ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಪ್ರತಿ ವಾರ ತಹಸೀಲ್ದಾರರು ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ತಾಲೂಕುಗಳ ಬರ ಪರಿಸ್ಥಿತಿ, ನೀರು, ಮೇವು ಪೂರೈಕೆ, ನರೇಗಾ ಉದ್ಯೋಗ ನೀಡಿಕೆ ಕುರಿತು ಚರ್ಚಿಸಿ, ಕ್ರಮವಹಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿದ ಅವರು, ಜಿಲ್ಲೆಯಲ್ಲಿ ಲಭ್ಯವಿರುವ ನೀರನ್ನು ಸೋರಿಕೆ, ಅಪವ್ಯಯವಾಗದಂತೆ ತಡೆದು ಸಮಪರ್ಕವಾಗಿ ಬಳಕೆ ಮಾಡಬೇಕು. ಸಾರ್ವಜನಿಕರಿಗೆ ಶುದ್ದವಾದ ಕುಡಿಯುವ ನೀರು ಪೂರೈಕೆ ಬಗ್ಗೆ ಖಾತ್ರಿ ಇರಲಿ. ಬಹುತೇಕ ಕಡೆಗಳಲ್ಲಿ ಹಳೆ ಪೈಪಲೈನಗಳಲ್ಲಿ ಸೋರಿಕೆ ಆಗಿ, ನೀರು ಕಲ್ಮಷವಾಗುವ ಸಾಧ್ಯತೆ ಇದೆ. ನೀರು ಕಲ್ಮಷವಾಗುವ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದ ಅವರು, ಜಿಲ್ಲೆಯ ಎಂಟು ತಾಲೂಕುಗಳ ಪೈಕಿ 395 ವಸತಿಯುತ ಗ್ರಾಮಗಳಿವೆ. ಈ ಪೈಕಿ ಮೇ ಅಂತ್ಯದವರೆಗೆ ಸುಮಾರು 153 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣುವ ಲಕ್ಷಣಗಳಿವೆ. ಈ ಪೈಕಿ ಅಳ್ನಾವರ ತಾಲೂಕಿನ 2, ಕುಂದಗೋಳ ತಾಲೂಕಿನ 15, ಅಣ್ಣಿಗೇರಿ ತಾಲೂಕಿನ ಒಂದು, ಹುಬ್ಬಳ್ಳಿ ತಾಲೂಕಿನ 17, ಧಾರವಾಡ ತಾಲೂಕಿನ 37 ಮತ್ತು ಕಲಘಟಗಿ ತಾಲೂಕಿನ 81 ಗ್ರಾಮಗಳು ಸೇರಿವೆ ಎಂದರು.
ಅಗತ್ಯವಿದ್ದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ವಿವಿಧ ನಗರ ಮತ್ತು ಗ್ರಾಮಗಳಲ್ಲಿ ಸುಮಾರು 301 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ, ಮಾಲೀಕರೊಂದಿಗೆ ಚರ್ಚಿಸಿ ಅವರಿಂದ ನೀರು ಖರೀದಿಸಲು ಒಪ್ಪಿಗೆ ಪತ್ರ ಪಡೆಯಲಾಗಿದೆ. ಕುಂದಗೋಳ ತಾಲೂಕಿನ ಶಿರೂರ, ಕೋಡ್ಲಿವಾಡ ಹಾಗೂ ಹಳೆ ಹಂಚನಾಳ ಸೇರಿ ಈ ಮೂರು ಗ್ರಾಮಗಳಲ್ಲಿ ಕೊಳವೆಬಾವಿಗಳು ಲಭ್ಯವಿಲ್ಲ. ತಾಲೂಕಾ ಟಾಸ್ಕಪೋರ್ಸ್ ಸಮಿತಿ ತೀರ್ಮಾನದಂತೆ ಟ್ಯಾಂಕರ್ ಮೂಲಕ ಅಥವಾ ಪೈಪ್‌ಲೈನ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಮೇವು ಸಂಗ್ರಹ
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮುಂದಿನ 13 ವಾರುಗಳಿಗೆ ಸಾಕಾಗುವಷ್ಟು ಅಂದರೆ 1,38,492 ಟನ್ ಮೇವು ದಾಸ್ತಾನು ಲಭ್ಯವಿದೆ. ಶೆರೆವಾಡ, ಶಿರಗುಪ್ಪಿ ಮತ್ತು ಹುಬ್ಬಳ್ಳಿ ಎಪಿಎಂಸಿಯಲ್ಲಿ ಮೇವು ಬ್ಯಾಂಕ್ ಆರಂಭಿಸಲು ಕ್ರಮ ವಹಿಸಲಾಗಿದೆ ಎಂದ ಅವರು, ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಬೇಕು. ತಮ್ಮ ಅಧಿಕಾರಿ ವ್ಯಾಪ್ತಿಯಲ್ಲಿ ಬರುವ ದೂರು ಬೇಡಿಕೆಗಳನ್ನು ಪೂರೈಸಬೇಕು. ಹಿರಿಯ ಅಧಿಕಾರಿಗಳ ಬಳಿ ಜನರ ದೂರುಗಳು ಬಂದರೇ ಸಂಬಂಧಿಸಿದ ಅಧಿಕಾರಿ ಮೇಲೆ ಕ್ರಮಕೈಗೊಳ್ಳಲಾಗುವುದು. ಬರಗಾಲ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ನೀರು ಮೇವು ಕೊರತೆಯಾಗದಂತೆ ಪ್ರತಿ ತಾಲೂಕು ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಬೇಕು ಎಂಬ ಸಲಹೆ ನೀಡಿದರು.ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಹಾಗೂ ಜಿಪಂ ಸಿಇಒ ಸ್ವರೂಪ ಟಿ.ಕೆ. ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿದ್ದರು. ಸಮನ್ವಯ ಸಾಧಿಸಿ
ಆಡಳಿತದ ಹಂತದಲ್ಲಿ ಸಮಸ್ಯೆಗಳಿದ್ದರೆ ಅದನ್ನು ಮರೆ ಮಾಡುವ ಅಥವಾ ಮುಚ್ಚಿ ಹಾಕುವ ಬದಲು ಪರಿಹರಿಸಲು ಕ್ರಮ ಕೈಗೊಳ್ಳಿ. ಬರಗಾಲ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಿ. ಸ್ವಯಂ ಪ್ರೇರಣೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಕಾಲಮಿತಿಯಲ್ಲಿ ಕೆಲಸ ಮಾಡಿ. ಶಾಸಕರು ಹಾಗೂ ಚುನಾಯಿತ ಜನ ಪ್ರತಿನಿಧಿಗಳಿಗೆ ಕಾಮಗಾರಿ ಕಾರ್ಯಕ್ರಮಗಳ ಮಾಹಿತಿ ನೀಡಿ, ಸಮನ್ವಯ ಸಾಧಿಸಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.