ಸುಜ್ಞಾನನಿಧಿಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವು: ಬಾಬು ನಾಯ್ಕ

| Published : Aug 17 2024, 12:45 AM IST

ಸುಜ್ಞಾನನಿಧಿಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವು: ಬಾಬು ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಮಾಭಿವೃದ್ಧಿ ಯೋಜನೆ ವತಿಯಿಂದ ಸುಜ್ಞಾನನಿಧಿ ಶಿಷ್ಯ ವೇತನದ ಫಲಾನುಭವಿ ವಿದ್ಯಾರ್ಥಿಗಳಿಗೆ ಆಯ್ಕೆ ಪತ್ರ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಸೊರಬ

ಸಾಮಾನ್ಯ ಶಿಕ್ಷಣಕ್ಕಿಂತ ಹೆಚ್ಚಿನ ಅವಕಾಶಗಳು ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕಿದೆ. ಬಡ ಮತ್ತು ಅಸಂಘಟಿತ ವಲಯದ ಜನಸಾಮಾನ್ಯರ ಪ್ರತಿಭಾವಂತ ಮಕ್ಕಳಿಗೆ ಇಂತಹ ಶಿಕ್ಷಣ ಪಡೆಯುವುದೇ ದುಸ್ತರವಾಗಿರುವ ಈಗಿನ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಜ್ಞಾನನಿಧಿ ಶಿಷ್ಯವೇತನ ಜಾರಿಗೆ ತರುವ ಮೂಲಕ ಬಡ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ನೆರವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿರಸಿ ಬಿ.ಸಿ.ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಹೇಳಿದರು.ಬುಧವಾರ ಪಟ್ಟಣದ ನಿಜಗುಣ ರೆಸಿಡೆನ್ಸಿ ಹಾಲ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಮಾಭಿವೃದ್ಧಿ ಯೋಜನೆ ವತಿಯಿಂದ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣಕ್ಕಾಗಿ ಜಾರಿಗೆ ತಂದಿರುವ ಸುಜ್ಞಾನನಿಧಿ ಶಿಷ್ಯ ವೇತನದ ಫಲಾನುಭವಿ ವಿದ್ಯಾರ್ಥಿಗಳಿಗೆ ಆಯ್ಕೆ ಪತ್ರ ನೀಡಿ ಅವರು ಮಾತನಾಡಿದರು.ಸಂಸ್ಥೆಯ ಬೆಳ್ಳಿಹಬ್ಬದ ಸವಿನೆನಪಿಗೆ ೨೦೦೭ರಲ್ಲಿ ಪ್ರಾರಂಭಿಸಲಾದ ಸುಜ್ಞಾನನಿಧಿ ಶಿಷ್ಯ ವೇತನ ಯೋಜನೆ ರಾಜ್ಯದ ೯೭ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ೧೧೪.೦೦ ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗಿದೆ. ಅಭಿವೃದ್ಧಿ ಕಾಣದ ತೀರಾ ಹಿಂದುಳಿದ ಗ್ರಾಮ ಮತ್ತು ಹಳ್ಳಿಗಳ ಸಾಮಾನ್ಯ ಬಡ ಕೂಲಿ ಕಾರ್ಮಿಕರ ಮಕ್ಕಳೂ ಸುಜ್ಞಾನನಿಧಿ ಶಿಷ್ಯವೇತನ ಉಪಯೋಗ ಪಡೆದು ಡಾಕ್ಟರ್, ಸಾಫ್ಟ್ವೇರ್ ಇಂಜಿನಿಯರ್‌ನಂಥ ಉನ್ನತ ಶಿಕ್ಷಣ ಪಡೆಯಬಹುದು ಎನ್ನುವುದನ್ನು ಈ ಕಾರ್ಯಕ್ರಮ ನಿರೂಪಿಸಿದೆ ಎಂದರು. ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮದ ಮೂಲಕ ೨೦೨೪-೨೦೨೫ನೇ ಸಾಲಿನಲ್ಲಿ ತಾಲೂಕು ವ್ಯಾಪ್ತಿಯ ಒಟ್ಟು ೧೭೭ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರು. ೯೫,೪೦೦ರಂತೆ ಕೋರ್ಸ್ ಮುಗಿಯುವವರೆಗೆ ೨೯.೫೮ ಲಕ್ಷ ರು. ಮೊತ್ತ ಮಂಜೂರಾಗಿದ್ದು, ಮಂಜೂರಾತಿ ಪತ್ರವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡ ಲಾಗಿದ್ದು, ಶಿಷ್ಯ ವೇತನವನ್ನು ಪಡೆದು ಪ್ರಸ್ತುತ ವರ್ಷ ಶಿಕ್ಷಣವನ್ನು ಪೂರ್ಣಗೊಳಿಸುತ್ತಿರುವ ೨೬ ಜನ ವಿದ್ಯಾರ್ಥಿಗಳಿಗೆ ಪೂಜ್ಯರ ಆಶೀರ್ವಾದ ಪೂರ್ವಕ ಪತ್ರವನ್ನು ನೀಡಿ ಶುಭ ಹಾರೈಸಲಾಗಿದೆ ಎಂದರು.ತಾಲೂಕು ಯೋಜನಾಧಿಕಾರಿ ಜಯಂತಿ ಮಾತನಾಡಿ, ಯೋಜನೆಯ ಸಂಘಗಳ ಬಡ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಳಿಗೆ ಶಿಷ್ಯವೇತನ ನೀಡಲಾಗುತ್ತಿದ್ದು, ಮೂರು ವರ್ಷದವರೆಗಿನ ಕೋರ್ಸ್‌ಗಳಿಗೆ ಪ್ರತಿ ತಿಂಗಳು ತಲಾ ರೂ. ೪೦೦ ಹಾಗೂ ಅದರಿಂದ ಮೇಲ್ಪಟ್ಟ ಐದು ವರ್ಷದವರೆಗಿನ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಕೋರ್ಸ್ ಮುಗಿಯುವ ವರೆಗೆ ತಲಾ ಒಂದು ಸಾವಿರ ರೂ.ನಂತೆ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಇಸಿಒ ಅರುಣ್‌ಕುಮಾರ, ಲಿಂಗರಾಜ ಒಡೆಯರ್, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಕಾಳಿಂಗರಾಜ್, ಸದಸ್ಯರಾದ ಭರಮಗೌಡ ಪಾಟೀಲ, ಸುಧಾ, ವಲಯ ಮೇಲ್ವಿಚಾರಕ ಉಮೇಶ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರುತಿ, ಸೇವಾ ಪ್ರತಿನಿಧಿಗಳಾದ ಶ್ರೀಮತಿ ಉಷಾ, ಸುಷ್ಮಾ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.