ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಂಗಾಯಣವು ಸಮರಸವೇ ಜೀವನ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಿರುವ ಚಿಣ್ಣರ ಮೇಳ ಬೇಸಿಗೆ ಶಿಬಿರದಲ್ಲಿ ಭಾನುವಾರ ಸಾಮರಸ್ಯದ ಕಲಾ ದೋಣಿ ವಿಹರಿಸಿತು.ವಿವಿಧ ವೇಷ ಧರಿಸಿದ್ದ ಮಕ್ಕಳು ಸಾಮರಸ್ಯದ ದೋಣಿಯಲ್ಲಿ ಸಂಚರಿಸುತ್ತಾ ಜಾತಿ, ಧರ್ಮದ ಸಂಕೋಲೆಗಳನ್ನು ಮೀರುತ್ತ ಏಕತೆಯನ್ನು ಪ್ರದರ್ಶಿಸಿದರು. ಮಕ್ಕಳ ಕೈಯಲ್ಲಿ ತ್ರಿವರ್ಣ ಧ್ವಜ ಹಾರಾಡಿತು. ಇದರೊಂದಿಗೆ ರಂಗಾಯಣದ ಆವರಣದಲ್ಲಿ ವೈವಿಧ್ಯಮಯ ಭಾರತವು ಅನಾವರಣಗೊಂಡಿತು.
ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಅವರು ಸಾಮರಸ್ಯದ ದೋಣಿಗೆ ಚಾಲನೆ ನೀಡಿದರು. ಸಾಮರಸ್ಯ ಬೆಸೆಯುವ ನಾಮಫಲಕಗಳನ್ನು ಹಿಡಿದಿದ್ದ ಮಕ್ಕಳು, ವಿವಿಧ ಘೋಷಣೆಗಳನ್ನು ಕೂಗಿದರು. ಕಲಿಸು ಗುರುವೇ ಕಲಿಸು ಗೀತೆಯನ್ನು ಹಾಡುತ್ತ ಸಾಗಿದರು.ನಾವೆಲ್ಲರೂ ಒಂದೇ, ಎಲ್ಲರನ್ನೂ ಗೌರವಿಸೋಣ, ಎಲ್ಲರನ್ನೂ ಪ್ರೀತಿಸೋಣ. ಕುಲ ಕುಲವೆಂದ ಹೊಡದಾಡಿದಿರಿ, ಸಮರಸವೇ ಜೀವನ, ನಾವು ಉಸಿರಾಡುವ ಗಾಳಿಯೊಂದೇ, ಬೇರೆ ಬೇರೆ ಒಕ್ಕಲು ಒಂದೇ ತಾಯ ಮಕ್ಕಳು, ಎಲ್ಲರೊಂದಿಗೆ ಬದುಕೋಣ ಎಂಬಿತ್ಯಾದಿ ಫಲಕಗಳನ್ನು ಸಾಮರಸ್ಯ ಸಂದೇಶ ಸಾರಿದರು.
ರಂಗಾಯಣದ ಆವರಣದಿಂದ ಸಂಚಾರ ಆರಂಭಿಸಿದ ಸಾಮರಸ್ಯದ ದೋಣಿಯೂ ಕಲಾಮಂದಿರದ ಆವರಣದಲ್ಲಿ ಸಂಚರಿಸಿತು. ಮಕ್ಕಳೊಂದಿಗೆ ಪೋಷಕರು ಹೆಜ್ಜೆ ಹಾಕಿದರು. ಹಲವರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.ಸಾಮರಸ್ಯಕ್ಕೆ ವಿಜ್ಞಾನ ಮಾರ್ಗ
ಈ ವೇಳೆ ಕೃಪಾಕರ ಮಾತನಾಡಿ, ಸಾಮರಸ್ಯ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದ ಸಮಸ್ಯೆಯಾಗಿದೆ. ಧರ್ಮದ ಒಳಗಡೆ ಹೊಡೆದಾಟ. ಸಣ್ಣ ಮಕ್ಕಳು ವೇಷಭೂಷದಲ್ಲಾದರೂ ಜೊತೆಯಾಗಿದ್ದಾರೆ. ಇದು ಬಹಳ ಮುಖ್ಯ ಎಂದು ತಿಳಿಸಿದರು.ಹಿಂದಿನಿಂದಲೂ ನಮ್ಮ ದೇಶದಲ್ಲಿ ವಿಜ್ಞಾನ ಸ್ವೀಕರಿಸಲು ನಾವು ಸಿದ್ಧರಿಲ್ಲ. ಮುಂದಿನ ಯುಗ ವಿಜ್ಞಾನದ ಯುಗವಾಗಬೇಕು. ವಿಜ್ಞಾನಕ್ಕೆ ಪ್ರಾಮುಖ್ಯತೆ ಕೊಡಬೇಕು. ವಿಜ್ಞಾನ ಎಂದರೆ ಅಂದಾಜಿನ ಮೇಲೆ ಲೆಕ್ಕ ಮಾಡುವುದಿಲ್ಲ. ವೈಜ್ಞಾನಿಕ ಆಧಾರವನ್ನು ಬೇಡುತ್ತದೆ. ವಿಜ್ಞಾನ ಪ್ರಶ್ನೆಗಳನ್ನು ಸೃಷ್ಟಿಸುತ್ತದೆ. ಪ್ರಶ್ನೆ ಬಂದಾಗ ಉತ್ತರವೂ ಸಿಗುತ್ತದೆ. ಸಾಮರಸ್ಯಕ್ಕೆ ವಿಜ್ಞಾನ ಮಾರ್ಗ ಎಂದು ಅವರು ಹೇಳಿದರು.
ಪರಿಸರದ ಬಗ್ಗೆ ಮಕ್ಕಳಿಗೆ ಕೊಠಡಿ ಒಳಗೆ ಪಾಠ ಮಾಡಿದರೆ, ಸಿನಿಮಾ ತೋರಿಸಿದರೆ ಪರಿಸರದಿಂದ ದೂರ ಇಟ್ಟಂತೆ. ಸಮೀಪದಲ್ಲಿಯೇ ಇರುವ ಕುಕ್ಕರಹಳ್ಳಿಕೆರೆಗೆ ಕರೆದುಕೊಂಡು ಹೋದರೆ ಮಕ್ಕಳು ಪರಿಸರಕ್ಕೆ ಹತ್ತಿರವಾಗುತ್ತಾರೆ. ಆ ದಿಕ್ಕಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಶಿಬಿರದ ಸಂಚಾಲಕರು ಹಾಗೂ ಕಲಾವಿದರು ಇದ್ದರು.
ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಜಿಲ್ಲಾಧಿಕಾರಿಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರ ಪುತ್ರಿ ಅತಿದ್ರಿ ಚಿಣ್ಣರ ಮೇಳ ಶಿಬಿರದಲ್ಲಿ ಪಾಲ್ಗೊಂಡಿದ್ದು, ರಾಧೆಯ ವೇಷ ಧರಿಸಿ ಸಾಮರಸ್ಯದ ದೋಣಿಯಲ್ಲಿ ಸಂಚರಿಸುತ್ತಿದ್ದಳು. ಆ ವೇಳೆಗೆ ಅಲ್ಲಿಗೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಮಕ್ಕಳೊಂದಿಗೆ ಹೆಜ್ಜೆ ಹಾಕಿ ಖುಷಿಪಟ್ಟರು. ಮಗಳ ಫೋಟೋ ಸೆರೆ ಹಿಡಿದುಕೊಂಡು ಸಂಭ್ರಮಿಸಿದರು.