ಸಾರಾಂಶ
ಧಾರವಾಡ:
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಬೇಕು. ಸರ್ಕಾರದಿಂದ ಕೃಷಿ ಸಂಬಂಧಿತ ಎಲ್ಲ ಸೌಲಭ್ಯ ಪಡೆಯಲು ಪ್ರತಿ ರೈತರು ಪ್ರೂಟ್ ಐಡಿ ಹೊಂದುವುದು ಕಡ್ಡಾಯ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರೂಟ್ ಐಡಿ ಹೊಂದಲು ಜಿಲ್ಲೆಯಾದ್ಯಂತ ಅಭಿಯಾನ ಹಮ್ಮಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕೃಷಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿದ ಅವರು, ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗಿದ್ದರಿಂದ ಶೇ. 36ರಷ್ಟು ಕೃಷಿ ಭೂಮಿ ಬಿತ್ತನೆಯಾಗಿದೆ. ಉಳಿದ ರೈತರು ಬಿತ್ತನೆ ಮಾಡುತ್ತಿದ್ದು ಬೀಜ, ರಸಗೊಬ್ಬರ ಪೂರೈಸಲು ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕೆಂದು ಸಚಿವರು ತಿಳಿಸಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ರೈತರಿಗೆ ಬಿತ್ತನೆ ಬೀಜ ದರ ಹೆಚ್ಚಳ ಬಗ್ಗೆ ತಿಳಿವಳಿಕೆ ನೀಡಬೇಕು ಮತ್ತು ಹೊಸ ತಳಿ ಬೀಜಗಳನ್ನು ರೈತರಿಗೆ ಪರಿಚಯಿಸಿ, ವಿತರಿಸಲು ಕ್ರಮಕೈಗೊಳ್ಳಬೇಕು. ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳಿಗೆ ರೈತರ ಪ್ರೂಟ್ ಐಡಿ ಸೃಜಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.ಗ್ರಾಮೀಣ ಭಾಗ ಹಾಗೂ ನಗರ, ಪಟ್ಟಣಗಳಲ್ಲಿ ಎನ್ಎ ಮಾಡುವಾಗ ಸರ್ಕಾರಿ ರಸ್ತೆ ಪಕ್ಕದಲ್ಲಿ ಬಪರ್ ರಸ್ತೆ ಜಾಗ ಬಿಡುವಂತೆ ನಿಯಮ ರೂಪಿಸಬೇಕು ಎಂಬ ಸಲಹೆಯನ್ನು ಜಿಲ್ಲಾಧಿಕಾರಿಗೆ ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯ 14 ರೈತ ಸಂಪರ್ಕ ಕೇಂದ್ರಗಳ ಜತೆಗೆ ಹೆಚ್ಚುವರಿ ಕೇಂದ್ರ ತೆರೆದು ರೈತರಿಗೆ ಸಕಾಲದಲ್ಲಿ ಬೀಜ, ಗೊಬ್ಬರ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಪ್ರತಿ ರೈತರ ಆರ್‌ಟಿಸಿಗೆ ಆಧಾರ್ ಜೋಡಣೆ ಕಾರ್ಯ ನಡೆದಿದೆ. ಇದರೊಂದಿಗೆ ರೈತರು ಪ್ರೂಟ್ ಐಡಿ ಹೊಂದುವಂತೆ ತಿಳಿವಳಿಕೆ ನೀಡಿ, ಕ್ರಮವಹಿಸಲಾಗುವುದು. ಬರ ಪರಿಹಾರ ಬಿಡುಗಡೆ ಪ್ರಗತಿಯಲ್ಲಿದ್ದು, ಪಾಳು ಭೂಮಿ ಅಥವಾ ಇತರ ಕಾರಣಗಳಿಂದ ಬರ ಪರಿಹಾರ ಬಿಡುಗಡೆ ಆಗದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಮಾಹಿತಿಯೊಂದಿಗೆ ಪ್ರಸ್ತಾವನೆ ಪಡೆದು, ಸರ್ಕಾರಕ್ಕೆ ವಿವರವಾದ ವರದಿ ಕಳುಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಎಡಿಸಿ ಗೀತಾ ಸಿ.ಡಿ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ, ಉಪನಿರ್ದೇಶಕರಾದ ಜಯಶ್ರೀ ಹಿರೇಮಠ, ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ರಮೇಶ ಬಿ.ಎಸ್., ಎಸಿ ಶಾಲಂ ಹುಸೇನ್, ತಹಸೀಲ್ದಾರ್‌ರಾದ ಡಾ. ಡಿ.ಎಚ್. ಹೂಗಾರ, ಪ್ರಕಾಶ ನಾಶಿ, ಮಲ್ಲಿಕಾರ್ಜುನ ಹೆಗ್ಗನ್ನವರ ಇದ್ದರು.