ಬಿಸಿಲ ಧಗೆ: ಆರೋಗ್ಯದ ಬಗ್ಗೆ ಕಾಳಜಿಗೆ ಸೂಚನೆ

| Published : Mar 13 2025, 12:47 AM IST

ಸಾರಾಂಶ

ಪ್ರಸ್ತುತ ವರ್ಷ ಬೇಸಿಗೆ ಆರಂಭವಾಗಿದ್ದು ಸೂರ್ಯನ ತಾಪಮಾನ ಎಂದಿಗಿಂತಲೂ ಹೆಚ್ಚು ಇರಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಬಿಸಿ ಗಾಳಿ ಹಾಗೂ ನಿರಂತರವಾಗಿ ನಿಸರ್ಗದಲ್ಲಿ ಬದಲಾಗುವ ವಾತಾವರಣದಿಂದ ಮಾನವನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ಬೀರುತ್ತಿದ್ದು, ಸಾರ್ವಜನಿಕರು ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು

ಡಾ.ಅಶ್ವಥ್ ಬಾಬು ಸಲಹೆ । ಆರೋಗ್ಯ ಇಲಾಖೆಯಿಂದ ಜನರು ಕೆಲವು ಸೂಚನೆ, ಕಡ್ಡಾಯವಾಗಿ ಪಾಲಿಸಲು ಮನವಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪ್ರಸ್ತುತ ವರ್ಷ ಬೇಸಿಗೆ ಆರಂಭವಾಗಿದ್ದು ಸೂರ್ಯನ ತಾಪಮಾನ ಎಂದಿಗಿಂತಲೂ ಹೆಚ್ಚು ಇರಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಬಿಸಿ ಗಾಳಿ ಹಾಗೂ ನಿರಂತರವಾಗಿ ನಿಸರ್ಗದಲ್ಲಿ ಬದಲಾಗುವ ವಾತಾವರಣದಿಂದ ಮಾನವನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ಬೀರುತ್ತಿದ್ದು, ಸಾರ್ವಜನಿಕರು ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು ತಿಳಿಸಿದ್ದಾರೆ.

ಚಳಿಗಾಲದಲ್ಲಿ ಉಸಿರಾಟದ ತೊಂದರೆ ಜಾಸ್ತಿಯಿರುತ್ತದೆ. ಆದರೆ, ಬೇಸಿಗೆಯಲ್ಲಿ ಹೀಟ್ ವೇಟ್, ಹೀಟ್‌ ಸ್ಟ್ರೋಕ್ ಹೆಚ್ಚಾಗಿ ಕಂಡು ಬರುತ್ತದೆ. ನಮ್ಮ ದೇಹದಲ್ಲಿರುವ ಉಷ್ಣಾಂಶಕ್ಕಿಂತ ತಾಪಮಾನ ಏರಿಕೆ ಉಂಟಾದಾಗ ಹೆಚ್ಚು ಬೆವರುವುದು, ಸುಸ್ತು ಬಾಯಾರುವುದು, ತಲೆ ಸುತ್ತುವುದು, ಕಣ್ಣು ಮಂಜಾಗುವುದರ ಜೊತೆಗೆ ನಿರ್ಜಲಿಕರಣದಿಂದ ಮೂರ್ಛೆ ಬಂದು ಬೀಳಬಹುದು, ಆದ್ದರಿಂದ ಪ್ರತಿಯೊಬ್ಬರೂ ಪ್ರಖರ ಬಿಸಿಲಿನಿಂದ ಆದಷ್ಟು ದೂರವಿರಬೇಕು.

ಬೇಸಿಗೆಯ ಅವಧಿಯಲ್ಲಿ ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಹೆಚ್ಚಿನ ತಾಪಮಾನವಿದ್ದು, ಗರ್ಭಿಣಿಯರು, ಮಕ್ಕಳು, ವೃದ್ಧರು ಹೆಚ್ಚಾಗಿ ಈ ಅವಧಿಯಲ್ಲಿ ಮನೆಯಿಂದ ಹೊರಗಡೆ ಬರುವುದನ್ನು ಆದಷ್ಟು ಕಡಿಮೆ ಮಾಡಬೇಕು. ಸಡಿಲವಾದ ಕಾಟನ್ ಬಟ್ಟೆ, ಕೂಲಿಂಗ್ ಗ್ಲಾಸ್ ಧರಿಸಬೇಕು, ಹೆಚ್ಚು ನೀರು ಕುಡಿಯಬೇಕು ಎಂದಿದ್ದಾರೆ.

