ಸಾರಾಂಶ
ಶಾಸಕ ಡಿ. ರವಿಶಂಕರ್ ಸಲಹೆ ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಮನುಷ್ಯ ಶಿಕ್ಷಣದಷ್ಟೇ ಆದ್ಯತೆಯನ್ನು ಕ್ರೀಡಾ ಕ್ಷೇತ್ರಕ್ಕೂ ನೀಡಿದರೆ ಆರೋಗ್ಯವಂತನಾಗಿ ಬದುಕಬಹುದು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದ ಕಾಳೇನಹಳ್ಳಿ ರಸ್ತೆಯ ಸುಕೃತ ಕ್ರೀಡಾ ಸಂಸ್ಥೆಯ ವತಿಯಿಂದ ಆರಂಭಿಸಿರುವ ಕ್ರೀಡಾ ಸಭಾಂಗಣ ಉದ್ಘಾಟಿಸಿ ಮಾತನಾಡಿದ ಅವರು, ಹಣಕ್ಕಿಂತ ಆರೋಗ್ಯ ಮುಖ್ಯ ಎಂಬ ವಿಚಾರ ಜನ ಜನಿತವಾಗಿದ್ದು ಇದನ್ನು ಎಲ್ಲರೂ ಅರಿಯಬೇಕು ಎಂದರು.
ಕಳೆದ 40 ವರ್ಷಗಳ ಹಿಂದೆ ಪಟ್ಟಣದಲ್ಲಿ ಆರಂಭವಾದ ಸುಕೃತ ಕ್ಲಬ್ ಸದಸ್ಯರ ಹಿತ ಕಾಯುವುದರ ಜೊತೆಗೆ ಸಮಾಜಮುಖಿ ಕೆಲಸ ಮಾಡುತ್ತಿದ್ದು ನಾನು ಇದರ ಗೌರವ ಸದಸ್ಯನಾಗಿರುವುದು ಹೆಮ್ಮೆ ಎನಿಸುತ್ತದೆ ಎಂದರು.ಕ್ಷೇತ್ರದ ವ್ಯಾಪ್ತಿಯಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಉಳ್ಳವರು ಭವಿಷ್ಯದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲಿ ಎಂಬ ಸದುದ್ದೇಶದಿಂದ ಪಟ್ಟಣದ ಕೃಷ್ಣರಾಜೇಂದ್ರ ಸಭಾಂಗಣಕ್ಜೆ ಸರ್ಕಾರದಿಂದ ಎರಡು ಕೋಟಿ ಹಣ ಮಂಜೂರು ಮಾಡಿಸಿ ಅವರಿಗೆ ಎಲ್ಲಾ ಸವಲತ್ತು ಕಲ್ಪಿಸಲು ಕ್ರಮ ಕೈಗೊಂಡಿದ್ದೇನೆ ಎಂದು ಅವರು ಮಾಹಿತಿ ನೀಡಿದರು.
ಕ್ಲಬ್ ನ ಸಂಸ್ಥಾಪಕ ಸದಸ್ಯ ಸಿದ್ದಲಿಂಗಸ್ವಾಮಿ ಮಾತನಾಡಿ, ಕೆ.ಆರ್. ನಗರ ಪಟ್ಟಣದಲ್ಲಿ ಈ ಹಿಂದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳು ನಡೆಯುತ್ತಿದ್ದವು. ಹಾಗಾಗಿ ಶಾಸಕರು ಈ ವಿಚಾರದ ಬಗ್ಗೆ ಗಮನ ಹರಿಸಿ ಭವಿಷ್ಯದಲ್ಲಿ ಇಂತಹ ಕೂಟ ನಡೆಸಬೇಕು ಎಂದು ಅವರು ಸಲಹೆ ನೀಡಿದರು.ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ನೀವು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಗಮನವನ್ನು ಕ್ರೀಡೆಯತ್ತ ಸೆಳೆಯಲು ಸರ್ಕಾರದಿಂದ ವಿಶೇಷ ಪ್ಯಾಕೇಜ್ ಮೂಲಕ ಹಣ ಬಿಡುಗಡೆಗೊಳಿಸಿ ಎಂದು ಅವರು ಕೋರಿದರು.
ಅಧ್ಯಕ್ಷ ವೈ.ಆರ್. ಶಿವಕುಮಾರ್ ಮಾತನಾಡಿ, ನಮ್ಮ ಸಂಘದ ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿ ಮರೆತು ಸಮಾಜಮುಖಿ ಕೆಲಸ ಮಾಡಲು ಸದಾ ಸಹಕಾರ ನೀಡುತ್ತಿದ್ದು ನಾವು ಮುಂದೆ ಆರ್ಥಿಕವಾಗಿ ದುರ್ಬಲವಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಿರ್ಧಾರಿಸಿದ್ದೇವೆ ಎಂದರು.ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಪುರಸಭೆ ಸದಸ್ಯ ಕೆ.ಪಿ. ಪ್ರಭುಶಂಕರ್, ಕ್ಲಬ್ ನ ಹಿರಿಯ ಸದಸ್ಯ ಪುಟ್ಟಬಸಪ್ಪ, ಉಪಾಧ್ಯಕ್ಷ ಸಿ.ಎಸ್. ಶಿವಪ್ರಕಾಶ್, ಮಾಜಿ ಅಧ್ಯಕ್ಷ ವೈ.ಬಿ. ಗಣೇಶ್, ಕಾರ್ಯದರ್ಶಿ ಕೆ.ಎಂ. ಗುರುಮೂರ್ತಿ, ಮಾಜಿ ಕಾರ್ಯದರ್ಶಿ ರಾ.ಜ. ಶ್ರೀಕಾಂತ್, ರಾಜುಪಟೇಲ್, ಖಜಾಂಚಿ ಕೆ.ಬಿ. ಮಂಜುನಾಥ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್. ಪ್ರಸನ್ನ ಕುಮಾರ್, ಪುರಸಭೆ ಮಾಜಿ ಸದಸ್ಯ ಉಮಾಶಂಕರ್, ಸದಸ್ಯ ಎಸ್. ಮಂಜುನಾಥ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ ಮೊದಲಾದವರು ಇದ್ದರು.