ಗ್ರಾಮದ ಜನರ ಪ್ರಮುಖ ಬೇಡಿಕೆಗಳಿಗೆ ಜನತೆ ಜತೆ ಚರ್ಚಿಸಿ ಅವರ ಇಚ್ಛೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದರಿಂದ ಯಶಸ್ಸು ಕಂಡುಕೊಳ್ಳಬಹುದು ಎಂದು ಶಾಸಕ ಡಾ. ಮಂತರ್‌ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಗ್ರಾಮದ ಜನರ ಪ್ರಮುಖ ಬೇಡಿಕೆಗಳಿಗೆ ಜನತೆ ಜತೆ ಚರ್ಚಿಸಿ ಅವರ ಇಚ್ಛೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದರಿಂದ ಯಶಸ್ಸು ಕಂಡುಕೊಳ್ಳಬಹುದು ಎಂದು ಶಾಸಕ ಡಾ. ಮಂತರ್‌ಗೌಡ ಹೇಳಿದರು.ಮಂಗಳವಾರ ಶ್ರೀ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಆಧುನಿಕ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ವಿಚಾರವಾಗಿ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂತೆ ಮಾರುಕಟ್ಟೆಯ ಮಾಜಿ ಜನಪ್ರತಿನಿಧಿಗಳು, ವ್ಯಾಪಾರಸ್ಥರು ಹಾಗೂ ಗ್ರಾಮಸ್ಥರ ಅಭಿಪ್ರಾಯಗಳನ್ನು ಆಲಿಸಿದರು. ಮುಂದಿನ 10 ದಿನಗಳ ಒಳಗಾಗಿ ವಿಶೇಷ ಗ್ರಾಮಸಭೆ ಕರೆದು ಅಲ್ಲಿ ಆಧುನಿಕ ಮಾರುಕಟ್ಟೆ ಮತ್ತು ಬಸ್‌ನಿಲ್ದಾಣ ಹೇಗೆ ನಿರ್ಮಿಸಬಹುದು ಎಂಬುದರ ಕುರಿತು ಕನಿಷ್ಠ 3 ನೀಲಿ ನಕ್ಷೆಯೊಂದಿಗೆ ಸಭೆಯಲ್ಲಿ ವಿವರ ನೀಡುವಂತೆ ಕಂದಾಯ ಪರಿವೀಕ್ಷಕ ಎಚ್. ಎಂ. ಪ್ರಶಾಂತ್ ಮತ್ತು ಸುಂಟಿಕೊಪ್ಪ ಗ್ರೇಡ್ 1 ಗ್ರಾ.ಪಂ. ಆಡಳಿತಾಧಿಕಾರಿ ರಾಕೇಶ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಅವರಿಗೆ ನಿರ್ದೇಶನ ನೀಡಿದರು.ಪಂಚಾಯಿತಿ ವತಿಯಿಂದ ನೂತನ ಮಾರುಕಟ್ಟೆಯ ಬಗ್ಗೆ ಕಾರ್ಯಕ್ರಮ ರೂಪಿಸಬೇಕಾಗಿದ್ದು ನೂತನ ಮಾರುಕಟ್ಟೆಗೆ ಸ್ಥಳಾಂತರಗೊಂಡ ನಂತರವೇ ಹಳೆಯ ಮಾರುಕಟ್ಟೆಯನ್ನು ಬಸ್‌ನಿಲ್ದಾಣವಾಗಿ ಪರಿವರ್ತಿಸಬಹುದು. ಒಂದು ವೇಳೆ ಕೆಎಸ್‌ಆರ್‌ಟಿಸಿಗೆ ಈ ಜಾಗವನ್ನು ನೀಡಿದರೆ ಖಾಸಗಿ ಬಸ್‌ಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ. ಒಂದು ವೇಳೆ ಪಂಚಾಯಿತಿ ವತಿಯಿಂದ ಬಸ್ ನಿಲ್ಧಾಣ ರೂಪುಗೊಂಡರೆ ಖಾಸಗಿ ಮತ್ತು ಸರ್ಕಾರಿ ಬಸ್ ನಿಲುಗಡೆಗೆ ಅವಕಾಶವಿರುತ್ತದೆ. ರಾಜ್ಯ ಸಾರಿಗೆ ಸಂಸ್ಥೆಯವರಿಗೆ ಬಿಟ್ಟು ಕೊಟ್ಟಲ್ಲಿ ಪಂಚಾಯಿತಿ ಆದಾಯಕ್ಕೆ ಧಕ್ಕೆ ಹಾಗೂ ಖಾಸಗಿ ಬಸ್ ಮತ್ತು ಪ್ರವೇಶ ನಿಷೇಧಗೊಳ್ಳಲಿದೆ ಎಂದು ತಿಳಿಸಿದರು. ಈ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡು ಮುಕ್ತವಾದ ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಸುಂಟಿಕೊಪ್ಪ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಶಾಸಕರು ಮನವಿ ಮಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾ.ಪಂ. ಮಾಜಿ ಸದಸ್ಯ ಹೆಚ್.ಯು.ರಫೀಕ್ ಖಾನ್ , ಈಗಾಗಲೇ ನೂತನ ಮಾರುಕಟ್ಟೆ ನಿರ್ಮಾಣ ಸಂದರ್ಭ ಮಾಜಿ ಮತ್ತು ಹಾಲಿ ಶಾಸಕರ ಅನುದಾನ ಸೇರಿ ಇತರ ಅನುದಾನವು ಸೇರಿ 60 ಲಕ್ಷ ರು. ದಷ್ಟು ವೆಚ್ಚವಾಗಿದ್ದು, ಅದನ್ನು ವ್ಯರ್ಥವಾಗಿಸಲು ಬಿಡದೆ ಎಲ್ಲರಿಗೂ ಅನುಕೂಲಕರವಾಗುವ ರೀತಿಯಲ್ಲಿ ಕಾರ್ಯಯೋಜನೆ ರೂಪಿಸಬೇಕಾಗಿದೆ ಎಂದರು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಿ.