ಸಾರಾಂಶ
ಯಾವುದೇ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಯಾವುದೇ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.ಕಟ್ಟೆಮಾಡು ಶ್ರೀ ಮಹಾ ಮೃತುಂಜಯ ದೇವಾಲಯದಲ್ಲಿ ವಸ್ತ್ರ ಸಂಹಿತೆ ವಿಚಾರದಲ್ಲಿ ಉಂಟಾದ ಗೊಂದಲದ ಬಳಿ ಸುಮುದಾಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುತ್ತಿರುವುದು ಕಂಡು ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಪ್ರತ್ಯೇಕ ದೂರುಗಳನ್ನು ಆಧರಿಸಿ ಇಬ್ಬರು ವಿರುದ್ದ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ದೇವಾಲಯದ ವಿಚಾರದ ಕುರಿತು ಎರಡೂ ಸಮುದಾಯದ ಮುಖಂಡರ ಜೊತೆಯಲ್ಲಿ ಶಾಂತಿ ಸಭೆ ಆಯೋಜಿಸಿ ಪರಸ್ಪರ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ. ಎರಡೂ ಸಮುದಾಯದ ಮುಖಂಡರು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದರಂತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರೂ ಕೂಡ ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಆಯಾ ಸಮುದಾಯದ ಪ್ರಮುಖರು ಮತ್ತು ಹಿರಿಯರು ಕೂಡ ಕರೆ ನೀಡಿಬೇಕೆಂದು ರಾಮರಾಜನ್ ಅಭಿಪ್ರಾಯ ವ್ಯಕ್ತಪಡಿಸಿದರು.ನಿಷೇಧಾಜ್ಞೆ ವ್ಯಾಪ್ತಿ ಕಡಿತಕ್ಕೆ ಚಿಂತನೆ:
ಕಟ್ಟೆಮಾಡು ಗ್ರಾಮದ 5 ಕಿ.ಮೀ ವ್ಯಾಪ್ತಿಯಲ್ಲಿ ಈಗಾಗಲೇ ಸೆಕ್ಷನ್ 163 ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಈ ಅವಧಿಯಲ್ಲಿ ಪ್ರತಿಭಟನೆ, ರ‍್ಯಾಲಿ, ಸಭೆಗಳನ್ನು ನಡೆಸಲು ಅವಕಾಶವಿಲ್ಲ. ಗ್ರಾಮದ ಹಿತದೃಷ್ಟಿಯಿಂದ ಈ ನಿಷೇಧಾಜ್ಞೆ ವ್ಯಾಪ್ತಿಯನ್ನು ದೇವಾಲಯದ ಸುತ್ತಮುತ್ತಲಿನ ಪ್ರದೇಶಕ್ಕೆ ತಗ್ಗಿಸುವ ಬಗ್ಗೆ ಚಿಂತನೆ ಇದೆ. ಈ ಕುರಿತು ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ರಾಮರಾಜನ್ ತಿಳಿಸಿದ್ದಾರೆ.