ಹಿರೇಕೆರೂರು ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಸೂರ್ಯಕಾಂತಿ ಹಾಗೂ ಮೆಕ್ಕೆಜೋಳ ಬೆಳೆಯಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಗಿಳಿ ಹಾಗೂ ಮಂಗಗಳ ಕಾಟದಿಂದ ಬೇಸತ್ತಿದ್ದಾರೆ.

ರವಿ ಮೇಗಳಮನಿ

ಹಿರೇಕೆರೂರು: ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಸೂರ್ಯಕಾಂತಿ ಹಾಗೂ ಮೆಕ್ಕೆಜೋಳ ಬೆಳೆಯಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಗಿಳಿ ಹಾಗೂ ಮಂಗಗಳ ಕಾಟದಿಂದ ಬೇಸತ್ತಿದ್ದಾರೆ.

ತಾಲೂಕಿನ ಹಿರೇಕೆರೂರು ಬಸರಿಹಳ್ಳಿ, ನೂಲಗೇರಿ, ಸೋಮನಹಳ್ಳಿ, ಬಾಳಂಬೀಡ, ಅಲದಕಟ್ಟಿ, ದೂದಿಹಳ್ಳಿ, ಚನ್ನಳ್ಳಿ, ತಾವರಗಿ, ಹಾದ್ರಿಹಳ್ಳಿ, ಡಮ್ಮಳ್ಳಿ, ಬುರಡಿಕಟ್ಟಿ, ಕಾಲ್ಹಿಹಳ್ಳಿ, ಹೊಲಬಿಕೊಂಡ ಗ್ರಾಮಗಳು ಸೇರಿದಂತೆ ತಾಲೂಕಿನ ವ್ಯಾಪ್ತಿಯಲ್ಲಿ ಬೆಳೆದಿರುವ ಸೂರ್ಯಕಾಂತಿ ಹಾಗೂ ಮೆಕ್ಕೆಜೋಳದ ಹೊಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗಿಳಿ ದಾಳಿ ಇಡುತ್ತಿವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನೆಲ್ಲ ಖಾಲಿ ಮಾಡುತ್ತಿವೆ. ಇವುಗಳ ಉಪಟಳದಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಮಾಡಬೇಕಾಗಿದೆ. ದಿನವಿಡೀ ಪೀಪಿ, ತಮಟೆ, ಡಿಜಿಟಲ್ ಶಬ್ದ ಮಾಡುವ ಪರಿಕರಗಳನ್ನು ಹಿಡಿದು ಹೊಲಗಳನ್ನು ಕಾಯುವ ಅನಿವಾರ್ಯತೆ ಎದುರಾಗಿದೆ.

ಬೆಳಗಿನ ಜಾವ ಹಾಗೂ ಸಂಜೆ ಹೊತ್ತು ಹಿಂಡುಹಿಂಡಾಗಿ ಗಿಳಿಗಳು ದಾಳಿ ಇಡುತ್ತಿವೆ. ಇದರಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ದೊಡ್ಡ ತಲೆನೋವಾಗಿದ್ದು, ಸಂಕಷ್ಟದ ಪರಿಸ್ಥಿತಿ ಉದ್ಭವಿಸಿದೆ ಎನ್ನುವುದು ರೈತರ ಅಳಲಾಗಿದೆ.

ಮುಂಗಾರಿನಲ್ಲಿ ಬೆಳೆದ ಮೆಕ್ಕೆಜೋಳದ ರಾಶಿಗಳು ಉತ್ತಮ ಬೆಂಬಲ ಬೆಲೆ ಸಿಗದೆ ಇನ್ನೂ ಹೊಲಗದ್ದೆಗಳಲ್ಲಿ ಇವೆ. ಉತ್ತಮ ಬೆಲೆ ಸಿಗದಿರುವುದರಿಂದ ಉಳುಮೆಗೆ ಖರ್ಚು ಮಾಡಿದ ಹಣ ವಾಪಸ್‌ ಬರುತ್ತದೆಯೋ, ಇಲ್ಲವೋ ಎಂದು ತಾಲೂಕಿನ ರೈತರ ಚಿಂತೆ ಮಾಡುವಂತಾಗಿದೆ.

ತಾಲೂಕಿನಲ್ಲಿ 26,700 ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. ಇದರಲ್ಲಿ ಬೇಸಿಗೆ ಬೆಳೆಯಾದ ಮೆಕ್ಕೆಜೋಳ 1850 ಹೆಕ್ಟೇರ್ ಹಾಗೂ ಸೂರ್ಯಕಾಂತಿ 2100 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ರೈತರು ಸ್ವತಃ ಬೆಳೆಗಳನ್ನು ಕಾಯ್ದುಕೊಳ್ಳಬೇಕು. ಗಿಳಿಯಿಂದ ಹಾಳಾದ ಬೆಳೆಗಳಿಗೆ ಯಾವುದೇ ರೀತಿ ಪರಿಹಾರ ಇಲಾಖೆಯಿಂದ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ಹೇಳಿದರು.