ಸುಳ್ಯ: ಸುಳ್ಯ ನಗರದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. ನಗರ ಪಂಚಾಯತ್ ಅಧಿಕಾರಿಗಳು ಲಕ್ಷ‌ ಲಕ್ಷ ಲಂಚ ಪಡೆದು ಅನುಮತಿ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ‌ ಸುಳ್ಯ ಕೆ.ಡಿ.ಪಿ. ಸಭೆಯಲ್ಲಿ ಕೇಳಿ‌ ಬಂದಿದೆ.

ಶಾಸಕಿ ಭಾಗೀರಥಿ ಮುರುಳ್ಯರ‌ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರು, ನಗರದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. ಯಾಕೆ ಅನುಮತಿ ನೀಡುತ್ತಿದ್ದಾರೆ?. ನಗರ ಪಂಚಾಯತ್ ಮುಖ್ಯಾಧಿಕಾರಿಗಳು 50 ಸಾವಿರದಿಂದ 2 ಲಕ್ಷದ ತನಕ ಲಂಚ ಪಡೆಯುತ್ತಿದ್ದಾರೆಂಬ ಮಾಹಿತಿ ಇದೆ. ನಮ್ಮಲ್ಲಿ ದಾಖಲೆಯೂ ಇದೆ ಎಂದು ಹೇಳಿದರು. ಆಗ ನಗರ ಪಂಚಾಯತ್ ಆಡಳಿತಾಧಿಕಾರಿಯಾಗಿಯೂ ಆಗಿರುವ ತಹಸೀಲ್ದಾರ್ ಮಂಜುಳಾ ಅವರು, ನಗರದಲ್ಲಿ ಅಕ್ರಮ ಕಟ್ಟಡ ಆಗುತ್ತಿಲ್ಲ. ಅನುಮತಿ ನೀಡಿಲ್ಲ. ನಿಮಗೆ ಮಾಹಿತಿ ಇದ್ದರೆ ತಿಳಿಸಿ” ಎಂದರು. ನೀವು ಪೈಚಾರಿನಿಂದ ಸುಳ್ಯ‌ ನಗರದ ಮುಖ್ಯರಸ್ತೆಯಲ್ಲಿ ಹೊಸ ಕಟ್ಟಡಕ್ಕೆ ಯಾವ ನಿಯಮದಡಿ ಅನುಮತಿ ನೀಡಿದ್ದೀರಿ ಎಂದು ಪರಿಶೀಲಿಸಿ. ಆಗ ನಿಮಗೆ ಅಕ್ರಮ ಕಟ್ಟಡ ಯಾವುದೆಂದು ಗೊತ್ತಾಗುತ್ತದೆ” ಎಂದು ಹಮೀದ್ ಹೇಳಿದರು. ಈ ಮುಖ್ಯಾಧಿಕಾರಿಗಳು ಬಂದ ಬಳಿಕ ಎಷ್ಟು ಹೊಸ ಕಟ್ಟಡಕ್ಕೆ ಅನುಮತಿ ನೀಡಿದ್ದಾರೆಂಬ ಪಟ್ಟಿ ಸಭೆಯಲ್ಲಿ ಇಡಿ” ಎಂದು ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ ಹೇಳಿದರು. “ಅದನ್ನು ಮುಂದಿನ ಸಭೆಗೆ ಇಡುವುದಾಗಿ ತಹಸೀಲ್ದಾರ್ ಹೇಳಿದರು.