ಸುಂಟಿಕೊಪ್ಪ ಮಾಸಿಕ ಸಂತೆ ಒಂದು ದಿನದ ಉತ್ಸವದಂತೆ ಕಂಡು ಬಂತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಮಾಸಿಕ ಸಂತೆ ಒಂದು ದಿನದ ಉತ್ಸವದಂತೆ ಕಂಡು ಬಂತು. ಅದು ಸಂತೆಯಲ್ಲಾದ ಸಂತೆ. ಗೃಹ ಬಳಕೆಯ ಎಲ್ಲಾ ವಸ್ತುಗಳು ಅಲ್ಲಿತ್ತು. ಸ್ವಸಹಾಯ ಮತ್ತು ಸ್ತ್ರೀಶಕ್ತಿ ಗುಂಪಿನ ಮಹಿಳಾ ಸದಸ್ಯರು ತಮ್ಮ ಗುಂಪುಗಳಲ್ಲಿ ತಯಾರಿಸಿದ ವಸ್ತುಗಳು ಅಲ್ಲದೆ ಮನೆಯ ಕೈತೋಟದಲ್ಲಿ ಬೆಳೆದ ಕಾಯಿಪಲೆಗಳನ್ನು ಪ್ರದರ್ಶನಕ್ಕಿಟ್ಟು ವ್ಯಾಪಾರ ಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ಈ ವಸ್ತುಗಳನ್ನು ಖರೀದಿಸುವ ಮೂಲಕ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ತಮ್ಮದೆಯಾದ ರೀತಿಯಲ್ಲಿ ಸಾಥ್ ನೀಡಿದರು.ಕರ್ನಾಟಕ ರಾಜ್ಯ ಸಂಜೀವಿನಿ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೊಡಗು ಜಿ.ಪಂ., ಕುಶಾಲನಗರ ತಾ ಪಂಚಾಯತ್ ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಗ್ರಾ.ಪಂ. ಮಟ್ಟದ ಸಂಜಿವಿನಿ ಒಕ್ಕೂಟದ ವತಿಯಿಂದ ಮಾಸಿಕ ಸಂತೆಯನ್ನು ಗುರುವಾರ ಪಟ್ಟಣದ ಪೆಟ್ರೋಲ್ ಬಂಕ್ ಬಳಿಯಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಸಂತೆ ಮೇಳ ಏರ್ಪಡಿಸಲಾಗಿತ್ತು. ಸಂತೆ ಮೇಳದಲ್ಲಿ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು ತಾವು ತಯಾರಿಸಿದ ಉತ್ಪನ್ನ ಹಾಗೂ ಖಾದ್ಯವಸ್ತುಗಳನ್ನು ಮಾರಾಟ ಮಾಡುವಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.