ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಬೇಸಿಗೆಯ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಯಾಗಬೇಕು. ಕೊಳವೆ ಬಾವಿಗಳು ಒಣಗದಂತೆ ಮುನ್ನೆಚ್ಚರಿಕೆ ವಹಿಸಿ, ಅವುಗಳನ್ನು ಪುನಶ್ಚೇತನಗೊಳಿಸುವ ಕೆಲಸ ಆಗಬೇಕು ಮತ್ತು ಶಾಸಕರ ಅಧ್ಯಕ್ಷತೆಯಲ್ಲಿ ಬರನಿರ್ವಹಣೆಗೆ ಸಂಬಂಧಿಸಿದಂತೆ ಟಾರ್ಸ್ ಫೋರ್ಸ್ ಸಭೆಯನ್ನು ಕರೆದು ಮೂರ್ನಾಲ್ಕು ದಿನದೊಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಕರೆಯಲಾಗಿದ್ದ ತಾಲೂಕುಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ತಹಸೀಲ್ದಾರರು ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕಾರ್ಯನಿರತರಾಗಬೇಕು ಮತ್ತು ಬೋರ್‌ವೆಲ್‌ಗಳಲ್ಲಿ ಹೈಡ್ರೋಪ್ಯಾಕ್ಚರ್ ತಂತ್ರಜ್ಞಾನ ಉಪಯೋಗಿಸಿ ಬೋರ್‌ವೆಲ್‌ಗಳನ್ನು ಪುನಶ್ಚೇತನಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಮುಂದಿನ ಜೂನ್ ತಿಂಗಳ ವೇಳೆಗೆ ಜಿಲ್ಲೆಯಲ್ಲಿನ 792 ಕೊಳವೆ ಬಾವಿಗಳು ಸಮಸ್ಯಾತ್ಮಕ ಕೊಳವೆಬಾವಿಗಳೆಂದು ಗುರುತಿಸಲಾಗಿದೆ. ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಸುರಿದ ಉತ್ತಮ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಅಷ್ಟೇನೂ ಕುಸಿದಿರುವುದಿಲ್ಲ. ಅಂತರ್ಜಲ ಮಟ್ಟ ಅಂದಾಜು 100 ಅಡಿಯ ಮಿತಿಯೊಳಗೆ ಇದೆ. ಆದುದರಿಂದ ಈಗಲೇ ಇಳುವರಿ ಕಡಿಮೆ ಇರುವಂತಹ ಕೊಳವೆ ಬಾವಿಗಳನ್ನು ಗುರುತಿಸಿ ಅಂತರ್ಜಲ ಮಟ್ಟ ಕಾಪಾಡುವಂತೆ ಸೂಚಿಸಿದರು.ಜಿಲ್ಲೆಯಲ್ಲಿನ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇದರ ಸರಿಯಾದ ನಿರ್ವಹಣೆಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಸಚಿವರು ಸೂಚಿಸಿದರು.
ಪಶು ಸಂಗೋಪನ ಇಲಾಖೆ ವತಿಯಿಂದ ಮುಂದಿನ ದಿನಕ್ಕೆ ಬೇಕಾಗುವಷ್ಟು ಅಗತ್ಯ ಮೇವು ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಬೇಕು. ಇದರಿಂದ ಮುಂದಿನ ಬೇಸಿಗೆ ದಿನಗಳಲ್ಲಿ ಮೇವಿನ ಬ್ಯಾಂಕುಗಳನ್ನು ಅಗತ್ಯವಿದ್ದರೆ ಸ್ಥಾಪಿಸಲು ಸಹಕಾರಿಯಾಗುತ್ತದೆ. ಅಧಿಕಾರಿಗಳು ದಿನದ 24 ಗಂಟೆಯೂ ಕೆಲಸ ಮಾಡಬೇಕು ಯಾವುದೇ ವಿಳಂಬಕ್ಕೆ ಆಸ್ಪದವಿಲ್ಲ ಎಂದು ತಿಳಿಸಿದರು.ಇದಕ್ಕೆ ಉತ್ತರಿಸಿದ ಪಶುಸಂಗೋಪನ ಇಲಾಖೆಯ ಉಪನಿರ್ದೇಶಕರು, ಜಿಲ್ಲೆಯಲ್ಲಿ ಈಗಾಗಲೇ ಒಂದು ಲಕ್ಷ ಮೇವಿನ ಕಿಟ್ಟುಗಳನ್ನು ಅಂದಾಜು 50 ಸಾವಿರಕ್ಕೂ ಹೆಚ್ಚು ರೈತರಿಗೆ ವಿತರಣೆ ಮಾಡಿದ್ದು, ಈ ಪೈಕಿ 40 ಸಾವಿರಕ್ಕೂ ಹೆಚ್ಚು ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಇನ್ನುಳಿದ ರೈತರು ಬೆಳೆಕಟಾವಿನ ನಂತರ ಮೇವು ಬೆಳೆಯುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಎರಡು ಲಕ್ಷ ಮೇವಿನ ಕಿಟ್‌ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮುಂದಿನ ಫೆಬ್ರವರಿ ಮಾಹೆಯ ವೇಳೆಗೆ ಒಟ್ಟಾರೆ ಜಿಲ್ಲೆಯಲ್ಲಿ 1.38 ಲಕ್ಷ ಟನ್ ಹೊಸ ಮೇವಿನ ಲಭ್ಯತೆಯಾಗಲಿದ್ದು ಐದು ವಾರಗಳಿಗೆ ಸಾಕಾಗುತ್ತದೆ ಎಂದು ಉತ್ತರಿಸಿದರು.
