ಸಾರಾಂಶ
ಕೆರಗೋಡಿನಲ್ಲಿ ಹನುಮ ಧ್ವಜ ಹಾರಿಸಿದ್ದ ಸಂಬಂಧ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು
ಕೆರಗೋಡು ಹನುಮ ಧ್ವಜ ವಿಚಾರದಲ್ಲಿ ರಾಜ್ಯ ಸರ್ಕಾರ ಸರ್ವಾಧಿಕಾರಿ ರೀತಿ ವರ್ತಿಸಬಾರದು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾದಿತ ಕಂಬದಲ್ಲಿ ಹನುಮ ಧ್ವಜ ಹಾಕಬೇಕು. ಹನುಮಧ್ವಜ ಹಾಕಲೆಂದೇ ದೇಣಿಗೆ ಸಂಗ್ರಹ ಮಾಡಿ ಧ್ವಜಸ್ತಂಭ ಮಾಡಲಾಗಿದೆ. ಈ ವಿವಾದಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಆಪಾದಿಸಿದರು.ವಿವಾದ ಆದ ಬಳಿಕ ಆರೋಪ-ಪ್ರತ್ಯಾರೋಪ ಸಹಜ. ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ, ಶಾಸಕರ ಒತ್ತಡದಿಂದ ಈ ರೀತಿ ನಡೆದುಕೊಂಡಿದೆ ಎಂಬ ಮಾತು ಕೇಳಿ ಬಂದಿದೆ. ಕೆರಗೋಡು ದೊಡ್ಡ ಸಮುದ್ರ ಅಲ್ಲ. ಅದೊಂದು ಹಳ್ಳಿ. ಅಲ್ಲಿನ ಜನರ ಜತೆಗೆ ಮಾತನಾಡಿ ಪರಿಹರಿಸಬಹುದಿತ್ತು ಎಂದರು.ನಾನು ವಿವಾದಿತ ಸ್ಥಳಕ್ಕೆ ಹೋಗುವುದಿಲ್ಲ. ಮತ್ತೆ ಗೊಂದಲ ಆಗುವುದು ಬೇಡ ಅಂತಾ ಹೋಗುತ್ತಿಲ್ಲ. ಇಂತಹ ಘಟನೆಗಳು ಆದಾಗ ಪ್ರತಿಭಟನೆ ಆಗೇ ಆಗುತ್ತದೆ. ಬಿಜೆಪಿಗೆ ನೆಲೆ ಇಲ್ಲ. ಭಾವನಾತ್ಮಕ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬುದನ್ನು ಒಪ್ಪುವುದಿಲ್ಲ. ಇಷ್ಟೆಲ್ಲಾ ಆಗಲೂ ರಾಜ್ಯ ಸರ್ಕಾರವೇ ನೇರ ಕಾರಣ. ಆದರೆ, ಪಿಡಿಓ ಅಮಾನತು ಮಾಡಿದ್ದಾರೆ. ಇದು ಸರಿಯಲ್ಲ. ಬಲಿಪಶು ಮಾಡುವ ಕೆಲಸ ಇದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇಡೀ ಘಟನೆಯನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಯಡವಟ್ಟು ಮಾಡಿದೆ. ಆರು ದಿನ ಧ್ವಜ ಹಾರಿಸಲು ಬಿಟ್ಟಿದ್ದೇ ತಪ್ಪು. ಅವಕಾಶ ನೀಡದಿದ್ದರೆ ಮೊದಲೇ ಹೇಳಬೇಕಿತ್ತು. ಏಕಾಏಕಿ ಒತ್ತಡಕ್ಕೆ ಒಳಗಾಗಿ ಧ್ವಜ ತೆರವು ಮಾಡಲಾಗಿದೆ. ಜಿಲ್ಲಾಡಳಿತ ತಪ್ಪು ಮಾಡಿದ್ದು, ಒತ್ತಡಕ್ಕೆ ಒಳಗಾಗಿದೆ. ಈಗ ಆರೋಪ ಮಾಡುವ ಸರ್ಕಾರ ಏಕೆ ಮೊದಲೇ ಕ್ರಮ ಕೈಗೊಳ್ಳಲಿಲ್ಲ. ಆರು ದಿನ ಬಿಟ್ಟು ಈಗ ಅಕ್ರಮ ಎನ್ನುವುದು ಸರಿಯಲ್ಲ ಎಂದು ಹೇಳಿದರು.ಹನುಮ ಧ್ವಜ ಕಟ್ಟಲು ಕಂಬ ಮಾಡಿದ್ದು. ರಾಷ್ಟ್ರ ಧ್ವಜ ಎಲ್ಲಿ ಬೇಕಾದರೂ ಹಾರಿಸಬಹುದು. ವಿವಾದಿತ ಕಂಬದಲ್ಲೇ ಹನಮ ಧ್ವಜ ಹಾರಿಸಬೇಕು. ಸರ್ಕಾರ ಬಲವಂತದ ಕ್ರಮ ಮಾಡುವುದು ಸರಿಯಲ್ಲ ಎಂದು ಸುಮಲತಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.