ಮಾತೆ ಮರಿಯಮ್ಮ ನವರ ಜನ್ಮದಿನ (ಮೊಂತಿಪೆಸ್ತ್) ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಕಾರ್ಯಕ್ರಮ ನಡೆಯಿತು.
ಮಡಿಕೇರಿ ಸುಂಟಿಕೊಪ್ಪ
ಮಾತೆ ಮರಿಯಮ್ಮ ನವರ ಜನ್ಮದಿನ (ಮೊಂತಿಪೆಸ್ತ್) ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಕಾರ್ಯಕ್ರಮ ನಡೆಯಿತು.ವಿಶೇಷ ಪ್ರಾರ್ಥನೆ, ಅಡಂಬರ ದಿವ್ಯ ಬಲಿಪೂಜೆ, ಮೊಂಬತ್ತಿ ಹಿಡಿದು ಮಾತೆ ಮರಿಯಮ್ಮನವರ ಸ್ವರೂಪದೊಂದಿಗೆ ಮೆರವಣಿಗೆಯ ಮೂಲಕ ಸಂತ ಮೇರಿ ಶಾಲಾ ಆವರಣದಲ್ಲಿ ಇರಿಸಿ ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಪುಷ್ಪನಮನ ಸಲ್ಲಿಸಿದರು. ಮಕ್ಕಳು ಮತ್ತು ಯುವತಿಯರು ಮಾತೆ ಮರಿಯಮ್ಮನವರ ವಿನ್ಯಾಸದ ವಸ್ತ್ರಾಲಂಕಾರ ಸ್ಪರ್ಧೆ, ನಂತರ ನೂತನ ಭತ್ತದ ತೆನೆಯನ್ನು ವಿತರಿಸುವ ಮೂಲಕ ಮಾತೆ ಮರಿಯಮ್ಮನವರ ಜಯಂತಿ ಸಂಭ್ರಮಾಚರಣೆಗೆ ಮುನ್ನುಡಿ ಇಡಲಾಯಿತು.
ಮಂಗಳವಾರ ಮಾತೆ ಮರಿಯಮ್ಮನವರ ಜನ್ಮದಿನದ ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಬೆಳಿಗ್ಗೆ ವಿಶೇಷ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಮಡಿಕೇರಿ ಸಂತ ಮರಡಿಯೂರು ದೇವಾಲಯದ ಧರ್ಮಗುರುಗಳಾದ ರೇ.ಫಾ.ಜಾರ್ಜ್ ದೀಪಕ್, ಮೈಸೂರಿನ ಧರ್ಮಕೇಂದ್ರದ ರೇ.ಫಾ.ಸಿಲ್ವೆಮುತ್ತು ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾದರ್ ವಿಜಯಕುಮಾರ್ ಅಡಂಬರ ದಿವ್ಯ ಬಲಿಪೂಜೆ ಪ್ರಭೋದನೆಯನ್ನು ಸಮರ್ಪಿಸಿದರು. ನೊವೇನಾ ಪ್ರಾರ್ಥನೆ ಸಂದರ್ಭದಲ್ಲಿ ವಿಶೇಷವಾಗಿ ಕನ್ಯಾಮಾತೆ ಮರಿಯಮ್ಮನವರಿಗೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಲಾಗುವುದು. ಚಿಕ್ಕಮಕ್ಕಳು, ಯವಕ, ಯುವತಿಯರು ಹಾಗೂ ಹಿರಿಯರು ಪ್ರತಿ ದಿನ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಗಾಯನ ಬಲಿಪೂಜೆಯಲ್ಲಿ ಪಾಲ್ಗೊಂಡು ನಂತರ ತಾವು ತಂದ ಹೂವುಗಳನ್ನು ಮಾತೆ ಮರಿಯಮ್ಮನವರಿಗೆ ಸಮರ್ಪಿಸಿದರು.9 ದಿನಗಳ ನೊವೇನಾ ಪ್ರಾರ್ಥನೆ ಕಾರ್ಯಕ್ರಮಗಳೊಂದಿಗೆ 10ನೇ ದಿನ ಸೆ.8 ರಂದು ಹೊಸ ತೆನೆಗಳ ‘ಮೊಂತಿ ಪೆಸ್ತ್’ ಹಬ್ಬವನ್ನು ಎಲ್ಲಾ ದೇವಾಲಯಗಳಲ್ಲಿ ಸಾಮೂಹಿಕವಾಗಿ ಆಚರಿಸಿ ಪ್ರಾರ್ಥನೆ ಮಾಡಲಾಗುತ್ತದೆ. ಮನೆ ಮನೆಗಳಲ್ಲಿ ನೂತನವಾಗಿ ನೀಡಲಾದ ಭತ್ತದ ತೆನೆಗಳನ್ನು ತಾವು ತಯಾರಿಸುವ ಖಾದ್ಯ ಭೋಜನಗಳೊಂದಿಗೆ ಸೇರಿಸಿ ಸೇವಿಸುವುದು ಈ ಹಬ್ಬದ ವಿಶೇಷತೆಯಾಗಿದೆ.
ನೆರೆದಿದ್ದ ಭಕ್ತಾದಿಗಳಿಗೆ ಬೆಳಗಿನ ಉಪಹಾರವನ್ನು ವಿತರಿಸಲಾಯಿತು.