರಾಗಿದ್ದಾರೆ. ಹೀಗಾಗಿ ಸಂಕೋಚವಿಲ್ಲದೇ ತಪಾಸಣೆಗೆ ಒಳಗಾಗಬೇಕು ಎಂದರು.

ರೋಟರಿ ಕ್ಲಬ್ ಆಫ್ ಪ್ರೈಮ್‌ ಡಾ.ಅವಿನಾಶ ದೊಡ್ಡಮನಿ ದಂತ ತಪಾಸಣೆ, ಡಾ. ಅನಿಕೇತ ಪಾಂಡುರಂಗಿ ಕಣ್ಣು-ಮೂಗು-ಗಂಟಲು ತಪಾಸಣೆ ಮತ್ತು ಡಾ.ಪ್ರೀತಿ ಪಾಡುರಂಗಿ ಮಕ್ಕಳ ತಪಾಸಣೆ ಮಾಡಿದರು. ಡಾ. ಅಕ್ಕಮಹಾದೇವಿ ಹಿರೇಮಠ, ಶೋಭಾ ಅಕ್ಕಿವಳ್ಳಿ, ಜಾಹಿದ ಎಚ್.ಕೆ, ಶಂಕರಗೌಡ ಪಾಟೀಲ, ಬೆಂಡಂಗೈಲಾ ಕನ್ನಿಂಗ ಹಾಗೂ ಡಾ. ಸಂಧ್ಯಾ ರಾಗಿಣಿ ಇದ್ದರು. 150ಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಕ್ಕಳು ತಪಾಸಣೆಗೆ ಒಳಗಾದರು. ಪ್ರಕಾಶ ಜೋಡಳ್ಳಿ ವಂದಿಸಿದರು, ಬಸಮ್ಮ ದೇಸಾಯಿ ಸ್ವಾಗತಿಸಿದರು. ಶಿವಾನಂದ ಪಾಟೀಲ ನಿರೂಪಿಸಿದರು.