ಸಾರಾಂಶ
ಕನ್ನಡಪ್ರಭ ವಾರ್ತೆ ಕುದೂರು
ವಿಧಾನಸಭೆಯಲ್ಲಿ ರೈತರ ಸಮಸ್ಯೆಗಳನ್ನು ವಾರಗಟ್ಟಲೆ ಚರ್ಚೆ ಮಾಡಿದರೂ ಪರಿಹಾರ ಕಂಡುಕೊಳ್ಳಲ್ಲ. ಆದರೆ ಸಚಿವರು, ಶಾಸಕರ ವೇತನ ಹೆಚ್ಚಳದ ವಿಷಯ ಚರ್ಚೆಯನ್ನೇ ಮಾಡದೆ ಪಾಸ್ ಮಾಡುತ್ತೀರಾ? ನಿಮ್ಮ ಮನೆತನವೇ ಹೆಚ್ಚು ಕಾಲ ಮಾಗಡಿಯನ್ನು ಆಳ್ವಿಕೆ ಮಾಡಿದೆ. ಹಾಗಿದ್ದರೆ ಮಾಗಡಿ ಸಮಸ್ಯೆಗಳಿಂದ ಮುಕ್ತವಾಗಿಲ್ಲ ಏಕೆ? ರಾಮನಗರ ಜಿಲ್ಲೆ ಎಂಬ ಹೆಸರು ಬದಲಿಸಿದರೆ ಜಿಲ್ಲೆ ಉದ್ದಾರವಾಗುತ್ತದೆ ಎಂಬ ನಂಬಿಕೆ ನಿಮಗಿದೆಯಾ?ಇಂತಹ ಹತ್ತಾರು ಪ್ರಶ್ನೆಗಳನ್ನು ಕಾಲೇಜು ಯುವಕ ಯುವತಿಯರು ಎಸೆಯುತ್ತಿದ್ದರೆ, ಅತ್ತ ಶಾಸಕ ಬಾಲಕೃಷ್ಣ ಸ್ವಲ್ಪವೂ ವಿಚಲಿತರಾಗದೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದರು. ಇದು ನಿರಂತರ ಸಂಸ್ಥೆ ಮತ್ತು ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ ಸಂವಾದದಲ್ಲಿ ವಿದ್ಯಾರ್ಥಿಗಳು - ಶಾಸಕರ ನಡುವಿನ ಸಂವಾದ.
ಧರ್ಮದ ಹೆಸರಿನಲ್ಲಿ ರಾಜಕರಾಣ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಲಕೃಷ್ಣ, ದುರಂತರವೆಂದರೆ ಅದೇ ರೀತಿ ರಾಜಕಾರಣ ಆಗುತ್ತಿದೆ. ಮತದಾರರು ಎಚ್ಚೆತ್ತುಕೊಳ್ಳಬೇಕು. ಅಭಿವೃದ್ಧಿಯಾಧಾರಿತ ರಾಜಕಾರಣವಾಗಬೇಕು ಎಂದರು.ಚುನಾವಣೆಗೆ ಅಷ್ಟೊಂದು ಕೋಟಿ ಹಣ ಖರ್ಚು ಮಾಡುತ್ತೀರಿ? ಆ ಹಣ ಎಲ್ಲಿಂದ ಬರತ್ತದೆ ಎಂಬ ಪ್ರಶ್ನೆಗೆ ನಾನು ಖಾಸಗಿ ಉದ್ಯಮಗಳನ್ನು ಮಾಡುತ್ತೇನೆ. ಅದರಿಂದ ಬರುವ ಲಾಭದ ಹಣವನ್ನು ಕ್ಷೇತ್ರದ ಚುನಾವಣೆಗೆ ಬಳಸಿಕೊಳ್ಳುತ್ತೇನೆ. ಇದರಾಚೆಗೆ ಬೇರೆ ಯೋಚನೆ ಮಾಡುವುದಿಲ್ಲ. ಹಣ ಕೊಡದೇ ಹೋದರೆ ಚುನಾವಣೆ ಗೆಲ್ಲಬಹುದಾ? ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ನಮ್ಮನ್ನೇ ಅನುಮಾನಿಸುತ್ತಾರೆ. ಮತ್ತೆ ನಮ್ಮ ಬಳಿಯೇ ಹಣ ಪೀಕುತ್ತಾರೆ. ಆದರೆ ನ್ಯಾಯ ಸಿಗುವುದಿಲ್ಲ ಎಂಬ ಪ್ರಶ್ನೆಗೆ, ಲಂಚ ಕೇಳುವುದು ಎಷ್ಟು ಅಪರಾಧವೋ ಅದನ್ನು ನೀಡುವುದು ಅಷ್ಟೇ ಅಪರಾಧ. ನೀವು ನ್ಯಾಯ ಸಿಗುವವರೆಗೆ ಠಾಣೆಯಿಂದ ಹೊರಬರಬೇಡಿ. ಲಂಚ ಕೇಳಿದರೆ ಕೊಡಬೇಡಿ. ಪ್ರಶ್ನಿಸುವ ಮತ್ತು ನ್ಯಾಯೋಚಿತ ಹೋರಾಟ ಕಲಿತುಕೊಳ್ಳಬೇಕು. ನಮ್ಮ ಹೋರಾಟ ಸಮಾಜಕ್ಕೆ ಕಂಟಕವಾಗಬಾರದು ಮತ್ತು ಸಮಾಜವನ್ನು ಇಬ್ಬಾಗ ಮಾಡುವಂತಹದ್ದಾಗಿರಬಾರದು ಎಂಬ ಎಚ್ಚರ ಇರಬೇಕು ಎಂದು ಉತ್ತರಿಸಿದರು.ಹಳ್ಳಿಗಳಲ್ಲಿ ಸಣ್ಣ ಅಂಗಡಿಗಳಲ್ಲಿ ಮದ್ಯ ಮಾರಾಟ ಆಗುತ್ತಿದೆ. ಇದಕ್ಕೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂಬ ಯುವತಿಯ ಪ್ರಶ್ನೆಗೆ, ವೈಯಕ್ತಿಕವಾಗಿ ನನಗಿದು ಅತ್ಯಂತ ನಾಚಿಕೆ ವಿಷಯ. ಇದನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂಬುದೇ ನಮ್ಮ ಆಗ್ರಹವೂ ಆಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಶೀಘ್ರವೇ ಪೊಲೀಸರಿಗೆ ಸೂಚನೆ ನೀಡಲಾಗುವುದು ಎಂದರು.
ಐಪಿಲ್ ಬೆಟ್ಟಿಂಗ್ ದಂಧೆ ಶಾಶ್ವತವಾಗಿ ನಿಲ್ಲಬೇಕು :ಐಪಿಲ್ ಆಟ ಎನ್ನೋದು ಶ್ರೀಮಂತರ ಮತ್ತು ಹಣ ಮಾಡುವವರ ಆಟ ಎನಿಸುತ್ತಿದೆ. ಇದಕ್ಕೆ ಲಕ್ಷಾಂತರ ಯುವಕರು ಬೆಟ್ಟಿಂಗ್ ದಂಧೆ ಮಾಡಿಕೊಂಡು ಸಾವಿಗೆ ಹತ್ತಿರವಾಗುತ್ತಿದ್ದಾರೆ. ನಾನು ಲಾಸ್ಟ್ ಬೆಂಚಿನ ವಿದ್ಯಾರ್ಥಿ, ರಾಜಕಾರಣಿಯಾದೆ. ಇದಕ್ಕೆ ಅದೃಷ್ಟವೂ ಸಹಕರಿಸಿತು. ನಾನೇನು ಅಷ್ಟು ಜಾಣನಲ್ಲ. ಅದಕ್ಕೆ ನನಗೆ ಪ್ರಾಥಮಿಕ ಶಾಲಾ ಮತ್ತು ಉನ್ನತ ಶಿಕ್ಷಣ ಸಚಿವ ಸ್ಥಾನ ಬಿಟ್ಟು ಉಳಿದ ಯಾವ ಖಾತೆಯಾದರೂ ನಿಭಾಯಿಸಬಲ್ಲೆ ಎಂದು ಹೇಳಿದರು.
