ಸಾರಾಂಶ
ಚನ್ನಪಟ್ಟಣ: ಈ ಬಾರಿಯ ಲೋಕಸಭಾ ಚುನಾವಣೆ ಬಹಳ ಮಹತ್ವ ಪಡೆದುಕೊಂಡಿದೆ. ಇದು ಎಂಎಲ್‌ಎ, ಎಂಎಲ್‌ಸಿ ಚುನಾವಣೆಯಲ್ಲ, ದೇಶದ ಭವಿಷ್ಯ ರೂಪಿಸವ ಚುನಾವಣೆಯಾಗಿದೆ. ದೇಶದಲ್ಲಿ ಸಂವಿಧಾನದ ಉಳಿಯಬೇಕಾದರೆ, ಪ್ರಜಾಪ್ರಭುತ್ವ ಉಳಿವಿಗೆ ಕಾಂಗ್ರೆಸ್ ಗೆಲುವು ಸಾಧಿಸಬೇಕಿದ್ದು, ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.
ನಗರದ ಹೌಸಿಂಗ್ ಬೋರ್ಡ್ ಬಳಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ನೀವು ಕಾಂಗ್ರೆಸ್‌ಗೆ ಕಾಂಗ್ರೆಸ್ ಗೆ ಮತ ನೀಡದಿದ್ರೆ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುವುದಿಲ್ಲ. ಕಾಂಗ್ರೆಸ್‌ಗೆ ಮತ ನೀಡಿದರೆ ಸಂವಿಧಾನ ಉಳಿಯುತ್ತದೆ ಎಂದರು.ಸಂವಿಧಾನ ಬದಲಿಸಲು ೪೦೦ ಪಾರ್!: ನರೇಂದ್ರ ಮೋದಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎನ್ನುತ್ತಾರೆ. ಸಂವಿಧಾನ ಬದಲಾವಣೆಗೆ ೩ನೇ ಒಂದು ಭಾಗದ ಬಹುಮತದ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ 400 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು ಎನ್ನುತ್ತಿದ್ದಾರೆ. ಒಂದು ಕಡೆ ಮೋದಿ ಸಂವಿಧಾನ ಬದಲಾವಣೆ ಇಲ್ಲ ಎನ್ನುತ್ತಾರೆ. ಇನ್ನೊಂದು ಕಡೆ ಅವರದೇ ಪಕ್ಷದವರು ಸಂವಿಧಾನದ ಬದಲಾವಣೆ ಕುರಿತು ಮಾತನಾಡುತ್ತಾರೆ. ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದ ಮೇಲೆ ಆ ಹೇಳಿಕೆ ನೀಡುವವರನ್ನು ಪಕ್ಷದಿಂದ ಉಚ್ಛಾಟನೆ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಪೋಟೋ ಇದೆಯೇ?:ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನ ಮೇಲೆ ಮೋದಿ ಸಾಕಷ್ಟು ಭಾಷಣ ಮಾಡುತ್ತಾರೆ. ಆದರೆ ಆರ್‌ಎಸ್‌ಎಸ್ ಕಚೇರಿಯಲ್ಲಿ ಅಂಬೇಡ್ಕರ್ ಪೋಟೊ ಇದ್ಯಾ. ಆರ್‌ಎಸ್‌ಎಸ್ ಕಚೇರಿ ಮೇಲೆ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರಾ.? ದೇಶದ ಮೇಲೆ ಯಾರಿಗೆ ಹೆಚ್ಚು ಪ್ರೀತಿ ಇದೆ ಅಂತ ಇದರಿಂದ ಗೊತ್ತಾಗುತ್ತೆ. ಇವರು ನಮಗೆ ದೇಶಪ್ರೇಮದ ಪಾಠ ಮಾಡ್ತಾರೆ ಎಂದು ಕಿಡಿಕಾರಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಮೋದಿಗೆ ಸಂವಿಧಾನ ಬೇಕಾಗಿಲ್ಲ. ಅವರಿಗೆ ಸರ್ವಾಧಿಕಾರಿ ಆಡಳಿತ ಬೇಕು. ಕಳೆದ 10ವರ್ಷದಿಂದ ಅವರೇ ಅಧಿಕಾರ ಮಾಡುತ್ತಿದ್ದಾರೆ. ಸತತವಾಗಿ ಅವರೇ ದೇಶ ಆಳಬೇಕು ಎನ್ನುತ್ತಾರೆ. ಆದರೆ ಅವರು ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದಾರಾ? ದೇಶದಲ್ಲಿ ಆಡಳಿತಕ್ಕೆ ಬರುವ ಮುಂಚೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದರು ಮಾಡಿದರಾ? ವಿದೇಶದಲ್ಲಿರೋ ಕಪ್ಪು ಹಣ ತಂದು ಬಡವರ ಜೇಬಿಗೆ ೧೫ ಲಕ್ಷ ಹಾಕ್ತೀವಿ ಅಂದರು ಹಾಕಿದ್ರಾ? ರೈತರ ಆದಾಯ ದ್ವಿಗುಣ ಮಾಡುತ್ತೇವೆ ಅಂದರು ಮಾಡಿದರಾ? ಎಂದು ಪ್ರಶ್ನಿಸಿದರು.ರೈತರ ಸಮಾಧಿ ಮಾಡಿದರು:
ಮೂರು ಮಸೂದೆಗಳನ್ನು ಜಾರಿಗೆ ತಂದು ರೈತರ ಸಮಾಧಿ ಮಾಡಿದರು. ಹೋರಾಟ ನಡೆಸಿ ಇದನ್ನು ತಡೆದೆವು. ಇದನ್ನು ನಾವು ಸಂಸತ್ತಿನಲ್ಲಿ ಪ್ರಶ್ನಿಸಿದರೆ ನಮ್ಮನ್ನ ಪಾರ್ಲಿಮೆಂಟ್‌ನಿಂದ ಹೊರಗೆ ಹಾಕಿದರು. ನೂರಾರು ಸಂಸದರನ್ನು ಹೊರಗೆ ಹಾಕಿ ತಮಗಿಷ್ಟ ಬಂದ ಮಸೂದೆಗಳನ್ನು ಜಾರಿಗೆ ತಂದರು. ಇದೇನಾ ನಿಮ್ಮ ಪ್ರಜಾಪ್ರಭುತ್ವ? ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.ದರ ಏರಿಕೆ ಕುರಿತು ಮಾತನಾಡಲ್ಲ:
ಮೋದಿ ಪದೇ ಪದೇ ಹೆಣ್ಣುಮಕ್ಕಳ ಕಷ್ಟ ನೋಡಲಾಗದೇ ಎಲ್‌ಪಿಜಿ ಕೊಟ್ಟಿದ್ದೇವೆ ಅಂತಾರೆ. ಆದರೆ ಎಲ್ಲಿದೆ ಉಚಿತ ಎಲ್‌ಪಿಜಿ? ಇಂದು ಎಲ್‌ಪಿಜಿ ಸಿಲಿಂಡರ್ ದರ ಎಷ್ಟಾಗಿದೆ.? ಪೆಟ್ರೋಲ್, ಡೀಸೆಲ್ ದರ ಎಷ್ಟು ಹೆಚ್ಚಾಗಿದೆ.? 2014ರಲ್ಲಿ ಪೆಟ್ರೋಲ್ 66 ರು. ಇತ್ತು. ಈಗ 101 ರು. ಆಗಿದೆ. ಡೀಸೆಲ್ 45 ರು, ಇದ್ದದ್ದು ಈಗ 90 ರು. ಆಗಿದೆ. ಎಲ್ಪಿಜಿ 450ರೂ ಇತ್ತು ಈಗ 1200ರೂ ಆಗಿದೆ. ಆದರೆ ನರೇಂದ್ರ ಮೋದಿ ಈ ಬಗ್ಗೆ ಮಾತನಾಡಲ್ಲ ಎಂದು ಕಿಡಿಕಾರಿದರು.ಎಲ್ಲಿದೆ ಅಚ್ಚೆ ದಿನ್:
ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಿದೆ. ಇವರು ಮಾತೆತ್ತಿದರೆ ಅಚ್ಛೆ ದಿನ್ ಅನ್ನುತ್ತಾರೆ. ಆದರೆ, ಬೆಲೆ ಏರಿಕೆಯೇ ಇವರ ಅಚ್ಛೆ ದಿನ್. ಅವರು ಎಲ್ಲದರಲ್ಲೂ ಸುಳ್ಳಾಡುತ್ತಾರೆ. ರೈಲ್ವೆ, ಸೇನೆ ಸೇರಿದಂತೆ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷ ನೌಕರಿ ಖಾಲಿ ಇದೆ. ಆದರೆ ಯುವಕರಿಗೆ ನೀಡುತ್ತಿಲ್ಲ. ಉದ್ಯೋಗ ನೀಡಿದರೆ, ಶೇ. 50ರಷ್ಟು ಎಸ್‌ಸಿಎಸ್‌ಟಿ ಒಬಿಸಿಗೆ ಮೀಸಲು ನೀಡಬೇಕಾಗುತ್ತದೆ ಅದಕ್ಕೆ ಭರ್ತಿ ಮಾಡುತ್ತಿಲ್ಲ. ದೇಶ ಒಡೆಯುತ್ತಿದ್ದಾರೆ. ಅವರು ಅಜ್ಞಾನಿ ರೀತಿ ಏನೇನೋ ಮಾತನಾಡ್ತಾರೆ. ನಮ್ಮನ್ನ ಕೇವಲ ಮುಸ್ಲಿಂ ಪರ ಅಂತ ಬಿಂಬಿಸ್ತಾರೆ. ನಾವು ಕೊಟ್ಟ, ಆಹಾರ ಭದ್ರತೆ ಕಾಯಿದೆಯಲ್ಲಿ ಜಾತಿ ಬೇಧಬಾವ ಇದ್ಯಾ.?