ಸುಂಟಿಕೊಪ್ಪ: ಸಂತ ಅಂತೋಣಿ ಚರ್ಚ್‌ನಲ್ಲಿ ಮಾತೆ ಮರಿಯಮ್ಮರ ಜನ್ಮದಿನಾಚರಣೆ, ಮೊಂತಿ ಫೆಸ್ಟ್‌

| Published : Sep 09 2025, 01:01 AM IST

ಸುಂಟಿಕೊಪ್ಪ: ಸಂತ ಅಂತೋಣಿ ಚರ್ಚ್‌ನಲ್ಲಿ ಮಾತೆ ಮರಿಯಮ್ಮರ ಜನ್ಮದಿನಾಚರಣೆ, ಮೊಂತಿ ಫೆಸ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಾತೆ ಮರಿಯಮ್ಮನವರ ಜನ್ಮದಿನದ ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಬೆಳಗ್ಗೆ ೭.೩೦ರಿಂದ ವಿಶೇಷ ಪ್ರಾರ್ಥನೆ ನಡೆಯಿತು. ಮಡಿಕೇರಿ ಸಂತ ಮೈಕಲರ ಶಾಲೆಯ ವ್ಯವಸ್ಥಾಪಕ ಸಂಜಯ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್ ದಿವ್ಯ ಬಲಿಪೂಜೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಸೋಮವಾರ ಮಾತೆ ಮರಿಯಮ್ಮನವರ ಜನ್ಮದಿನಾಚರಣೆ ವಿಶೇಷ ಪ್ರಾರ್ಥನೆ, ಆಡಂಬರ ದಿವ್ಯ ಬಲಿಪೂಜೆಯೊಂದಿಗೆ ಸಂಭ್ರಮದಲ್ಲಿ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು. ನಂತರ ಭತ್ತದ ತೆನೆಯನ್ನು ವಿತರಿಸಲಾಯಿತು.

ಮಾತೆ ಮರಿಯಮ್ಮನವರ ಜನ್ಮದಿನದ ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಬೆಳಗ್ಗೆ ೭.೩೦ರಿಂದ ವಿಶೇಷ ಪ್ರಾರ್ಥನೆ ನಡೆಯಿತು. ಮಡಿಕೇರಿ ಸಂತ ಮೈಕಲರ ಶಾಲೆಯ ವ್ಯವಸ್ಥಾಪಕ ಸಂಜಯ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್ ದಿವ್ಯ ಬಲಿಪೂಜೆ ನಡೆಸಿದರು.

ಸೆ.೮ರಂದು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯವರ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿಫೆಸ್ಟ್‌)ವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ೯ ದಿನಗಳ ಕಾಲ ಚರ್ಚ್‌ಗಳಲ್ಲಿ ವಿವಿಧ ಧರ್ಮ ಕೇಂದ್ರಗಳ ಧರ್ಮಗುರುಗಳು ದಿವ್ಯಬಲಿಪೂಜೆ, ಪ್ರಭೋದನೆ ಹಾಗೂ ನೊವೇನಾ ಪ್ರಾರ್ಥನೆ ಸಲ್ಲಿಸುತ್ತಾರೆ.

ನೊವೇನಾ ಪ್ರಾರ್ಥನೆ ಸಂದರ್ಭ ವಿಶೇಷವಾಗಿ ಕನ್ಯಾಮಾತೆ ಮರಿಯಮ್ಮನವರಿಗೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಲಾಗುವುದು. ಚಿಕ್ಕ ಮಕ್ಕಳು, ಯುವಕ, ಯುವತಿಯರು ಹಾಗೂ ಹಿರಿಯರು ಪ್ರತಿ ದಿನ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಗಾಯನ ಬಲಿಪೂಜೆಯಲ್ಲಿ ಪಾಲ್ಗೊಂಡು, ನಂತರ ತಾವು ತಂದ ಹೂವುಗಳನ್ನು ಮಾತೆ ಮರಿಯಮ್ಮನವರಿಗೆ ಸಮರ್ಪಿಸುತ್ತಾರೆ.೯ ದಿನಗಳ ನೊವೇನಾ ಪ್ರಾರ್ಥನೆ ಕಾರ್ಯಕ್ರಮಗಳೊಂದಿಗೆ ಸೆ.೮ರಂದು ಹೊಸ ತೆನೆಗಳ ‘ಮೊಂತಿ ಫೆಸ್ಟ್‌’ ಹಬ್ಬವನ್ನು ಎಲ್ಲ ಚರ್ಚ್‌ಗಳಲ್ಲಿ ಸಾಮೂಹಿಕವಾಗಿ ಆಚರಿಸಿ ಪ್ರಾರ್ಥನೆ ಮಾಡಲಾಗುತ್ತದೆ. ಮನೆಗಳಿಗೆ ನೀಡಲಾದ ಭತ್ತದ ತೆನೆಗಳನ್ನು ತಯಾರಿಸುವ ಭೋಜನಗಳೊಂದಿಗೆ ಸೇರಿಸಿ ಸೇವಿಸುವುದು ಈ ಹಬ್ಬದ ವಾಡಿಕೆಯಾಗಿದೆ.ಮೊಂತಿ ಫೆಸ್ಟ್‌ ಅಂಗವಾಗಿ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್ ಬಲಿಪೂಜೆ ಪ್ರವಚನಗಳನ್ನು ನೀಡಿದರಲ್ಲದೆ, ನೂತನ ತೆನೆಗಳನ್ನು ಆಶೀರ್ವಚಿಸಿ ವಿತರಿಸಿದರು.ಇದೇ ಸಂದರ್ಭ ನೆರೆದಿದ್ದ ಭಕ್ತರಿಗೆ ಬೆಳಗಿನ ಉಪಹಾರವನ್ನು ವಿತರಿಸಲಾಯಿತು.