ಹೆಣ್ಮಕ್ಕಳ ರಕ್ಷಣೆಗಾಗಿ ಬಿಜೆಪಿ ಬೆಂಬಲಿಸಿ: ಉಮೇಶ ಜಾಧವ್‌

| Published : Apr 24 2024, 02:19 AM IST

ಹೆಣ್ಮಕ್ಕಳ ರಕ್ಷಣೆಗಾಗಿ ಬಿಜೆಪಿ ಬೆಂಬಲಿಸಿ: ಉಮೇಶ ಜಾಧವ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಮಾಯಕ ಹೆಣ್ಣು ಮಗಳು ನೇಹಾಳನ್ನು ಬರ್ಬರವಾಗಿ ಹತ್ಯೆಗೈದು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದ ಘಟನೆಯು ಮರುಕಳಿಸದೆ ಇರಲು ಮತ್ತು ಸುರಕ್ಷಿತ ಬದುಕು ಸಾಗಿಸಲು ಬಿಜೆಪಿಯನ್ನು ರಾಜ್ಯದ ಜನತೆ ಬೆಂಬಲಿಸಬೇಕು.

ಕನ್ನಡಪ್ರಭ ವಾರ್ತೆ ಸೇಡಂ

ಅಮಾಯಕ ಹೆಣ್ಣು ಮಗಳು ನೇಹಾಳನ್ನು ಬರ್ಬರವಾಗಿ ಹತ್ಯೆಗೈದು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದ ಘಟನೆಯು ಮರುಕಳಿಸದೆ ಇರಲು ಮತ್ತು ಸುರಕ್ಷಿತ ಬದುಕು ಸಾಗಿಸಲು ಬಿಜೆಪಿಯನ್ನು ರಾಜ್ಯದ ಜನತೆ ಬೆಂಬಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಡಾ. ಉಮೇಶ್ ಜಾಧವ್ ಮನವಿ ಮಾಡಿದರು.

ಸೇಡಂನಲ್ಲಿ ಮಂಗಳವಾರ ನಡೆದ ಮಹಿಳಾ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ನೇಹಾ ಹತ್ಯೆಯ ಮರಣೋತ್ತರ ಪರೀಕ್ಷೆ ಕೈ ಸೇರಿದ್ದು ಆಕೆಯನ್ನು 14 ಬಾರಿ ಚಾಕುವಿನಿಂದ ಅಮಾನುಷವಾಗಿ ತಿವಿದು ಕೇವಲ 58 ಸೆಕೆಂಡ್‌ಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ವರದಿಯಲ್ಲಿದೆ. ಬರ್ಬರ ಸಾವು ನಾಡಿನ ಜನತೆಯನ್ನು ತಲ್ಲಣಗೊಳಿಸಿದೆ. ಮಾತ್ರವಲ್ಲ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದ ಹೀನ ಕೃತ್ಯವಾಗಿದೆ. ಇಂತಹ ಹೇಯ ಕೃತ್ಯಗಳು ನಡೆಯದೆ ಇರಲು ಮತ್ತು ಹೆಣ್ಣು ಮಕ್ಕಳು ಸುರಕ್ಷಿತ ಬದುಕು ಸಾಗಿಸಲು ಬಿಜೆಪಿ ಆಡಳಿತವೇ ದೇಶಕ್ಕೆ ಬೇಕಾಗಿದೆ ಎಂದರು.

ಕಾಂಗ್ರೆಸ್ ಆಡಳಿತವು ಈ ಹತ್ಯೆಯನ್ನು ಕ್ಷುಲ್ಲಕವಾಗಿ ಪರಿಗಣಿಸಿ ವೈಯಕ್ತಿಕ ವಿಚಾರವೆಂದು ಏಕಾಏಕಿ ಹೇಳಿಕೆ ನೀಡಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿತ್ತು. ನಾಡಿನ ಜನತೆ ಒಕ್ಕೊರಳಿನಿಂದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದಾಗ ಸಿಐಡಿ ತನಿಖೆಗೆ ಒಪ್ಪಿಸಿತು. ಕಾಂಗ್ರೆಸ್ ಸರಕಾರವು ಮಹಿಳೆಯರಿಗೆ ರಕ್ಷಣೆಯನ್ನು ನೀಡುವುದಿಲ್ಲ ಮತ್ತು ತುಷ್ಟೀಕರಣ ನೀತಿಯಿಂದ ತನಿಖೆಗೂ ಹಿಂದೆ ಮುಂದೆ ನೋಡಿತು ಎಂದು ಆಪಾದಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಮಹಿಳೆಯರಿಗೆ ಮೀಸಲಾತಿ ನೀಡಲು ನೂತನ ಪಾರ್ಲಿಮೆಂಟಿನ ಮೊದಲ ಅಧಿವೇಶನದಲ್ಲಿ ನಾರಿ ಶಕ್ತಿ ವಂದನ್ ಮಸೂದೆಯನ್ನು ಅಂಗೀಕರಿಸಿದೆ. ಶೇ.33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಲು ಮೋದಿಯವರು ಐತಿಹಾಸಿಕ ನಿರ್ಧಾರ ಕೈಗೊಂಡರು.

