ಉಡುಪಿ: ಅನೇಕ ಸಂಘ ಸಂಸ್ಥೆಗಳು ಹುಟ್ಟುತ್ತವೆ. ಆರಂಭದಲ್ಲಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತವೆ. ಮೂರ್ನಾಲ್ಕು ವರ್ಷಕ್ಕೆ ಹುಮ್ಮಸ್ಸು ಕಳೆದುಕೊಂಡು ಮುಚ್ಚಿ ಹೋಗುತ್ತವೆ. ಸುಮನಸಾ ಕೊಡವೂರು ಸಂಘಟನೆಯು 25 ವರ್ಷ ಪೂರೈಸಲು ಅದರ ಪದಾಧಿಕಾರಿಗಳ ತ್ಯಾಗ, ನಿಸ್ವಾರ್ಥ ಸೇವೆ, ಪರಿಶ್ರಮ, ಮುತುವರ್ಜಿಯೇ ಕಾರಣ. ನಿಸ್ವಾರ್ಥ ಸೇವೆ, ಮಾನವೀಯ ಕಳಕಳಿ ಇಟ್ಟುಕೊಂಡು ಜನರಿಗೆ ಸಹಾಯ ಮಾಡುತ್ತಾ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಳೆದು ನಿಂತಿದೆ ಎಂದು ಪಡುಬಿದ್ರಿಯ ಯಸ್ಸೆನ್ ಸ್ಪೆಶನ್ ಎಕಾನೋಮಿಕ್ ಜೋನ್ ಮುಖ್ಯಸ್ಥ ಅಶೋಕ್ ಶೆಟ್ಟಿ ಹೇಳಿದರು. ಭಾನುವಾರ ಸಂಜೆ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ಮತ್ತು ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿಯು ಕುಂಜಿಬೆಟ್ಟು ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಜತ ಮಹೋತ್ಸವದ ಕೈಪಿಡಿ ಬಿಡುಗಡೆ ಮಾಡಿದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ಉಡುಪಿಯಲ್ಲಿ ಬಹಳಷ್ಟು ಸಾಂಸ್ಕೃತಿಕ, ಸಾಹಿತ್ಯಿಕ, ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಅದರಲ್ಲಿ ಸುಮನಸಾ ಕೊಡವೂರು ಪ್ರಮುಖವಾದುದು. ಉಡುಪಿ ನಗರದ ಮಧ್ಯದಲ್ಲಿ ಇರುವ ಅಜ್ಜರಕಾಡು ಭುಜಂಗ ಉದ್ಯಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರಂಗಹಬ್ಬ ನಡೆಸುತ್ತಿರುವ ಏಕೈಕ ಸಂಸ್ಥೆ ಇದು ಎಂದು ಶ್ಲಾಘಿಸಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಉಡುಪಿಯಲ್ಲಿ ತುಳುಕೂಟವು ತುಳು ನಾಟಕ ಸ್ಪರ್ಧೆಯನ್ನು ಎರಡೂವರೆ ದಶಕದ ಹಿಂದೆ ಆರಂಭಿಸಿತ್ತು. ಅದರ ಎರಡನೇ ವರ್ಷದ ಸ್ಪರ್ಧೆಯಲ್ಲಿ ಸುಮನಸಾ ಕೊಡವೂರಿನ ಕಲಾವಿದರು ಬಂಗಾರ್ದ ಬಂಡಿ ಎಂಬ ನಾಟಕವನ್ನು ಪ್ರದರ್ಶಿಸುವ ಮೂಲಕ ಈ ಸಂಸ್ಥೆಯು ನಾಟಕದ ಯಾತ್ರೆ ಆರಂಭಿಸಿತು. ಈಗ ರಾಜ್ಯದಾದ್ಯಂತ ಹೆಸರು ಪಡೆದಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಜತ ಸಂಭ್ರಮ ಸಮಿತಿ ಅಧ್ಯಕ್ಷ ಹರಿಪ್ರಸಾದ್ ರೈ ಮಾತನಾಡಿ, ಸುಮನಸಾ ಕೊಡವೂರು ಸಂಸ್ಥೆ ಆರಂಭವಾಗುವುದಕ್ಕಿಂತ ಮೂರು ವರ್ಷ ಮೊದಲು ಉಡುಪಿ ಜಿಲ್ಲೆಯ ಉದಯವಾಯಿತು. ಅಗಲವಾದ ರಸ್ತೆ, ಕಟ್ಟಡ, ಮಾಲ್‌ಗಳ ಸಹಿತ ಜಿಲ್ಲೆ ಬೆಳೆದಿದೆ. ಆದರೆ, ಜಿಲ್ಲೆಯ ಅಸ್ಮಿತೆ, ಅಸ್ತಿತ್ವಕ್ಕೆ ಇದಷ್ಟೇ ಸಾಲುವುದಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಬೇಕಾಗುತ್ತದೆ. ಇವೆರಡು ಒಟ್ಟಿಗೆ ಸಾಗಿದರೆ ಮಾತ್ರ ಸಹನಶೀಲ ಜೀವನ ಇರಲು ಸಾಧ್ಯ ಎಂದು ವಿಶ್ಲೇಷಿಸಿದರು.
ಬುಡ್ನಾರು ಯಕ್ಷ ಸಂಜೀವ ಟ್ರಸ್ಟ್‌ನ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಲೋಗೊ ಬಿಡುಗಡೆ ಮಾಡಿದರು. ಸಂಘಟನೆ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ.ಎಸ್. ಭಟ್ ವಂದಿಸಿದರು. ದಯಾನಂದ ಕರ್ಕೇರ ನಿರೂಪಿಸಿದರು. ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಎಂ.ಎಲ್. ಸಾಮಗ, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಸಂಚಾಲಕ ಭಾಸ್ಕರ ಪಾಲನ್ ಬಾಚನಬೈಲು ಉಪಸ್ಥಿತರಿದ್ದರು. ಬಳಿಕ ಅಟ್ಟಮುಟ್ಟಾ ಬೇಸಿಗೆ ಶಿಬಿರ ವಿದ್ಯಾರ್ಥಿಗಳಿಂದ ಎರಡು ನಾಟಕ ಪ್ರದರ್ಶನಗೊಂಡಿತು.