ಮತಕ್ಕೋಸ್ಕರ ಏನೇನೋ ಮಾತನಾಡ್ತಿದ್ದಾರೆ. ಮಾತೆತ್ತಿದ್ರೆ ಗಾಂಧಿ ಕುಟುಂಬದ ಬಗ್ಗೆ ಮಾತನಾಡ್ತಾರೆ. ಮೋದಿ ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.ಇವರು ದೇಶವನ್ನು ಅಭಿವೃದ್ಧಿ ಮಾಡುತ್ತಿಲ್ಲ. ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜಾತಿಗಳ ಮಧ್ಯೆ ಜಗಳ ತಂದಿಡುತ್ತಿದ್ದಾರೆ. ಹಿಂದು ಮುಸ್ಲಿಮರ ನಡುವೆ ಜಗಳ, ಜಾತಿ ಜಾತಿಗಳ ನಡುವೆ ಜಗಳ ತಂದಿಟ್ಟರು. ಕಾಂಗ್ರೆಸ್‌ನವರಿಗೆ ರಾಮಮಂದಿರಕ್ಕೆ ಆಹ್ವಾನ ಮಾಡಿದ್ವಿ ಅಂದ್ರು. ನನಗೂ ಆಹ್ವಾನ ಪತ್ರಿಕೆ ಕೊಟ್ರು. ನನಗೆ ಯಾಕೆ ಆಹ್ವಾನ ಕೊಟ್ಟರು ಏಕೆಂದರೆ ನಾನು ವಿಪಕ್ಷ ನಾಯಕ. ನನಗೆ ಯಾವಾಗ ಬೇಕೋ ಆವಾಗ ಹೋಗ್ತೇನೆ. ಆದ್ರೆ ಬಿಜೆಪಿಯವರು ಕಾಂಗ್ರೆಸ್‌ನವರು ಬರ್ತಿಲ್ಲ ಅಂತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ, ಎಐಸಿಸಿ ಕಾರ್ಯದರ್ಶಿ ಪ್ರಣವ್ ರಾವ್, ಸುಧಾಮದಾಸ್, ಮಾಜಿ ಶಾಸಕರಾದ ಎಂ.ಸಿ ಅಶ್ವತ್ಥ, ಸಾದತ್ ಅಲಿಖಾನ್, ಎಚ್.ಎಂ.ರೇವಣ್ಣ, ಬಿಎಂಎಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಕೆಪಿಸಿಸಿ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್ ಇತರರಿದ್ದರು.
ಬಾಕ್ಸ್............ರಾಷ್ಟ್ರಪತಿ ದ್ರೌಪತಿಮುರ್ಮು ಅವರನ್ನೇಕೆ ಕರೆದಿಲ್ಲ
ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದ್ರೌಪತಿಮುರ್ಮು ಅವರನ್ನೇಕೆ ಕಾರ್ಯಕ್ರಮಕ್ಕೆ ಕರೆದಿಲ್ಲ. ಮೋದಿ ಮಾತ್ರ ಹೋಗಿ ಮೊದಲೇ ನಿಂತಿದ್ರು. ಮೋದಿ ಏನ್ ಪೂಜಾರಿನಾ? ಪಾರ್ಲಿಮೆಂಟ್ ಕಟ್ಟಡ ಉದ್ಘಾಟನೆಗೂ ಮುರ್ಮು ಅವರನ್ನು ಕರೆದಿಲ್ಲ. ಎಲ್ಲಯವರೆಗೆ ದೇವಾಲಯಗಳಿಗೆ ಶೂದ್ರ, ದಲಿತ, ಹಿಂದುಳಿದವರಿಗೆ ಬಿಡೋದಿಲ್ಲವೋ ಅಲ್ಲಿಯವರೆಗೆ ನಾನು ಬರಲ್ಲ ಅಂದೆ ಎಂದು ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.ಬಾಕ್ಸ್........ಮೋದಿ ಐಡಿಯಾಲಜಿಗೆ ವಿರೋಧ:ರಾಜ್ಯದಲ್ಲಿ ಐದು ಗ್ಯಾರಂಟಿ ಯಶಸ್ವಿಯಾಗಿವೆ. ಈಗ ಮುಂದೆ ಮಹಿಳೆಯರಿಗೆ ಮಹಾಲಕ್ಷ್ಮಿ ಸ್ಕೀಂ ತರ್ತಿದ್ದೇವೆ. ವರ್ಷಕ್ಕೆ ಮಹಿಳೆಯರಿಗೆ ೧ಲಕ್ಷ ಹಣ ನೀಡುವ ಯೋಜನೆ ತರ್ತಿದ್ದೇವೆ. ದೇಶದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಚಿಂತನೆ ಮಾಡಿದೆ. ನಾವು ಮೋದಿ ವಿರುದ್ಧ ಇಲ್ಲ, ಮೋದಿ ಐಡಿಯಾಲಜಿ ವಿರುದ್ಧ ಇದ್ದೇವೆ. ಆರ್ ಎಸ್‌ಎಸ್ ತತ್ವದ ವಿರುದ್ಧ ಇದ್ದೇವೆ ಎಂದರು.
