ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶಾಲಾ ಮಕ್ಕಳಿಗೆ ವಾರದ ನಾಲ್ಕು ದಿನಗಳಲ್ಲಿ ಮೊಟ್ಟೆ, ಬಾಳೆಹಣ್ಣು ನೀಡುವ ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ನಗರದಲ್ಲಿ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರಿನ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಶಾಲಾಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಪೂರಕ ಆಹಾರ ಯೋಜನೆಯಡಿ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಉಳಿದ ನಾಲ್ಕು ದಿನಗಳಲ್ಲಿ ಉಚಿತವಾಗಿ ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣನ್ನು ಶಾಸಕರು ಸಾಂಕೇತಿಕವಾಗಿ ವಿತರಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಬಳಿಕ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ರಾಜ್ಯಸರ್ಕಾರದ ವತಿಯಿಂದ ಈಗಾಗಲೇ ವಾರದಲ್ಲಿ 2 ದಿನ ಮೊಟ್ಟೆ, ಬಾಳೆಹಣ್ಣು ಹಾಗೂ ಶೆಂಗಾ ಚಿಕ್ಕಿ ವಿತರಿಸಲಾಗುತ್ತಿತ್ತು. ಆದರೂ ಮಕ್ಕಳ ಬೌದ್ಧಿಕ ಶಕ್ತಿ ಹೆಚ್ಚಿಸಿ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಅಜೀಂ ಪ್ರೇಮ್ ಜಿ ಫೌಂಡೇಶನ್ ನೆರವಿನೊಂದಿಗೆ ಹೆಚ್ಚುವರಿಯಾಗಿ ವಾರದಲ್ಲಿ ಉಳಿದ ನಾಲ್ಕು ದಿನಗಳಲ್ಲಿಯೂ ಪೂರಕ ಪೌಷ್ಠಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಆ ಮೂಲಕ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ ಎಂದರು.ಮಕ್ಕಳು ಶಾಲೆಗಳಿಗೆ ಕಡ್ಡಾಯವಾಗಿ ಬರಲು ಹಾಗೂ ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು ಸರ್ಕಾರದ ಪ್ರೋತ್ಸಾಹದಾಯಕ ಕಾರ್ಯಕ್ರಮದ ಉದ್ದೇಶವಾಗಿದೆ. ಶಾಲೆಗಳಲ್ಲಿ ಬಿಸಿಯೂಟ, ಕ್ಷೀರಭಾಗ್ಯ, ಶೂ ಭಾಗ್ಯ ಇವೆಲ್ಲವೂ ಕೂಡ ಮಕ್ಕಳು ಕಲಿಕಾ ಪ್ರಕ್ರಿಯೆಯನ್ನು ಪ್ರೇರೇಪಿಸಲು ಸಹಕಾರಿಯಾಗಿವೆ. ವಿದ್ಯೆ ಪ್ರತಿಯೊಬ್ಬರಿಗೂ ಬಹುಮುಖ್ಯ ಆಸ್ತಿ. ಶಿಕ್ಷಣದಿಂದ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಲಿದೆ. ಇದನ್ನು ಮನಗಂಡಿರುವ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಕಾಳಜಿ ವಹಿಸಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಮೋನಾ ರೋತ್ ಮಾತನಾಡಿ, ಮಕ್ಕಳ ಬುದ್ಧಿಶಕ್ತಿ ವೃದ್ಧಿಸಿ ಗುಣಮಟ್ಟದ ಶಿಕ್ಷಣದ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾರದಲ್ಲಿ ಆರು ದಿನವು ಪೂರಕ ಪೌಷ್ಠಿಕ ಆಹಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಒಟ್ಟಿನಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, ಮಕ್ಕಳ ಬುದ್ಧಿಮತ್ತೆ ಹೆಚ್ಚಿಸಲು ನೀಡಲಾಗುತ್ತಿರುವ ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆತು ಸರ್ಕಾರಿ, ಅನುದಾನಿತ ಶಾಲೆಗಳ ಬೇಡಿಕೆ ಈಡೇರಿದಂತಾಗಿದೆ. ಇದರಿಂದ ಜಿಲ್ಲೆಯ 894 ಶಾಲೆಗಳ 8293 ಮಕ್ಕಳು ಯೋಜನೆಯ ಪ್ರಯೋಜನೆ ಪಡೆಯಲಿದ್ದಾರೆ. ಸಾಮಾಜಿಕ ಹಾಗೂ ಶೈಕ್ಷಣಿಕ ಕಾಳಜಿ ಹೊಂದಿರುವ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಸ್ಥೆ ಇಲಾಖೆಯ ಖಾತೆಗೆ ಈಗಾಗಲೇ ಒಂದೂವರೆ ಸಾವಿರ ಕೋಟಿ ರು. ಜಮೆ ಮಾಡಿದೆ. ವಾರದಲ್ಲಿ 2 ದಿನ ಪೌಷ್ಟಿಕ ಆಹಾರ ಸರ್ಕಾರ ನೀಡಲಿದೆ. ಉಳಿದ 4 ದಿನ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಸ್ಥೆ ಒದಗಿಸಲಿದೆ. ಇದೇ ಸೆ.25ರಿಂದ 2025ರ ಏ.10ರವರೆಗೆ 146 ಶಾಲಾ ದಿನಗಳಲ್ಲಿ ಇದಕ್ಕಾಗಿ 4 ಕೋಟಿ 62 ಲಕ್ಷ ರು. ವೆಚ್ಚವಾಗಲಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರೇವಣ್ಣ ಅವರು ಮಕ್ಕಳ ಅಪೌಷ್ಟಿಕತೆ ನಿವಾರಿಸುವ ರಾಜ್ಯ ಸರ್ಕಾರದ ಕಾರ್ಯಕ್ರಮವನ್ನು ಮತ್ತಷ್ಟು ಬಲ ಪಡಿಸಲು ಪ್ರಸ್ತುತ ಸಾಲಿನಿಂದ ವಾರಕ್ಕೆ ಉಳಿದ 4 ದಿನಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಿಸಲು ಅಜಿಂ ಪ್ರೇಮ್ ಜೀ ಫೌಂಡೇಷನ್ ಸಂಸ್ಥೆ ನೆರವು ನೀಡಿದೆ ಎಂದು ತಿಳಿಸಿದರು.ನಗರಸಭೆ ಸದಸ್ಯರಾದ ಬಸವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜಿ. ಶ್ರೀನಿವಾಸ್, ಕೊಳ್ಳೇಗಾಲ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರಂಗಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್, ದೈಹಿಕ ಶಿಕ್ಷಕ ಚಿಕ್ಕ ಬಸವಯ್ಯ, ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಸ್ಥೆಯ ನಂದೀಶ್, ಮಂಜುನಾಥ್, ಮುಖಂಡರಾದ ಶಿವಣ್ಣ, ಇತರರು ಉಪಸ್ಥಿತರಿದ್ದರು.