ಕೆಲಸದ ಸ್ಥಳದಲ್ಲಿ ಕೆಲಸಗಾರರಿಗೆ ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಪ್ರತಿ 20 ನಿಮಿಷಗಳಿಗೊಮ್ಮೆ ಒಂದು ಗ್ಲಾಸ್ ಅಥವಾ ಅದಕ್ಕಿಂತ ಹೆಚ್ಚು ನೀರು ಕುಡಿಯುವಂತೆ ಗಮನ ವಹಿಸಬೇಕು. ಕೆಲಸಗಾರರು ನೇರವಾದ ಸೂರ್ಯನ ಬೆಳಕಿನಲ್ಲಿ ಕೆಲಸ ನಿರ್ವಹಿಸದಂತೆ ಎಚ್ಚರ ವಹಿಸಬೇಕು. ಕೆಲಸಗಾರರಿಗೆ ನೆರಳಿನಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ, ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಬಹುದು. ಶ್ರಮದಾಯಕ ಹಾಗೂ ಹೊರಾಂಗಣ ಚಟುವಟಿಕೆಗಳನ್ನು, ತಾಪಮಾನವು ಕಡಿಮೆ ಇರುವ ಸಮಯದಲ್ಲಿ ಅಂದರೆ, ಬೆಳಗಿನ ಅಥವಾ ಸಂಜೆಯ ಸಮಯದಲ್ಲಿ ನಿರ್ವಹಿಸುವಂತೆ ವೇಳಾಪಟ್ಟಿಯನ್ನು ಸಿದ್ಧಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

ಹೊರಾಂಗಣ ಚಟುವಟಿಕೆಗಳ ಸಂದರ್ಭದಲ್ಲಿ ಕೆಲಸಗಾರರಿಗೆ, ಪ್ರತಿ ಒಂದು ಗಂಟೆಗೆ ಐದು ನಿಮಿಷಗಳ ಬಿಡುವನ್ನು ನೀಡಬೇಕು. ಹೆಚ್ಚುವರಿ ಕೆಲಸಗಾರರನ್ನು ನೇಮಿಸಿಕೊಳ್ಳಬೇಕು. ಸಾಮಾನ್ಯವಾಗಿ ಹೆಚ್ಚಿನ ಉಷ್ಣತೆಗೆ ಹೊಂದಿಕೊಳ್ಳಲು ಒಂದು ವಾರ ಅವಧಿಯ ಅವಶ್ಯಕತೆ ಇರುತ್ತದೆ. ಆದ್ದರಿಂದ, ಮೊದಲ ವಾರದಲ್ಲಿ ಪ್ರತಿ ದಿನ 3 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬಾರದು. ನಂತರ ಕೆಲಸದ ಅವಧಿಯನ್ನು ಹಂತ ಹಂತವಾಗಿ ಹೆಚ್ಚಿಸಬಹುದು.

ಬಿಸಿಯಾದ ಗಾಳಿ ಹಾಗೂ ಉಷ್ಣತೆಯ ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಲಕ್ಷಣಗಳನ್ನು ಗುರುತಿಸುವಂತೆ, ಕೆಲಸಗಾರರಿಗೆ ತರಬೇತಿ ನೀಡಬೇಕು. ವ್ಯಕ್ತಿಗೆ ತನ್ನಲ್ಲಿನ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗದೇ ಇರುವ ಸಂದರ್ಭಗಳು ಹೆಚ್ಚಿರುವುದರಿಂದ, ಜೊತೆಯಲ್ಲಿನ ಕೆಲಸಗಾರರು ಲಕ್ಷಣಗಳನ್ನು ಪತ್ತೆ ಹಚ್ಚಬೇಕು. ಪ್ರಥಮ ಚಿಕಿತ್ಸೆಯನ್ನು ನೀಡಲು ತರಬೇತಿ ಹೊಂದಿರುವವರು ಲಭ್ಯವಿರಬೇಕು ಹಾಗೂ ಬಿಸಿಗಾಳಿ ಮತ್ತು ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾದ ಸಂದರ್ಭದಲ್ಲಿ ಸ್ಪಂದಿಸಲು ತುರ್ತು ಪ್ರತಿಕ್ರಿಯೆ ಯೋಜನೆಯು ಸಿದ್ದಪಡಿಸಬೇಕು.

ಗರ್ಭಿಣಿಯರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ನಿಗದಿತ ಆರೋಗ್ಯ ಸಮಸ್ಯೆಗೆ ಔಷಧೋಪಚಾರವನ್ನು ಪಡೆಯುತ್ತಿರುವವರು. ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವ ಮುನ್ನ. ತಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಅಗತ್ಯವಾಗಿದೆ. ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ತಿಳಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಪ್ಯಾಂಟ್ ಧರಿಸಬೇಕು. ಹಾಗೂ ಸೂರ್ಯನ ಶಾಖದಿಂದ ರಕ್ಷಿಸಿಕೊಳ್ಳಲು ತಲೆಯ ಭಾಗವನ್ನು ಮುಚ್ಚಿಕೊಳ್ಳಬೇಕು. ಬಿಸಿಗಾಳಿ ಮತ್ತು ಉಷ್ಣತೆಯ ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಕೆಲಸಗಾರರಲ್ಲಿ ಅರಿವು ಮೂಡಿಸಲು ಶಿಬಿರಗಳನ್ನು ಆಯೋಜಿಸಬೇಕು. ತಾಪಮಾನ ಹಾಗೂ ಮುನ್ಸೂಚನೆ ಕುರಿತು ಮಾಹಿತಿ ನೀಡುವ ವ್ಯವಸ್ಥೆಯನ್ನು ಕೆಲಸದ ಸ್ಥಳಗಳಲ್ಲಿ ಅಳವಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.