ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಬೆಳಗಾವಿಯಲ್ಲಿ ಸೆ.22 ರಂದು ನಡೆಯಲಿರುವ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರವರ್ಗ 2ಎ ಹೋರಾಟದ ವಕೀಲರ ಸಮಾವೇಶಕ್ಕೆ ಇಂಡಿ ತಾಲೂಕಿನ ಪಂಚಮಸಾಲಿ ಸಮಾಜದ ವಕೀಲರು ಬೆಂಬಲಿಸಿ ಭಾಗವಹಿಸಲಿದ್ದೇವೆ ಎಂದು ವಕೀಲರ ಸಂಘದ ಜಿಲ್ಲಾ ಸಂಘಟನಾ ಸಮಿತಿಯ ಸದಸ್ಯ ಬಿ.ಬಿ.ಬಿರಾದಾರ (ಜೇವೂರ್) ಹೇಳಿದರು.ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಮೀಸಲಾತಿಗಾಗಿ ದಶಕಗಳಿಂದ ಹಲವು ಹೋರಾಟ ನಡೆಸಿದರು ಸಹ ಯಾವ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲಿಲಲ್ಲ. ಈ ಹಿನ್ನೆಲೆಯಲ್ಲಿ ಪೂಜ್ಯ ಶ್ರೀಗಳ ಕಳಕಳಿಯ ಮೇರೆಗೆ ಕಾನೂನು ಹೋರಾಟ ಮಾಡಲು ಎಲ್ಲ ವಕೀಲರು ಸಂಘಟಿತರಾಗಿದ್ದು ಸೆ.22 ರಂದು ಬೆಳಗಾವಿಯಲ್ಲಿ ಕಾನೂನು ಹೋರಾಟದ ಕುರಿತು ಸಮಾವೇಶ ನಡೆಯಲಿದೆ ಎಂದರು. ಪೂಜ್ಯರ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶಕ್ಕೆ ಎಲ್ಲ ಜಿಲ್ಲೆಗಳ ಪಂಚಮಸಾಲಿ ಸಮಾಜದ ವಕೀಲರು, ಬೆಂಬಲ ಸೂಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತಿದ್ದು, ಇಂಡಿ ತಾಲೂಕಿನ ವಕೀಲರು ಸಹ ಈ ಸಮಾವೇಶದಲ್ಲಿ ಪಾಲ್ಗೊಂಡು ಸಮಾಜದ ಬಡ ಮಕ್ಕಳಿಗೆ ಮೀಸಲಾತಿ ಕೊಡಿಸುವ ಹೋರಾಟ ನಡೆಸಲಿದ್ದೇವೆ ಎಂದರು. ಹಿರಿಯ ನ್ಯಾಯವಾದಿಗಳಾದ ಎಸ್.ಬಿ.ಬೂದಿಹಾಳ, ಬಿ.ಬಿ. ಕೊಟ್ಟಲಗಿ, ಎ.ಎಂ.ಬಿರಾದಾರ, ಎ.ಪಿ.ಬಿರಾದಾರ, ಜಿ.ಎಸ್.ಪಾಟೀಲ, ವೀರೇಂದ್ರ ಪಾಟೀಲ, ಡಿ.ಜಿ.ಜೋತಗೊಂಡ, ಪಿ.ಡಿ.ಲವಗಿ, ಆರ್.ಜೆ.ಪಾಟೀಲ, ಎಸ್.ಆರ್.ಮುಜಗೊಂಡ, ಎಂ.ಸಿ.ಬಿರಾದಾರ, ಎಂ.ಬಿ.ಬಿರಾದಾರ, ಎಸ್. ಎಸ್. ಬಿರಾದಾರ, ಎ.ಬಿ.ಆಳೂರ, ಎಸ್.ಆರ್. ಬಿರಾದಾರ, ಎಸ್.ಎ. ಚಾಂದಕವಟೆ, ಸೇರಿದಂತೆ ಇನ್ನಿತರರು ಇದ್ದರು.