ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಮೂಡಾದಲ್ಲಿ ನಡೆಸಿರುವ ನಿವೇಶನಗಳ ಹಗರಣ ಕುರಿತು ಈಗಾಗಲೇ ರಾಜ್ಯದೆಲ್ಲಡೆ ಸುದ್ದಿಯಾಗಿದೆ. ಇದರ ವಿರುದ್ದ ಹೋರಾಟ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ವಿಪಕ್ಷ ನಾಯಕ ಅಶೋಕ್ ಸೇರಿ ಇತರ ನಾಯಕರು ಬೆಂಗಳೂರಿನ ಬಿಡದಿಯಿಂದ-ಮೈಸೂರಿನವರೆಗೂ ಯಾತ್ರೆ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮೈಸೂರು ಮೂಡಾ ಹಗರಣ ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕೂಟ ಹಮ್ಮಿಕೊಂಡಿರುವ ಪಾದಯಾತ್ರೆ ಬೆಂಬಲಿಸಿ ಕ್ಷೇತ್ರದ ಕಾರ್ಯಕರ್ತರು ಪಾಲ್ಗೊಳ್ಳುವಂತೆ ತಾಲೂಕು ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್ ಮನವಿ ಮಾಡಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮೂಡಾ ಹಗರಣ ವಿರೋಧಿಸಿ ರಾಜ್ಯ ಮಟ್ಟದ ನಾಯಕರು ನಡೆಸುತ್ತಿರುವ ಪಾದಯಾತ್ರೆಗೆ ಬೆಂಬಲಿಸಿ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಮೂಡಾದಲ್ಲಿ ನಡೆಸಿರುವ ನಿವೇಶನಗಳ ಹಗರಣ ಕುರಿತು ಈಗಾಗಲೇ ರಾಜ್ಯದೆಲ್ಲಡೆ ಸುದ್ದಿಯಾಗಿದೆ. ಇದರ ವಿರುದ್ದ ಹೋರಾಟ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ವಿಪಕ್ಷ ನಾಯಕ ಅಶೋಕ್ ಸೇರಿ ಇತರ ನಾಯಕರು ಬೆಂಗಳೂರಿನ ಬಿಡದಿಯಿಂದ-ಮೈಸೂರಿನವರೆಗೂ ಯಾತ್ರೆ ನಡೆಸುತ್ತಿದ್ದಾರೆ ಎಂದರು.ಈ ಪಾದಯಾತ್ರೆ ಬೆಂಬಲಿಸಿ ನಾವುಗಳು ಅವರೊಟ್ಟಿಗೆ ಪಾಲ್ಗೊಳ್ಳಬೇಕಿದೆ. ಇದಕ್ಕೆ ಕ್ಷೇತ್ರದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಹಕಾರ ನೀಡಿ ಎಲ್ಲಾ ಹೋಬಳಿಯ ಗ್ರಾಮಗಳಿಂದ ಸಾವಿರಾರು ಮಂದಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ಬಾಹಿರವಾಗಿ ತಮ್ಮ ಪತ್ನಿ ಹೆಸರಿನಲ್ಲಿ ಮೈಸೂರಿನಲ್ಲಿ ನಿವೇಶನ ಪಡೆಯುವ ಮೂಲಕ ಬೇಲಿಯೇ ಎದ್ದು ಹೊಲ ಮೇದಂತೆ ಅಕ್ರಮ ನಡೆಸಿದ್ದಾರೆ. ಇದರ ವಿರುದ್ಧ ರಾಜ್ಯ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಜಿಲ್ಲೆ, ತಾಲೂಕು ಹಾಗೂ ಮಂಡಲದ ಕಾರ್ಯಕರ್ತರು ಒಗ್ಗೂಡುವಂತೆ ಅವರು ಒತ್ತಾಯಿಸಿದರು.ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್. ನಂಜುಂಡೇಗೌಡ, ಮುಖಂಡರಾದ ಇಂಡವಾಳು ಸಚ್ಚಿದಾನಂದ, ಟಿ.ಶ್ರೀಧರ್ ಸೇರಿದಂತೆ ಇತರ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಹಾಜರಿದ್ದರು.