ಮುಖ್ಯಮಂತ್ರಿಗಳ ಭೇಟಿ: ಜಿಲ್ಲೆಗೆ ಇದೇ ಜನವರಿ 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು. ಎಲ್ಲಾ ತಾಲೂಕು ತಹಸೀಲ್ದಾರಗಳನ್ನು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳನ್ನು ಕಾರ್ಯಕ್ರಮದ ಸಮನ್ವಯತೆಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಫಲಾನುಭವಿಗಳನ್ನು ಕರೆತರುವ ಇಲಾಖೆಗಳು ತಮ್ಮ ಫಲಾನುಭವಿಗಳಿಗೆ ಪ್ರತ್ಯೇಕ ಗುರುತಿನ ಚೀಟಿಗಳನ್ನು ವಿತರಿಸಬೇಕು ಮತ್ತು ಸಾರಿಗೆ ವ್ಯವಸ್ಥೆ, ಊಟೋಪಚಾರ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷವಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.1 ಲಕ್ಷ ಜನ ಸೇರುವ ನಿರೀಕ್ಷೆ: ಜನವರಿ 29ರಂದು ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಬಹಳ ದೊಡ್ಡ ಮಟ್ಟದಲ್ಲಿ ಆಯೋಜಿಸಬೇಕೆನ್ನುವ ನಿಟ್ಟಿನಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಕಾರ್ಯಕ್ರಮಕ್ಕೆ 1 ಲಕ್ಷ ಜನ ಸೇರುವ ನಿರೀಕ್ಷೆಯಿರುವುದರಿಂದ ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸುವ ಹಿನ್ನೆಲೆಯಲ್ಲಿ ಈಗಾಗಲೇ ಸಭೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ: ಜಿ. ಪರಮೇಶ್ವರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿರು.ಬರ ಪರಿಸ್ಥಿತಿಯನ್ನು ನಿಭಾಯಿಸಬೇಕು. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಕಡಿಮೆ ಮಳೆಯಾಗಿರುವುದರಿಂದ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮವಹಿಸಬೇಕು. ಒಣಗಿ ಹೋಗಿರುವ ಕೊಳವೆ ಬಾವಿ ಮರುಪೂರಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 14 ವಾರಗಳಿಗಾಗುವಷ್ಟು ಜಾನುವಾರು ಮೇವು ಲಭ್ಯವಿದ್ದು, ರೈತರು ಕಂಗಾಲಾಗುವ ಅಗತ್ಯವಿಲ್ಲ. ಮೇವು ಉತ್ಪಾದಿಸಲು ರೈತರಿಗೆ ಈಗಾಗಲೇ 1 ಲಕ್ಷ ಮೇವಿನ ಕಿಟ್ ವಿತರಿಸಲಾಗಿದ್ದು, ಈ ಪೈಕಿ 40 ಸಾವಿರ ಕುಟುಂಬಗಳು ಮೇವು ಬೆಳೆಯನ್ನು ಬಿತ್ತನೆ ಮಾಡಿವೆ. ಇದರಿಂದ ಮುಂದಿನ 1 ತಿಂಗಳಿನಲ್ಲಿ 1 ಲಕ್ಷ ಟನ್ ಮೇವು ಉತ್ಪಾದನೆಯಾಗುವುದರಿಂದ ಜಿಲ್ಲೆಯಲ್ಲಿ ಮೇವಿನ ಕೊರತೆಯುಂಟಾಗುವುದಿಲ್ಲ. ಮೇವು ಕೊರತೆಯುಂಟಾದಲ್ಲಿ ನೆರೆಯ ಆಂಧ್ರ, ತಮಿಳುನಾಡಿನಿಂದ ಖರೀದಿಸಲು ಹಣಕಾಸಿನ ತಯಾರಿ ಮಾಡಿಕೊಂಡಾಗಿದೆ ಎಂದು ತಿಳಿಸಿದರು.ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ವಿದ್ಯುತ್ ಪರಿವರ್ತಕ ಹಾಗೂ ಮತ್ತಿತರ ಸಮಸ್ಯೆಯಿಂದ ಒಂದೆರಡು ಪ್ರಕರಣಗಳಲ್ಲಿ ವಿದ್ಯುತ್ ಪೂರೈಕೆಯಾಗದಿರಬಹುದು. ಆದರೆ ಎಲ್ಲಾ ರೈತರಿಗೂ ಈ ಸಮಸ್ಯೆ ಎದುರಾಗಿಲ್ಲವೆಂದು ಸ್ಪಷ್ಟಪಡಿಸಿದರಲ್ಲದೆ ಬರ ಪರಿಸ್ಥಿತಿ ಇರುವುದರಿಂದ ರೈತರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ತಿಳಿಸಿದರು.
ರೈತರಿಗೆ ಬರ ಪರಿಹಾರ ನೀಡುವುದು ವಿಳಂಬವಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಸ್ಪಂದಿಸಿದ ಸಚಿವರು ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಒಂದು ನಯಾ ಪೈಸೆ ಹಣ ಬಂದಿಲ್ಲ. ಹಣವನ್ನು ಒದಗಿಸಲು ಕೇಂದ್ರ ಸರ್ಕಾರವು ಇಲ್ಲದ ಸಬೂಬು ಹೇಳಿ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ಕೇಂದ್ರದ ಹಣವನ್ನು ಕಾಯದೇ ರಾಜ್ಯ ಸರ್ಕಾರದಿಂದ ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಿಕೊಳ್ಳಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಒಟ್ಟಾರೆ 600 ಕೋಟಿ ರು. ಹಣವನ್ನು ಒದಗಿಸಲಾಗಿದೆ. ಶೀಘ್ರವೇ ಬರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಇಡೀ ದೇಶದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯವು 2ನೇ ಸ್ಥಾನದಲ್ಲಿದ್ದರೂ ರಾಜ್ಯಕ್ಕೆ ಬರಬೇಕಾದ 9 ಸಾವಿರ ಕೋಟಿ ರು.ಗಳ ಜಿಎಸ್‌ಟಿ ಹಣದ ಪಾಲನ್ನು ಕೇಂದ್ರದಿಂದ ನೀಡಿಲ್ಲ ಎಂದು ತಿಳಿಸಿದರಲ್ಲದೆ ಅಗತ್ಯ ಬಂದರೆ ಜಿಲ್ಲೆಯಲ್ಲಿ ಗೋಶಾಲೆ, ಮೇವು ಬ್ಯಾಂಕ್ ತೆರೆಯುವ ಹಾಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
1 ತಿಂಗಳ ಕಾಲ ಸಂವಿಧಾನ ಜಾಗೃತಿ ಜಾಥಾ: ಜನ ಸಾಮಾನ್ಯರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ರಾಜ್ಯದಾದ್ಯಂತ 1 ತಿಂಗಳ ಕಾಲ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂವಿಧಾನ ಜಾಥಾ ಕಾರ್ಯಕ್ರಮವು ಜನವರಿ 26ರಂದು ಚಾಲನೆಗೊಂಡು ಫೆಬ್ರವರಿ 23ರವರೆಗೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸಂವಿಧಾನದ ಬಗ್ಗೆ ಅರಿವು ಮೂಡಿಸಲಾಗುವುದು. ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಸಂವಿಧಾನದ ಮಹತ್ವ ತಿಳಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಎಲ್ಲ ಅಧಿಕಾರಿ, ಜನಪ್ರತಿನಿಧಿಗಳು, ಸಂಘಟನೆಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.