ಸೂರ್ಯಕಾಂತಿ ಬೆಲೆ ದಿಢೀರ್ ಕುಸಿತ, ರೈತರು ಕಂಗಾಲು

| Published : Mar 28 2025, 12:32 AM IST

ಸಾರಾಂಶ

ನರಗುಂದ ತಾಲೂಕಿನ ರೈತರು ಸೂರ್ಯಕಾಂತಿ ಬೆಳೆ ಕಟಾವು ಮಾಡುವ ಪೂರ್ವದಲ್ಲಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹6500ರಿಂದ ₹6800 ವರೆಗೆ ಬೆಲೆಯಿತ್ತು. ಕಟಾವು ಮಾಡಿ ಮಾರುಕಟ್ಟೆಗೆ ತಂದ ಆನಂತರ ಪ್ರತಿ ಕ್ವಿಂಟಲ್‌ಗೆ ₹5500ರಿಂದ ₹5800ಕ್ಕೆ ಕುಸಿದಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಹಿಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಸೂರ್ಯಕಾಂತಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದ ಹಿನ್ನೆಲೆಯಲ್ಲಿ ರೈತರು ನಿರಾಶರಾಗಿದ್ದಾರೆ.

ತಾಲೂಕಿನ ರೈತರು ಸೂರ್ಯಕಾಂತಿ ಬೆಳೆ ಕಟಾವು ಮಾಡುವ ಪೂರ್ವದಲ್ಲಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹6500ರಿಂದ ₹6800 ವರೆಗೆ ಬೆಲೆಯಿತ್ತು. ಕಟಾವು ಮಾಡಿ ಮಾರುಕಟ್ಟೆಗೆ ತಂದ ಆನಂತರ ಪ್ರತಿ ಕ್ವಿಂಟಲ್‌ಗೆ ₹5500ರಿಂದ ₹5800ಕ್ಕೆ ಕುಸಿದಿದೆ. ದಿಢೀರ್‌ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.

ಪ್ರತಿವರ್ಷ ತಾಲೂಕಿನ ರೈತರು ಹಿಂಗಾರು ಹಂಗಾಮಿನಲ್ಲಿ ಮಲಪ್ರಭಾ ಕಾಲುವೆಗೆ ಹೊಂದಿರುವ ನೀರಾವರಿ ಜಮೀನುಗಳಿಗೆ ಎಣ್ಣೆ ಕಾಳು ಬೆಳೆ ಬಿತ್ತನೆ ಮಾಡಿ ಪ್ರತಿ 1 ಎಕರೆಗೆ 6ರಿಂದ 8 ಕ್ವಿಂಟಲ್ ಇಳುವರಿ ತೆಗೆದಿದ್ದಾರೆ. ಸದ್ಯ ಮಾರುಕಟ್ಟೆ ದರದಿಂದ ರೈತರಿಗೆ ಹಾನಿ ಉಂಟಾಗಿದೆ.

ಬೆಲೆ ನಿಯಂತ್ರಣ ನಮ್ಮ ಕೈಯ್ಯಲ್ಲಿ ಇಲ್ಲ ಎಂದು ವ್ಯಾಪಾರಸ್ಥರು ಬೆಲೆ ಕುಸಿತದ ಬಗ್ಗೆ ಕೈಚೆಲ್ಲಿಬಿಡುತ್ತಾರೆ. ಪ್ರತಿ ದಿನ ನಾಲ್ಕು ಬಾರಿ ಎಣ್ಣೆ ಕಾಳು ಸೇರಿ ವಿವಿಧ ಬೆಳೆಗಳ ಬೆಲೆ ಮಾರುಕಟ್ಟೆಯಲ್ಲಿ ನಿಗದಿಯಾಗುತ್ತದೆ. ಆ ಪ್ರಕಾರ ನಾವು ರೈತರ ಬೆಳೆ ಖರೀದಿಸುತ್ತೇವೆ ಎನ್ನುತ್ತಾರೆ.

ರೈತನಿಗೆ ಸಿಗುತ್ತಿಲ್ಲ ಬೆಂಬಲ ಬೆಲೆ ಭಾಗ್ಯ: ಸರ್ಕಾರ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸೂರ್ಯಕಾಂತಿ ಪ್ರತಿ 1 ಕ್ವಿಂಟಲ್‌ಗೆ ₹7280 ನಿಗದಿ ಮಾಡಿದೆ. ಆದರೆ ಸದ್ಯ ಸರ್ಕಾರ ತಾಲೂಕಿನಲ್ಲಿ ಈ ಬೆಳೆ ಖರೀದಿ ಮಾಡಲು ಬೆಂಬಲ ಬೆಲೆ ಕೇಂದ್ರ ಪ್ರಾರಂಭ ಮಾಡಿಲ್ಲ. ಹೀಗಾಗಿ ರೈತರು ಕಡಿಮೆ ಬೆಲೆಗೆ ಬೇರೆಡೆ ಮಾರಾಟ ಮಾಡಬೇಕಾದ ಸ್ಥಿತಿ ಬಂದಿದೆ.

2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಮಲಪ್ರಭಾ ನೀರಾವರಿ ಕಾಲುವೆಗಳಿಗೆ ಹೊಂದಿರುವ ನೀರಾವರಿ ಜಮೀನಿನಲ್ಲಿ ರೈತರು 7358 ಹೆಕ್ಟೇರ್‌ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ ಎಂದು ಕೃಷಿ ಅಧಿಕಾರಿಗಳು ಹೇಳಿದರು.

ಈ ವರ್ಷ ಹಿಂಗಾರು ಹಂಗಾಮಿನಲ್ಲಿ ರೈತರು ಹೆಚ್ಚು ಸೂರ್ಯಕಾಂತಿ ಬೆಳೆ ಬೆಳೆದಿದ್ದಾರೆ. ನರಗುಂದದಲ್ಲಿ ಸೂರ್ಯಕಾಂತಿ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ ಹೇಳಿದರು.ಸರ್ಕಾರ ಒಂದು ವಾರದಲ್ಲಿ ಸೂರ್ಯಕಾಂತಿ ಬೆಂಬಲ ಬೆಲೆಯ ಕೇಂದ್ರ ಪ್ರಾರಂಭ ಮಾಡಬೇಕು. ಸೂರ್ಯಕಾಂತಿ ಖರೀದಿ ಮಾಡಲು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಎಚ್ಚರಿಸಿದರು.