ಸಾರಾಂಶ
ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಗೆ ವಾರಾಹಿ ಯೋಜನೆಯ ಮೂಲಕ ಮೇ 15ರೊಳಗೆ ನೀರು ಪೂರೈಕೆಗೆ ತಕ್ಷಣ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.
ಅವರು ಬುಧವಾರ ಮಣಿಪಾಲ ಶೀಂಬ್ರ ಸೇತುವೆ ಬಳಿ ನಡೆಯುತ್ತಿರುವ ವಾರಾಹಿ ಯೋಜನೆಯ ಪೈಪ್‌ಲೈನ್ ಸೇತುವೆ ಕಾಮಗಾರಿ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.
ನಗರದಲ್ಲಿ ಕುಡಿಯುವ ನೀರು ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಕಾಮಗಾರಿಯ ಬಾಕಿ ಉಳಿದಿರುವ ಕೆಲಸಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ 15 ದಿನದಲ್ಲಿ ನೀರು ಪೂರೈಕೆ ಮಾಡುವಂತೆ ಹೇಳಿದರು.
ನಗರಸಭೆಯ 35 ವಾರ್ಡ್‌ಗಳ ಸದಸ್ಯರು ತಮ್ಮ ವಾರ್ಡಿನಲ್ಲಿ ವಾರಾಹಿ ಯೋಜನೆಗೆ ಸಂಬಂಧಿಸಿದ ಪೈಪ್‌ಲೈನ್ ಹಾಗೂ ಕಾಮಗಾರಿಯ ಇತರ ಸಮಸ್ಯೆಗಳನ್ನು ಪಟ್ಟಿ ಮಾಡಬೇಕು, ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸಿ ನೀರು ಸರಬರಾಜಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಈಗಾಗಲೇ ಯೋಜನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಮೂಲಕ ನಿರಾಕ್ಷೇಪಣಾ ಪತ್ರವನ್ನು ಒದಗಿಸಲಾಗಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು ಸಮಸ್ಯೆ ಪರಿಹರಿಸಲು ಸಹಕಾರ ನೀಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಪ್ರಭಾಕರ ಪೂಜಾರಿ, ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ಅನಿತಾ ಡಿಸೋಜ, ಹರೀಶ್ ಶೆಟ್ಟಿ, ಗಿರಿಧರ್ ಆಚಾರ್ಯ, ಟಿ.ಜಿ. ಹೆಗ್ಡೆ, ವಿಜಯಲಕ್ಷ್ಮೀ, ಮಂಜುನಾಥ ಮಣಿಪಾಲ, ನಗರಸಭೆ ಪೌರಾಯುಕ್ತ ರಾಯಪ್ಪ, ಎಂಜಿನಿಯರ್ ಯಶವಂತ ಪ್ರಭು, ವಾರಾಹಿ ಯೋಜನೆಯ ಅಧಿಕಾರಿಗಳಾದ ಮಂಜುನಾಥಯ್ಯ, ಅರ್ಕೇಶ್ ಮೊದಲಾದವರು ಉಪಸ್ಥಿತರಿದ್ದರು.