ಮಕ್ಕಳ ಬಾಲ್ಯವನ್ನು ಅನುಭವಿಸಲಿಲ್ಲ:ನಾನು ನನ್ನ ಕ್ಷೇತ್ರಕ್ಕೆ ಕೊಟ್ಟಷ್ಟು ಗಮನವನ್ನು ನನ್ನ ಕುಟುಂಬಕ್ಕೆ ಕೊಡಲೇ ಇಲ್ಲ. ನನಗಿಬ್ಬರು ಹೆಣ್ಣು ಮಕ್ಕಳಿದಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಹಾಜರಾಗಿ ಸಂಭ್ರಮಿಸಿದ್ದು ಬಹಳ ಕಡಿಮೆ. ಅವರೊಂದಿಗೆ ಪ್ರಯಾಣ ಮಾಡಿದ್ದು ಕಡಿಮೆ, ಸಿನಿಮಾ ಹೋಟೆಲ್‌ಗೂ ಕರೆದೊಯ್ಯಲಿಲ್ಲ. ಮಗಳ ಹುಟ್ಟ ಹಬ್ಬಕ್ಕೆ ಬರುತ್ತೇನೆ ಎಂದೇಳಿ ಪಂಚಾಯ್ತಿ ಚುನಾವಣೆಯಲ್ಲಿ ಬ್ಯುಸಿಯಾಗಿದ್ದೆ. ನನ್ನ ಮಡದಿಯೇ ಮಕ್ಕಳ ಕಡೆಗೆ ಹೆಚ್ಚು ಕಾಳಜಿ ಕೊಟ್ಟು ಜವಾಬ್ದಾರಿಯುತವಾಗಿ ಬೆಳೆಸಿದರು.
ಇಂದಿರಾ ಕ್ಯಾಂಟೀನ್: ಸದ್ಯದಲ್ಲಿಯೇ ಉದ್ಯೋಗ ಮೇಳ ಆಯೋಜಿಸುತ್ತೇನೆ. ಕುದೂರಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು. ಮಕ್ಕಳಿದ್ದರು ಶಾಲೆ ಮುಚ್ಚಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಮಕ್ಕಳಿದ್ದರೆ ಖಂಡಿತವಾಗಿ ಈ ಶೈಕ್ಷಣಿಕ ವರ್ಷದಿಂದಲೇ ಶಾಲೆ ಆರಂಭಿಸುವಂತೆ ಕ್ರಮ ಕೈಗೊಳ್ಳುತ್ತೇನೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದವಾಗಲು ಕೋಚಿಂಗ್ ಕ್ಲಾಸ್ ಮತ್ತು ಅಧ್ಯಯನ ಕೇಂದ್ರವನ್ನು ಇನ್ನು 3 ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಪ್ರಕಟಿಸಿದರು.ಪ್ರಶ್ನೋತ್ತರದ ಸಂದರ್ಭದಲ್ಲಿ ಶಾಸಕರು ಮಕ್ಕಳಿಗೆ ತಮ್ಮ ವಿದ್ಯಾಭ್ಯಾಸದ ದಿನಗಳನ್ನು ಮೆಲಕು ಹಾಕುತ್ತಾ ಮಕ್ಕಳಲ್ಲಿ ಮಕ್ಕಳಾಗಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದು ಎಲ್ಲರ ಮೆಚ್ಚುಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿಪ್ರಾಚಾರ್ಯ ಗುರುಮೂರ್ತಿ ವಹಿಸಿದ್ದರು. ಗ್ರಾಪಂ ಸದಸ್ಯ ಕೆ.ಬಿ.ಬಾಲರಾಜ್, ಲತಾ ಗಂಗಯ್ಯ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರೇಖಾ, ಉಪಾದ್ಯಕ್ಷೆ ರಮ್ಯಜ್ಯೋತಿ, ನಿರಂತರ ಸಂಸ್ಥೆಯ ಚಂ.ದಯಾನಂದ, ಕೆ.ಪಿ.ವೆಂಕಟೇಶ್, ಮಾಗಡಿ ಶಾರದಾ ಕಾಲೇಜಿನ ಚೇತನ್, ಮೋಹನ್, ಸಿದ್ದಗಂಗಾ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.ನೀವು ಸಿಎಂ ಆದರೆ ಮಾಡುವ ಮೊದಲ ಕೆಲಸ ಏನು? ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಬಾಲಕೃಷ್ಣ, ಮೊದಲು ಮಂತ್ರಿಯಾಗ್ತೀನಿ ತಾಯಿ. ನನಗೆ ಮುಖ್ಯಮಂತ್ರಿಯಾಗುವ ಕಸಸಿಲ್ಲ. ಅಂತಹ ಸಾಮರ್ಥ್ಯವೂ ನನಗಿಲ್ಲ ಎಂದರು.