ಮೋದಿಯವರ ಅಧಿಕಾರದ ನಂತರ ಜಲಜೀವನ ಮಿಷನ್ ಪ್ರಾರಂಭಿಸಿ ಕುಡಿವ ನೀರು ನೀಡಿದರು. ಬಯಲು ಮುಕ್ತ ಶೌಚಾಲಯ ಯೋಜನೆ ಜಾರಿ ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು. ಅದಕ್ಕಾಗಿ ಈ ಚುನಾವಣೆ ಬಹಳ ಮಹತ್ವದ ಚುನಾವಣೆಯಾಗಿದೆ. ಮಹಿಳೆಯರು ಮನಸ್ಸು ಮಾಡಿದರೆ ದೇಶದ ಭವಿಷ್ಯವನ್ನು ಬದಲಾಯಿಸಬಲ್ಲ ಪ್ರಬಲ ಶಕ್ತಿಯನ್ನು ಹೊಂದಿದ್ದಾರೆ. ಮುಂದಿನ ಪೀಳಿಗೆಗೆ ಸುರಕ್ಷಿತ ಜೀವನ ನಡೆಸುವ ಚುನಾವಣೆಯಾಗಿರುವುದರಿಂದ ಮೇ 7ರಂದು ಶೇ.100 ರಷ್ಟು ಮತ ಚಲಾಯಿಸಿ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನಾಗಿಸಬೇಕು ಮತ್ತು ಎರಡನೇ ಬಾರಿಗೆ ಕಲಬುರ್ಗಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಎಂಎಲ್‌ಸಿ ಭಾರತಿ ಶೆಟ್ಟಿ , ಮಹಿಳಾ ಮುಖಂಡರಾದ ಲಲಿತಾ ಅನಪೂರ್, ಚಂದ್ರಮ್ಮ ಪಾಟೀಲ್, ಭಾಗೀರಥಿ ಗುನ್ನಾಪುರ, ಸಂತೋಷ್ ರಾಣಿ ಪಾಟೀಲ್, ಸುಜ್ಞಾನ ರಾಣಿ ಪತ್ತಾರ್ ಚೆನ್ನಮ್ಮ ಪಾಟೀಲ್, ಜ್ಯೋತಿ ಶಹಬಾದ್ ಕರ್, ಮಂಜುಳಾ, ಶೈಲಜಾ ಹೆಟಾಳ್, ಈರಮ್ಮ ಪಾಟೀಲ್, ಮಾಜಿ ಶಾಸಕರಾದ ರಾಜ ಕುಮಾರ್ ಪಾಟೀಲ್ ತೇಲ್ಕೂರ್, ಅವ್ವಣ್ಣ ಮ್ಯಾಕೇರಿ, ಶರಣು ಶಂಕರ್, ಬಸವರಾಜ ರಾಯಕೋಡ್, ಓಂ ಪ್ರಕಾಶ್ ಪಾಟೀಲ್ ವೀರೇಶ ಹೂಗಾರ್ ತಿರುಪತಿ ಶಹಭಾಕರ್ ಮಲ್ಲಿಕಾರ್ಜುನ ಪಾಟೀಲ್ ಜಗದೇವಪ್ಪ ಸಾಹುಕಾರ್ ಶ್ರೀಮಂತ ವಂಟಿ ನಾಗಪ್ಪ ಕೊಳ್ಳಿ ಉಪಸ್ಥಿತರಿದ್ದರು.