ಸಾರಾಂಶ
ಸಂಪತ್ ತರೀಕೆರೆ
ಬೆಂಗಳೂರು : ಕಬ್ಬನ್‌ಪಾರ್ಕ್ ವಾಯುವಿಹಾರಿಗಳು, ಪ್ರವಾಸಿಗಳು, ಪರಿಸರ ಪ್ರೇಮಿಗಳು ಮತ್ತು ಸಂಗೀತ ಪ್ರಿಯರಿಗೆ ಸಂತಸ ಸುದ್ದಿ. ಕಳೆದ ಐದಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ‘ಉದಯರಾಗ’ ಮತ್ತು ‘ಸಂಧ್ಯಾರಾಗ’ ಎಂಬ ಸಂಗೀತ ಕಾರ್ಯಕ್ರಮ ಪುನಾರಂಭಗೊಳ್ಳಲಿದೆ.
ಇದೀಗ ತೋಟಗಾರಿಕೆ ಇಲಾಖೆ ಕೋರಿಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರ ಆಸಕ್ತಿಯಿಂದಾಗಿ ಮತ್ತೆ ಕಬ್ಬನ್‌ಪಾರ್ಕ್‌ನಲ್ಲಿ ‘ಉದಯರಾಗ’ ಮತ್ತು ‘ಸಂಧ್ಯಾರಾಗ’ ಸಂಗೀತ ಮತ್ತು ಪರಿಸರ ಪ್ರೇಮಿಗಳನ್ನು ರಂಜಿಸಲಿದೆ. ಅದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕ್ರಿಯಾಯೋಜನೆಯಲ್ಲಿ ಅನುದಾನ ಒದಗಿಸಿದೆ. ವರ್ಷಪೂರ್ತಿ ಪ್ರತಿ ಭಾನುವಾರ ಮುಂಜಾನೆ ಕಬ್ಬನ್‌ಪಾರ್ಕ್‌ನಲ್ಲಿ ‘ಉದಯರಾಗ’ ಆಯೋಜಿಸಲು 15 ಲಕ್ಷ ರು. ಅನುದಾನ ಮತ್ತು ‘ಸಂಧ್ಯಾರಾಗ’ಕ್ಕೆ ಪ್ರತ್ಯೇಕ ವಿಭಾಗದಲ್ಲಿ ಅನುದಾನವನ್ನು ಸರ್ಕಾರ ಒದಗಿಸಿದೆ ಎಂದು ಇಲಾಖೆ ಮೂಲಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿವೆ.
ಐದಾರು ವರ್ಷಗಳಿಗಿಂತ ಮೊದಲು ಕಲಾವಿದರ ತಂಡ ಸಂಗೀತ ಪರಿಕರಗಳೊಂದಿಗೆ ಆಗಮಿಸಿ ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ಕಾರ್ಯಕ್ರಮ ನೀಡುತ್ತಿತ್ತು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮ ನಡೆಯುತ್ತಿತ್ತು. ವಾಯುವಿಹಾರಿಗಳು, ಸಾರ್ವಜನಿಕರು, ಪ್ರವಾಸಿಗರು ಒಂದೆರಡು ಗಂಟೆ ಕುಳಿತು ಸಂಗೀತ ಆಲಿಸಿ ಬಹಳ ಸಂತೋಷದಿಂದ ತೆರಳುತ್ತಿದ್ದರು. ಕೋವಿಡ್-19 ಆರಂಭಕ್ಕೂ ಎರಡು ವರ್ಷ ಮೊದಲು ಏಕಾಏಕಿ ಈ ಸಂಗೀತ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತ್ತು. ಈ ನಡುವೆ ಕೊರೋನಾ ಸೋಂಕು ನೆಪವಾಯಿತಷ್ಟೇ.
ತೋಟಗಾರಿಕೆ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಉದಯರಾಗ ಮತ್ತು ಸಂಧ್ಯಾರಾಗ ಕಾರ್ಯಕ್ರಮವನ್ನು ಕಬ್ಬನ್‌ಪಾರ್ಕ್ ಮತ್ತು ಲಾಲ್‌ಬಾಗ್‌ನಲ್ಲಿ ಆಯೋಜಿಸಲು ಸಹಕಾರ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ತೋಟಗಾರಿಕೆ ಇಲಾಖೆ ಪ್ರಸ್ತಾವನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಗೀತ ಕಾರ್ಯಕ್ರಮ ಆಯೋಜನೆಗೆ ಒಪ್ಪಿಗೆ ನೀಡಿದ್ದು ಒಂದೆರಡು ವಾರಗಳಲ್ಲಿ ಮತ್ತೆ ಕಬ್ಬನ್ ಉದ್ಯಾನದಲ್ಲಿ ಪ್ರತಿ ಭಾನುವಾರ ಉದಯರಾಗ, ಸಂಧ್ಯಾರಾಗ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಇದುವರೆಗೆ ಲಿಖಿತ ಅಥವಾ ಮೌಖಿಕವಾಗಿ ಸಂಗೀತ ಕಾರ್ಯಕ್ರಮ ಆಯೋಜನೆ ಬಗ್ಗೆ ಆದೇಶ ಬಂದಿಲ್ಲ. ಸರ್ಕಾರ ಅನುಮೋದನೆ ಕೊಟ್ಟರೆ ಉದ್ಯಾನಕ್ಕೆ ಬರುವವರಿಗೆ ಅದ್ಭುತ ವೇದಿಕೆ ಒದಗಿಸಿದಂತೆ. ಕಲಾವಿದರಿಗೂ ಅವಕಾಶ ಸಿಗುತ್ತದೆ. ಆಹ್ಲಾದಕರ ಪರಿಸರದೊಂದಿಗೆ ಸಂಗೀತ ಇದ್ದರೆ ಮನೋಲ್ಲಾಸವೂ ಸಿಗಲಿದೆ.
- ಡಾ.ಎಂ.ಜಗದೀಶ್, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ.
ಪ್ರತಿ ಭಾನುವಾರವೂ ಕಬ್ಬನ್‌ಪಾರ್ಕ್ ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉದಯರಾಗ, ಸಂಧ್ಯಾರಾಗ ನಡೆಸಿಕೊಟ್ಟರೆ ಇನ್ನಷ್ಟು ಅನುಕೂಲವಾಗಲಿದೆ.
- ಕುಸುಮಾ, ಉಪ ನಿರ್ದೇಶಕರು, ಕಬ್ಬನ್ ಪಾರ್ಕ್.