ನಿಮ್ಮ ಆರೊಗ್ಯದ ಗುಟ್ಟೇನು?ನಿಮ್ಮ ಆರೋಗ್ಯ ಮತ್ತು ಸೌಂದರ್ಯದ ಗುಟ್ಟೇನು? ನಿಮಗೆ ಅರವತ್ತು ವರ್ಷವಾದರು ಯುವಕರಂತೆ ಇದ್ದೀರಿ ನಿಮ್ಮ ಸೌಂದರ್ಯ ಮತ್ತು ಆರೊಗ್ಯದ ಗುಟ್ಟೇನು? ಎಂಬ ವಿದ್ಯಾರ್ಥಿ ಪ್ರಶ್ನೆಗೆ ಬಾಲಕೃಷ್ಣ, ನನ್ನ ಶಿಸ್ತಿನ ಜೀವನ ಶೈಲಿ ಮತ್ತು ಉಲ್ಲಸಿತ ಮನಸ್ಸು ನನ್ನನ್ನು ಆರೋಗ್ಯಕರವಾಗಿಟ್ಟಿದೆ. ನಿಮ್ಮ ಕಾಲೇಜು ಅವಧಿಯಲ್ಲಿ ಯಾರಾದ್ರೂ ಗರ್ಲ್ ಫ್ರೆಂಡ್ ಇದ್ರಾ? ಎಂದಾಗ ನಗುತ್ತಾ ಈ ಪ್ರಶ್ನೇನಾ ನೀವು ನನಗೆ ಕೇಳಬಹುದಾ? ಎಂದು ನಗುತ್ತಾ ಮುಂದಿನ ಪ್ರಶ್ನೆ ಕೇಳಿ ಎಂದರು.
ಆತ್ಮಹತ್ಯೆಯೇ ಪರಿಹಾರವಲ್ಲಯುವಕರು ಸಾಧನೆಯ ಕಡೆಗೆ ಮುಖ ಮಾಡಬೇಕು. ಹೋರಾಟದಲ್ಲಿ ಸೋಲು ಗೆಲುವು, ಮಾನ ಅಪಮಾನಗಳು ಇದ್ದದ್ದೆ. ನನ್ನ ಇಷ್ಟು ವರ್ಷಗಳ ರಾಜಕೀಯ ಅನುಭವದಲ್ಲಿ ಇಂತಹ ಘಟನೆಗಳು ಸಾಕಷ್ಟು ಜರುಗಿವೆ. ಆದರೆ ಅವುಗಳನ್ನೆಲ್ಲಾ ಮೆಟ್ಟು ನಿಂತು ಸಾಧನೆ ಮಾಡದೆ ಸತ್ತರೆ ಸಾವಿಗೂ ಗೌರವವಿಲ್ಲ ಎಂಬ ಮಾತನ್ನು ಅರ್ಥ ಮಾಡಿಕೊಂಡು ನಿಂತೆ. ಇಂದು ಶಾಸಕನಾಗಿ ನಿಮ್ಮ ಮುಂದೆ ನಿಲ್ಲುವಂತಾಗಿದೆ. ಯಾವುದೇ ವ್ಯಕ್ತಿಯೂ ಕೆಲಸಕ್ಕೆ ಬಾರದವನು ಎಂಬ ಭಾವನೆ ಬೇಡ. ಪ್ರತಿಯೊಬ್ಬರು ಒಂದಲ್ಲಾ ಒಂದು ಕ್ಷೇತ್ರದಲ್ಲಿ ಪ್ರತಿಭಾವಂತರೇ ಆಗಿರುತ್ತಾರೆ. ನಮ್ಮ ಶಕ್ತಿಯ ಅರಿವು ಅರಿತು ಬೆಳವಣಿಗೆಯ ದಾರಿ ಯಾವುದೆಂದು ಗುರುತಿಸಿಕೊಳ್ಳಬೇಕು.
-ಬಾಲಕೃಷ್ಣ, ಶಾಸಕ