ಸಾರಾಂಶ
ನೀರಾವರಿ ಇಲಾಖೆ ಅಧಿಕಾರಿಗಳು, ನೀರು ಪೂರೈಕೆ ಮಾಡುವ ಗುತ್ತಿಗೆದಾರರು ರೈತರ ಜಮೀನಿಗೆ ಸರಿಯಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕೆಳಭಾಗದ ರೈತರು ನೀರಾವರಿ ಇಲಾಖೆ ಕಚೇರಿಗೆ ಬೀಗ ಹಾಕಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿದ್ದಾರೆ ಎಂದು ರೈತ ಸೇನೆ ರಾಜ್ಯ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಆಗ್ರಹಿಸಿದರು.
ನರಗುಂದ: ಮಲಪ್ರಭಾ ಜಲಾಶಯ ನೀರಾವರಿ ಕಾಲುವೆಗಳಿಗೆ ಹೊಂದಿಕೊಂಡಿರುವ ತಾಲೂಕಿನ ಹಲವಾರು ಗ್ರಾಮಗಳ ಕೆಳಭಾಗದ ರೈತರಿಗೆ ಕಾಲುವೆ ನೀರು ಸಿಗದೆ ಬೆಳೆಹಾನಿಯಾಗುತ್ತಿದೆ. ಕಾಲುವೆ ಕೊನೆಯ ಭಾಗದ ರೈತರಿಗೂ ನೀರು ತಲುಪಿಸಬೇಕು ಎಂದು ರೈತ ಸೇನೆ ರಾಜ್ಯ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಆಗ್ರಹಿಸಿದರು.
3459ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ತಾಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ. ಮೇಲಾಗಿ ಈ ಭಾಗಕ್ಕೆ ಕಾಲುವೆ ಮೂಲಕ ನೀರು ಪೂರೈಕೆ ಮಾಡುವ ಮಲಪ್ರಭಾ ಜಲಾಶಯ ಭರ್ತಿಯಾಗಿದೆ. ಈ ಭಾಗದ ರೈತರು ಹರ್ಷದಿಂದ ಇದ್ದರು. ಮಲಪ್ರಭಾ ಜಲಾಶಯದಲ್ಲಿ ಕಾಲುವೆಗಳಿಗೆ ಮುಂದಿನ 6 ತಿಂಗಳ ಪೂರೈಕೆ ಮಾಡವಷ್ಟು ನೀರು ಸಂಗ್ರಹವಿದೆ. ಆದರೆ ತಾಲೂಕಿನ ಕೆಳಭಾಗದ ಗ್ರಾಮಗಳಾದ ಹುಣಿಸಿಕಟ್ಟಿ, ಹಿರೇಕೊಪ್ಪ, ಭೈರನಹಟ್ಟಿ, ಹದಲಿ, ಕಲಕೇರಿ, ಸುರಕೋಡ, ಮುದ್ಗಣಕಿ, ರಡ್ಡೇರ ನಾಗನೂರ, ಕೊಣ್ಣೊರ ಸೇರಿ ವಿವಿಧ ಕೆಳಭಾಗದ ಗ್ರಾಮಗಳ ರೈತರಿಗೆ ಕಾಲುವೆ ನೀರು ಸಿಗದೆ ಸಾವಿರಾರು ರೈತರು ಬೆಳೆ ಹಾನಿ ಮಾಡಿಕೊಳ್ಳುತ್ತಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು, ನೀರು ಪೂರೈಕೆ ಮಾಡುವ ಗುತ್ತಿಗೆದಾರರು ಈ ಗ್ರಾಮಗಳ ರೈತರ ಜಮೀನಿಗೆ ಸರಿಯಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕೆಳಭಾಗದ ರೈತರು ನೀರಾವರಿ ಇಲಾಖೆ ಕಚೇರಿಗೆ ಬೀಗ ಹಾಕಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಸುಭಾಸ ಗಿರಿಯಣ್ಣವರ, ಸಿ.ಎಸ್. ಪಾಟೀಲ, ಹನುಮಂತ ಸರನಾಯ್ಕರ, ಶಂಕ್ರಪ್ಪ ಜಾಧವ, ಮಲ್ಲೇಶ ಅಣ್ಣಿಗೇರಿ, ಸೋಮಲಿಂಗಪ್ಪ ಆಯಿಟ್ಟಿ, ಅರ್ಜುನ ಮಾನೆ, ಫಕೀರಪ್ಪ ಅಣ್ಣಿಗೇರಿ, ಶಿವಪ್ಪ ಸಾತಣ್ಣವರ, ಅನಸವ್ವ ಶಿಂದೆ, ನಾಗರತ್ನಾ ಸವಳಭಾವಿ, ಯಲ್ಲಪ್ಪ ಚಲವಣ್ಣವರ, ವಾಸು ಚವ್ಹಾಣ, ವಿಜಯಕುಮಾರ ಹೂಗಾರ ಇದ್ದರು.