ಮಕ್ಕಳ ಸೂಕ್ತ ಪ್ರತಿಭೆಯನ್ನು ಬೆಳಕಿಗೆ ತರುವ ಬೇಸಿಗೆ ಶಿಬಿರ

| Published : May 16 2025, 01:45 AM IST

ಮಕ್ಕಳ ಸೂಕ್ತ ಪ್ರತಿಭೆಯನ್ನು ಬೆಳಕಿಗೆ ತರುವ ಬೇಸಿಗೆ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಶಿಬಿರವು ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ಹಾಕುವ ಕೆಲಸ ಮಾಡುತ್ತದೆ.

ಹೊನ್ನಾವರ; ಬೇಸಿಗೆ ಶಿಬಿರವು ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ಮಕ್ಕಳಲ್ಲಿ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕಲು, ಯಾಂತ್ರೀಕೃತ ಬದುಕಿನಿಂದ ಹೊರಬರಲು ಸಹಾಯ ಮಾಡುತ್ತದೆ ಎಂದು ಕ್ರೀಡಾಪಟು, ನಿವೃತ್ತ ಶಿಕ್ಷಕಿ ಸುನಂದಾ ಭಂಡಾರಿ ಹುಬ್ಬಳ್ಳಿ ಹೇಳಿದರು.

ಅವರು ಕೆರೆಕೋಣ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಸಾಲಕೋಡ ಗ್ರಾಮ ಪಂಚಾಯತ, ಕೆರೆಕೋಣ ಗ್ರಂಥಾಲಯ ಅರಿವು ಕೇಂದ್ರ ಮತ್ತು ಸಾಲಕೋಡ ಗ್ರಂಥಾಲಯ ಅರಿವು ಕೇಂದ್ರಗಳ ಆಶ್ರಯದಲ್ಲಿ ಕುಮುದಾ ಅಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ನಡೆಯುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಮೊಬೈಲ್ ಇಂದಿನ ದಿನಗಳಲ್ಲಿ ಓದುವ ಹವ್ಯಾಸವನ್ನು ಕಡಿಮೆ ಮಾಡಿಸಿದೆ. ಹಾಗಾಗಿ ಇಂತಹ ಶಿಬಿರಗಳು ಮೊಬೈಲ್ ಪ್ರಪಂಚದಿಂದ ಹೊರಬರಲು ಕೂಡ ಸಹಾಯ ಮಾಡುತ್ತದೆ ಎಂದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಾಲಕೋಡ ಗ್ರಾಪಂ ಮಾಜಿ ಅಧ್ಯಕ್ಷ ಕೇಶವ ಶೆಟ್ಟಿ ಮಾತನಾಡಿ, ಬೇಸಿಗೆ ಶಿಬಿರವು ಮಕ್ಕಳ ಶೈಕ್ಷಣಿಕ ಬದುಕಿಗೆ ಒಂದು ಮುಖ್ಯವಾದ ಭಾಗ. ಹಾಗಾಗಿ ಮಕ್ಕಳು ಈ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಲ್ಲ ರೀತಿಯ ಕಲೆಗಳನ್ನು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮಕ್ಕಳಾಗಿ ಬೆಳವಣಿಗೆ ಹೊಂದಬೇಕು ಹಾಗಾಗಿ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಈ ಮೂಲಕ ಊರಿಗೆ, ನಾಡಿಗೆ ಹೆಸರು ತರುವಂತಹ ಮಕ್ಕಳಾಗಿ ಬೆಳೆಯಬೇಕು ಎಂದರು.

ಮುಖ್ಯ ಅತಿಥಿ ಕೆರೆಕೋಣ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮ ಭಂಡಾರಿ ಮಾತನಾಡಿ, ಮಕ್ಕಳು ರಜೆಯಲ್ಲಿಯೂ ಕೂಡ ಕ್ರಿಯಾಶೀಲರಾಗಿರಬೇಕು. ಕೇವಲ ಮೊಬೈಲ್ ಮತ್ತು ಟಿವಿ ನೋಡುವ ಗೀಳಿಗೆ ಬಲಿಯಾಗದೆ ಇಂತಹ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎನ್ನುವ ಉದ್ದೇಶದಿಂದ ಇಂತಹ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಇಂತಹ ಶಿಬಿರವನ್ನು ನಡೆಸುವುದು ಸುಲಭವಲ್ಲ, ಬಹು ಅಮೂಲ್ಯವಾದ ಸಮಯವನ್ನು ಮಕ್ಕಳೊಂದಿಗೆ ಕಳೆಯಬೇಕಾಗುತ್ತದೆ. ಇಂಥ ಕೆಲಸವನ್ನು ಗ್ರಂಥಾಲಯ ಅರಿವು ಕೇಂದ್ರ ಮಾಡುತ್ತಿದೆ ಎಂದರು.

ವೇದಿಕೆಯ ಮೇಲೆ ಕೆರೆಕೋಣ ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ ಶೆಟ್ಟಿ ಮತ್ತು ಸಾಲ್ಕೋಡ ಗ್ರಂಥಾಲಯ ಮೇಲ್ವಿಚಾರಕಿ ನಾಗರತ್ನ ಗೌಡ, ಗಂಗೂಬಾಯಿ ಹೊಳೆಗದ್ದೆ ಉಪಸ್ಥಿತರಿದ್ದರು.

ಕೇದಾರ ಮಂಜುನಾಥ ಭಟ್ಟ ಸ್ವಾಗತಿಸಿದರು. ಶ್ರೇಯಸ್ ಸತೀಶ ಭಂಡಾರಿ ವಂದಿಸಿದರು. ಮಹೇಶ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.