ಆರ್.ಸುಕುಮಾರ್ ಮಾತನಾಡಿ, ಸರ್ಕಾರಿ ಅನುದಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕು ಎಂದು ಕರೆ ನೀಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮಾತನಾಡಿ, ಪಂಚಾಯಿತಿಗೆ ಆದಾಯ ಬರುವ ನಿಟ್ಟಿನಲ್ಲಿ ಕೋಳಿ, ಕುರಿ ಮತ್ತು ಮೀನು ಮಾರುಕಟ್ಟೆಗಳನ್ನು ಹರಾಜು ಹಾಕಿ ಗ್ರಾಮ ಪಂಚಾಯಿತಿ ವತಿಯಿಂದ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಆಧುನಿಕ ವಾಣಿಜ್ಯ ಸಂರ್ಕಿಣಗಳನ್ನು ನಿರ್ಮಿಸಿ ಪಂಚಾಯಿತಿಗೆ ಆದಾಯ ಬರುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕು ಎಂದು ಕರೆ ನೀಡಿದರು.ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ಮಾತನಾಡಿ, ಕಳೆದ 10 ವರ್ಷಗಳಿಂದ ನೂತನ ಮಾರುಕಟ್ಟೆ ಮತ್ತು ಬಸ್‌ನಿಲ್ದಾಣ ಸ್ಥಳಾಂತರ ಕಾರ್ಯರೂಪಕ್ಕೆ ಬಂದಿಲ್ಲ ಎಂದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್ ಮಾತನಾಡಿ, ಮಾರುಕಟ್ಟೆ ಹರಾಜು ಪ್ರಕ್ರಿಯೆಯಿಂದ ಪಂಚಾಯಿತಿಗೆ 1 ಕೋಟಿ ರು.ಗೂ ಹೆಚ್ಚು ಆದಾಯ ಬರಬೇಕಾಗಿದೆ. ಆದರೆ ಆ ಪ್ರಕ್ರಿಯೆಯೇ ನಡೆಯುತ್ತಿಲ್ಲ ಎಂದರು.
ಸುಂಟಿಕೊಪ್ಪ ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸುಂಟಿಕೊಪ್ಪ ಪ್ರಾ.ಕೃ.ಪ.ಸ.ನಿ.ಅಧ್ಯಕ್ಷ ಜರ್ಮಿಡಿಸೋಜ, ಹಿರಿಯ ವರ್ತಕ ಎಂ.ಎ.ವಸಂತ, ಫೆಲ್ಸಿ ಡೆನ್ನಿಸ್, ಗ್ರಾಮಸ್ಥರಾದ ಫೈರೋಜ್, ಸೂಪಿ, ಪ್ರಶಾಂತ್, ಹಕೀಂ, ಕೆ.ಡಿ.ರಾಮಯ್ಯ, ಬಿ.ಕೆ.ಮೋಹನ್, ಶಬ್ಬೀರ್, ಹೆಚ್.ಎಸ್.ಮುತ್ತಪ್ಪ, ಇಬ್ರಾಹಿಂ, ಡೇವಿಡ್ , ರಜಾಕ್ ಹಾಗೂ ಸಂತೆ ವ್ಯಾಪಾರಿಗಳು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಗ್ರಾ.ಪಂ. ಆಡಳಿತಾಧಿಕಾರಿ ರಾಕೇಶ್, ಕಂದಾಯ ಪರೀವಿಕ್ಷಕ ಪ್ರಶಾಂತ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಜರ್ಮಿಡಿಸೋಜ,ತಾ.ಪಂ. ಮಾಜಿ ಸದಸ್ಯ ಕೆ.ಎಸ್.ಮಂಜುನಾಥ್, ಮಾಜಿ ಅಧ್ಯಕ್ಷರಾದ ಪಿ.ಆರ್.ಸುನಿಲ್ ಕುಮಾರ್, ಶಿವಮ್ಮ ಮಹೇಶ್, ಎಂ.ಎ.ಉಸ್ಮಾನ್, ಪಿ.ಎಫ್ .ಸಬಾಸ್ಟೀನ್, ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಖಾನ್, ಜಿನಾಸುದ್ದೀನ್, ಶಬ್ಬೀರ್, ಆಲಿಕುಟ್ಟಿ, ಜಿ.ಪಂ.ಮಾಜಿ ಸದಸ್ಯೆ ಭಾನುಮತಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ, ಜಿನಾಸುದ್ದೀನ್, ಶಬ್ಬೀರ್, ಆಲಿಕುಟ್ಟಿ, ಜಿ.ಪಂ.ಮಾಜಿ ಸದಸ್ಯೆ ಭಾನುಮತಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫೆಲ್ಸಿ ಡೆನ್ನಿಸ್, ಗ್ರಾ.ಪಂ.ಮಾಜಿ ಸದಸ್ಯ ಹಾಗೂ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಕೀಂ,ಯಂಕನ ಶ್ರೀರಾಮ್ ಮತ್ತಿತರರು ಇದ್ದರು.