ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಜಾಗೃತ ಪ್ರಜೆಗಳ ನಿರ್ಮಾಣ ಮಾಡುವುದೇ ಶಾಲೆಗಳ ಗುರಿಯಾಗಿರಬೇಕು. ಇಂತಹ ಕೆಲಸವನ್ನು ಪುತ್ತೂರಿನ ವಿದ್ಯಾವರ್ಧಕ ಸಂಘದ ಮಾಡುತ್ತಿರುವುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಶ್ಲಾಘಿಸಿದರು.ಸೋಮವಾರ ಅವರು ಸುಲ್ಕೇರಿ ಶ್ರೀರಾಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಾಲೆಗಳು ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡುವಂತಾಗಳಾಗಬೇಕು. ಹಿರಿಯರ ದಿನಚರಿ, ರೀತಿ, ರಿವಾಜು, ಪರಂಪರೆಗಳು ಮಕ್ಕಳಿಗೆ ಆದರ್ಶವಾಗಬೇಕೇ ಹೊರತು ಮೊಬೈಲ್ ನಲ್ಲಿ ಬಂದ ವಿಚಾರಗಳಲ್ಲ. ಶಾಲಾ ಶಿಕ್ಷಣ ಪಡೆದ ಕೆಲವರ ಆಚರಣೆ, ನಡವಳಿಕೆಗಳನ್ನು ನೋಡಿದಾಗ ನಾಚಿಕೆ, ಬೇಸರ ಪಡುವಂತಹ ಸನ್ನಿವೇಶ ಉಂಟಾಗಿದೆ. ಹೀಗಾಗಿ ಸಂಸ್ಕಾರ ಇಲ್ಲದ ಶಿಕ್ಷಣವು ಶಿಕ್ಷಣವೇ ಅಲ್ಲ ಎಂದರು.
ದಶಕಗಳ ಹಿಂದೆ ಕಾಲೇಜು ಮಕ್ಕಳು ಅನ್ಯಾಯದ ವಿರುದ್ಧ ಸೆಟೆದುನಿಲ್ಲುತ್ತಿದ್ದರು ಮತ್ತು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಆದರೆ ಇಂದು ಅಂತಹ ಧೈರ್ಯ ವಿದ್ಯಾರ್ಥಿಗಳಲ್ಲಿ ಕಾಣೆಯಾಗಿದೆ. ಇಂದಿನ ಪೀಳಿಗೆ ಸಮಾಜದಲ್ಲಿ ಯಾವುದೇ ಘಟನೆಗೂ ಸ್ಪಂದಿಸದೆ ತನ್ನ ಪಾಡಿಗೆ ಇದ್ದು ಹಣಗಳಿಸುವ ಚಿಂತೆಯಲ್ಲಿದೆ. ಧೈರ್ಯದ ಗುಣ ಕ್ಷೀಣಿಸಿದೆ. ಆತ್ಮವಿಶ್ವಾಸ ಮಾಯವಾಗಿದೆ. ಹೀಗಾಗಿ ಶಾಲೆಗಳು ಮಕ್ಕಳಿಗೆ ಬಾಲ್ಯದಿಂದಲೇ ಬಾಲ್ಯದಿಂದಲೇ ಧೈರ್ಯ ಹಾಗೂ ಆತ್ಮವಿಶ್ವಾವನ್ನು ತುಂಬಿಸುವ ಕೆಲಸ ಮಾಡಬೇಕು. ಇದಕ್ಕೆ ಪೋಷಕರ ಸಹಕಾರ ಅಗತ್ಯ. ಮಕ್ಕಳೇ ನಮ್ಮ ಮುಖ್ಯ ಆಸ್ತಿಯಾಗಬೇಕು. ಶಾಲೆಗಳ ವಿಕಸನ ಕೇವಲ ಹಣದಿಂದಲೇ ಆಗಲಾರದು. ಇದಕ್ಕೆ ಪೋಷಕರ ಶ್ರಮಸೇವೆಯೂ ಮುಖ್ಯವಾಗಿದೆ ಎಂದರು.ಕುಟುಂಬ ಪ್ರಬೋಧನ ಪ್ರಮುಖ್ ನಾರಾವಿ ವೆಂಕಟೇಶ್ ಹೆಗ್ಡೆ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಶಿರ್ತಾಡಿಯ ಉದ್ಯಮಿ ಸತೀಶ್ ವಿ. ಶೆಟ್ಟಿ, ನಾರಾವಿಯ ಉದ್ಯಮಿಗಳಾದ ಚಂದ್ರಶೇಖರ್ ಹಾಗೂ ಎನ್. ಶಿಶುಪಾಲ ಜೈನ್, ಶಾಲಾ ಆಡಳಿತ ಮಂಡಳಿ ಗೌರವಾಧ್ಯಕ್ಷ ಎನ್. ಗಣೇಶ್ ಹೆಗ್ಡೆ, ಅಧ್ಯಕ್ಷ ರಾಜು ಪೂಜಾರಿ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಹವ್ವಿಸ್ಸು ಅರ್ಪಿಸಿದರು. ಹೊಸದಾಗಿ ಸೇರ್ಪಡೆಯಾದ ಸುಮಾರು 250 ಕ್ಕೂಹೆಚ್ಚು ಮಕ್ಕಳಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು.ಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಪ್ರಮೋದ್ ಪ್ರಸ್ತಾವಿಸಿದರು. ಶಿಕ್ಷಕಿ ಯಶೋದಾ ವಂದಿಸಿದರು. ಶಿಕ್ಷಕಿ ಶಿಲ್ಪಾ ಕಾರ್ಯಕ್ರಮ ನಿರ್ವಹಿಸಿದರು.