ಮಾವಿನ ಮರ ಕಡಿಸಿದ ಅರಣ್ಯಾಧಿಕಾರಿಗಳಿಗೆ ಸಮನ್ಸ್‌

| Published : Feb 17 2024, 01:16 AM IST

ಸಾರಾಂಶ

ರೈತರ ಮಾವಿನ ತೋಪಿನಲ್ಲಿನ ಮರಗಳನ್ನು ಕತ್ತರಿಸದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿತ್ತು. ಆದರೆ, ಅರಣ್ಯ ಪ್ರದೇಶ ಒತ್ತುವರಿ ಆರೋಪದಡಿ ಅರಣ್ಯಾಧಿಕಾರಿಗಳಾದ ಏಡುಕೊಂಡಲು ಮತ್ತು ಅನಿಲ್‌ ಕುಮಾರ್ ಮರಗಳನ್ನು ಕಡಿತ ಮಾಡಿಸಿದ ಆರೋಪ

ಕನ್ನಡಪ್ರಭ ವಾರ್ತೆ ಬೆಂಗಳೂರು

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಅರಣ್ಯ ಒತ್ತುವರಿ ಮಾಡಿದ ಆರೋಪದಡಿ ಕೋಲಾರದ ಶ್ರೀನಿವಾಸಪುರ ತಾಲೂಕಿನ ಉಪ್ಪಾರಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಮಾವಿನ ತೋಪಿನಲ್ಲಿ ಸುಮಾರು 1 ಲಕ್ಷದ 30 ಸಾವಿರ ಮರ ಕತ್ತರಿಸಿದ್ದಕ್ಕೆ ಸಂಬಂಧಿಸಿದಂತೆ ಜಿಲ್ಲೆ ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ಮತ್ತು ವಲಯ ಅರಣ್ಯಾಧಿಕಾರಿ ನವೀನ್‌ ಕುಮಾರ್‌ಗೆ ಹೈಕೋರ್ಟ್‌ ಸಮನ್ಸ್ ಜಾರಿಗೊಳಿಸಿದೆ.

ಈ ಸಂಬಂಧ ಉಪ್ಪಾರಪಲ್ಲಿಯ ಗುಲ್ಜಾರ್‌ ಪಾಷ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್‌, ಅರ್ಜಿದಾರರು ಸೇರಿದಂತೆ ರೈತರ ಮಾವಿನ ತೋಪಿನಲ್ಲಿನ ಮರಗಳನ್ನು ಕತ್ತರಿಸದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿತ್ತು. ಆದರೆ, ಅರಣ್ಯ ಪ್ರದೇಶ ಒತ್ತುವರಿ ಆರೋಪದಡಿ ಅರಣ್ಯಾಧಿಕಾರಿಗಳಾದ ಏಡುಕೊಂಡಲು ಮತ್ತು ಅನಿಲ್‌ ಕುಮಾರ್ ಮರಗಳನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಿದರು.ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಫೆ.21ರಂದು ಈ ಇಬ್ಬರೂ ಅಧಿಕಾರಿಗಳು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸಮನ್ಸ್‌ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.ಪ್ರಕರಣದ ಈ ಇಬ್ಬರು ಅರಣ್ಯಾ ಅಧಿಕಾರಿಗಳು ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಶ್ರೀನಿವಾಸಪುರ ತಾಲೂಕಿನ ಪಾಳ್ಯ, ಯಲವಳ್ಳಿ, ಕೇತಗಾನಹಳ್ಳಿ, ಚಿಂತೆ ಕುಂಟೆ, ನಾರಮಾಕಲ ಹಳ್ಳಿ, ಉಪ್ಪರಹಳ್ಳಿ, ಕೋಟಬಲ್ಲಹಳ್ಳಿ, ಇಲದೋಣಿ, ಲಕ್ಷ್ಮೀಪುರ, ಪಾತಪಲ್ಲಿ, ದ್ವಾರಸಂದ್ರ, ಆಲಂಬಗಿರಿ, ಸುಣ್ಣಕಲ್ಲು, ಜಿಂಕಲವಾರಿಹಳ್ಳಿ ಸೇರಿದಂತೆ ಮುಂತಾದ ಕಡೆ 1 ಲಕ್ಷ 30 ಸಾವಿರಕ್ಕೂ ಹೆಚ್ಚಿನ ಮರಗಳನ್ನು ಕಡಿಯಲು ಕಾರಣವಾಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ..