ಸಾರಾಂಶ
ಹಾವೇರಿ: ಮಕ್ಕಳಲ್ಲಿ ಕ್ರಿಯಾಶೀಲತೆ, ಸೃಜನಶೀಲತೆ ಬೆಳೆಸಲು, ಬುದ್ಧಿಶಕ್ತಿ ಹೆಚ್ಚಳಕ್ಕೆ ಹಾಗೂ ಪ್ರತಿಭೆಗಳ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ಸಿಡಿ ಹಾವೇರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಹೇಳಿದರು.
ನಗರದ ಅನನ್ಯ ಇಂಟರ್‌ನ್ಯಾಶನಲ್ ಸಿಬಿಎಸ್‌ಇ ಶಾಲೆಯಲ್ಲಿ ಆಯೋಜಿಸಿದ್ದ ವಿಶೇಷ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣವೆಂದರೆ ಕೇವಲ ಓದು ಬರಹಕ್ಕೆ ಸೀಮಿತವಾಗದೇ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಗೆಳೆದು ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದು ನಿಜವಾದ ಶಿಕ್ಷಣ. ಆ ನಿಟ್ಟಿನಲ್ಲಿ ನಮ್ಮ ಸಿಡಿ ಹಾವೇರಿ ವಿದ್ಯಾಸಂಸ್ಥೆಯ ಅನನ್ಯ ಇಂಟರ್‌ನ್ಯಾಶನಲ್ ಸಿಬಿಎಸ್ಇ ಶಾಲೆಯು ಬೇಸಿಗೆ ಶಿಬಿರ ಆಯೋಜಿಸಿ ಮಕ್ಕಳಿಗೆ ವಿವಿಧ ಹೊಸ ಕಲಿಕೆಗಳಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದು, ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆಯಬೇಕು ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರೊ. ಸಿ. ಮಂಜುನಾಥ ಮಾತನಾಡಿ, ಇಂದಿನ 21ನೇ ಶತಮಾನದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದೊಂದಿಗೆ ಮಕ್ಕಳು ರಜಾ ಸಮಯವನ್ನು ಟಿವಿ ಮತ್ತು ಮೊಬೈಲ್ ನೋಡುವುದರೊಂದಿಗೆ ಕಳೆಯುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿನ ಆರೋಗ್ಯ, ಕರಕುಶಲ-ಕಲೆ, ಸೃಜನಾತ್ಮಕ ಕೌಶಲ್ಯಗಳು ಹಾಗೂ ಮಾನವೀಯ ಮೌಲ್ಯಗಳು ಕ್ರಮೇಣ ಕ್ಷೀಣಿಸುತ್ತಿವೆ. ತಾಯಂದಿರು ಮಕ್ಕಳು ಸರ್ವತೋಮುಖ ಬೆಳವಣಿಗೆ ಕಾಣಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಹಾವೇರಿಯ ಸಿಡಿ ಹಾವೇರಿ ವಿದ್ಯಾಸಂಸ್ಥೆಯ ಅನನ್ಯ ಇಂಟರ್‌ನ್ಯಾಶನಲ್ ಸಿಬಿಎಸ್ಇ ಶಾಲೆಯು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಮಹತ್ವ ಮಕ್ಕಳಿಗೆ ಮನವರಿಕೆ ಮಾಡಲು 15 ದಿನಗಳ ವಿಶೇಷ ಬೇಸಿಗೆ ಶಿಬಿರ ಆಯೋಜಿಸುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದೆ ಎಂದರು.ಈ ಸಂದರ್ಭದಲ್ಲಿ ಉದ್ಯಮಿಗಳಾದ ರಾಜಣ್ಣ ಉಳ್ಳಾಗಡ್ಡಿ, ಶಾಲೆಯ ಪ್ರಾಚಾರ್ಯ ಶಿವಶಂಕರ ಮೋಟಗಿ, ಉಪ ಪ್ರಾಚಾರ್ಯ ಸಂತೋಷಗೌಡ ಪಾಟೀಲ, ಅನನ್ಯ ಪ್ರೀ-ಸ್ಕೂಲ್ ಪ್ರಾಂಶುಪಾಲರಾದ ಸುಮಾ ಬಾಲಕೃಷ್ಣ, ಕಲಾವಿದ ಪ್ರಕಾಶಗೌಡ ಗಡಿಯಪ್ಪಗೌಡ್ರ, ಪ್ರಕಾಶ ಲಂಬಿ, ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.