ಸಾರಾಂಶ
ಬೇಸಗೆ ಶಿಬಿರಗಳು ಮಕ್ಕಳನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅಭಿಪ್ರಾಯಪಟ್ಟರು.
ಬೇಸಿಗೆ ಶಿಬಿರದ ಸಮಾರೋಪ । ಕಾಶ್ಮೀರದಲ್ಲಿ ಉಗ್ರರಿಂದ ಮೃತಪಟ್ಟರಿಗೆ ಗೌರವ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಬೇಸಗೆ ಶಿಬಿರಗಳು ಮಕ್ಕಳನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅಭಿಪ್ರಾಯಪಟ್ಟರು.
ಚಿತ್ರದುರ್ಗದ ಸ್ಟೇಡಿಯಂ ಯೂತ್ಸ್ ಅಥ್ಲೆಟಿಕ್ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ಎಷ್ಟು ಮುಖ್ಯವೂ ಅಷ್ಟೇ ಪ್ರಮಾಣದಲ್ಲಿ ಬೇಸಿಗೆ ಸಮಯದಲ್ಲಿ ಇಂತಹ ಶಿಬಿರಗಳು ಪ್ರಾಮುಖ್ಯತೆ ವಹಿಸುತ್ತವೆ. ನಮ್ಮ ಕಾಲದಲ್ಲಿ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗಿ ಅಲ್ಲಿ ಮರಕೋತಿ, ಚಿನ್ನಿದಾಂಡು, ಗೋಲಿ, ಬುಗರಿ, ಕೆರೆ ಅಥವಾ ಬಾವಿಯಲ್ಲಿ ಈಜುವುದು ಸೇರಿದಂತೆ ಇತರೆ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆವು. ಅಜ್ಜಿ,ಅಜ್ಜನ ಊರುಗಳೇ ನಮಗೆ ಬೇಸಿಗೆ ಶಿಬಿರದ ರೀತಿಯಲ್ಲಿ ಗೋಚರಿಸುತ್ತಿದ್ದವು ಎಂದು ಹೇಳಿದರು.ಇಂದಿನ ಮಕ್ಕಳಿಗೆ ಆಟ ಎಂದರೆ ಬರಿ ಕ್ರಿಕೆಟ್ ಎಂದು ಮಾತ್ರ ಅರ್ಥವಾಗುತ್ತದೆ.ಇದನ್ನು ಬಿಟ್ಟು ಬೇರೆ ಆಟಗಳು ಸಹಾ ನಮ್ಮಲ್ಲಿ ಇವೆ ಎಂಬುದನ್ನು ಮರೆಯಲಾಗಿದೆ. ಮನೆಯಲ್ಲಿ ಮೊಬೈಲ್, ಇಂಟರ್‌ನೆಟ್ ಇದ್ದರೆ ಸಾಕು ಮನೆಯಿಂದ ಮಕ್ಕಳು ಹೊರಗಡೆಯೇ ಬರುವುದಿಲ್ಲ. ಸಂಜೆ ಮೈದಾನದಲ್ಲಿ ಮಕ್ಕಳು ಕಾಣುವುದು ಕಡಿಮೆಯಾಗಿದೆ. ಪೋಷಕರು ಮಕ್ಕಳಿಗೆ ಯಾವ ರೀತಿ ಅಂಕಗಳನ್ನು ಪಡೆಯಲು ಪ್ರೋತ್ಸಾಹ ನೀಡುತ್ತಾರೋ ಅದೇ ರೀತಿ ಬೇಸಿಗೆ ಸಮಯದಲ್ಲಿ ಇಂತಹ ಶಿಬಿರಗಳಿಗೆ ಕಲಿಸುವುದರ ಮೂಲಕ ತಮ್ಮ ಮಕ್ಕಳನ್ನು ಬಲಿಷ್ಠರನ್ನಾಗಿ ಮಾಡಬೇಕಿದೆ ಎಂದರು.
ಸಂಘಟಕರಾದ ಸತೀಶ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಇದಕ್ಕೆ ಪೋಷಕರು ಪ್ರೋತ್ಸಾಹ ನೀಡುವುದರ ಮೂಲಕ ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸುತ್ತಿದ್ದಾರೆ. ಇಂತಹ ಶಿಬಿರಗಳಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವುದರಿಂದ ಅವರ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.ಮಕ್ಕಳಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಇದಕ್ಕೂ ಮನ್ನಾ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಮೌನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತರಬೇತಿದಾರ ಸಾಧಿಕ್, ದೈಹಿಕ ಶಿಕ್ಷಕ ತಿಪ್ಪೇಸ್ವಾಮಿ, ಆಕಾಡೆಮಿಯ ಶಿವು, ಸತೀಶ್, ಬಸವರಾಜು, ಸುಹಾಸ್, ಶಶಾಂಕ ಗೌಡ, ನಾಗರಾಜ್ ಬೇದ್ರೇ ಇದ್ದರು. ಶಿಬಿರದಲ್ಲಿ ಸುಮಾರು 180 ಮಕ್ಕಳು ಭಾಗವಹಿಸಿದ್ದರು.