ಮಾತೆತ್ತಿದ್ರೆ ಮೋದಿ ಗ್ಯಾರಂಟಿ ಅಂತೀರಿ. ಎಲ್ಲ ವಿಚಾರಕ್ಕೂ ನಮ್ಮ ಬಿಜೆಪಿ ಮಾಡಿದೆ ಎನ್ನುವುದಿಲ್ಲ. ನಾನು ಮಾಡಿದೆ ಎನ್ನುತ್ತಾರೆ. ಎಲ್ಲದಕ್ಕೂ ಮೋದಿ, ಮೋದಿ ಅಂತಿರೀ. ಅದಕ್ಕಾಗಿ ನಾವು ಮೋದಿ ಹೆಸರನ್ನ ತೆಗೆದುಕೊಂಡು ಮಾತನಾಡ್ತೇವೆ. ಮೋದಿ ಎಂಬ ವೈಯಕ್ತಿಕ ವ್ಯಕ್ತಿ ಬಗ್ಗೆ ನಮಗೆ ಅಸಮಾಧಾನ ಇಲ್ಲ. ನಮಗೆ ಮೋದಿ ತತ್ವದ ಮೇಲೆ ಅಸಮಾಧಾನ ಇದೆ ಎಂದರು.ಬಾಕ್ಸ್.............
ಪ್ರಣಾಳಿಕೆ ಕುರಿತು ಚರ್ಚೆಗೆ ಬನ್ನಿ: ಖರ್ಗೆ ಸವಾಲುಕಾಂಗ್ರೆಸ್ ಪ್ರಣಾಳಿಕೆಯನ್ನು ಮೋದಿ ಮುಸ್ಲೀಂ ಲೀಗ್ ಪ್ರಣಾಳಿಕೆ ಎನ್ನುತ್ತಾರೆ. ನಮ್ಮ ಪ್ರಣಾಳಿಕೆ ಹಾಗೂ ನಿಮ್ಮ ಪ್ರಣಾಳಿಕೆ ಕುರಿತು ಚರ್ಚೆ ಮಾಡೋಣ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.
ಎಲ್ಲಾ ಕಡೆ ಬಿಜೆಪಿ ಸೋಲುವ ವಾತಾವರಣ ಇದೆ. ಹಾಗಾಗಿ ಮೋದಿ ಬಾಯಿಗೆ ಬಂದ ಹಾಗೆ ಮಾತನಾಡ್ತಿದ್ದಾರೆ. ಯುವಕರಿಗೆ ನೌಕರಿ, ನಾರಿ ಶಕ್ತಿ ಯೋಜನೆ, ಮಹಿಳೆಯರಿಗೆ ೧ ಲಕ್ಷ, ರೈತರಿಗೆ ನ್ಯಾಯ ಬೆಲೆ ನೀಡುತ್ತೇವೆ ಎಂದರೆ ಅದು ಮುಸ್ಲಿಂ ಲೀಗ್ ಪ್ರಣಾಳಿಕೆಯಾಗುತ್ತದಾ? ನಿಮ್ಮ ಬಂಗಾರ ತೆಗೆದುಕೊಂಡು ಅವರಿಗೆ ನೀಡುತ್ತಾರೆ ಎನ್ನುತ್ತಾರೆ. ಒಬ್ಬ ಪ್ರಧಾನಿಯಾದವರು ತಿಳಿವಳಿಕೆ ಇಟ್ಟುಕೊಂಡು ಮಾತನಾಡಬೇಕು. ಈ ರೀತಿ ಅಜ್ಞಾನದಿಂದ ಮಾತನಾಡಬಾರದು ಎಂದು ಕಿಡಿಕಾರಿದರು.