ಗ್ರಂಥಪಾಲಕರ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ, ಕರ್ನಾಟಕ ರಾಜ್ಯ ಗ್ರಂಥಪಾಲಕರ ಸಂಘ ಹಾಗೂ ಇತರ ಗ್ರಂಥಾಲಯ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಹೋರಾಟಕ್ಕೆ ದಕ್ಷಿಣ ಕನ್ನಡ ಮತ್ತು ಕೊಡಗು ಗ್ರಂಥಾಲಯ ಸಂಘ, ಉಡುಪಿ ಬೆಂಬಲ ಸೂಚಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಗ್ರಂಥಪಾಲಕರ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ, ಕರ್ನಾಟಕ ರಾಜ್ಯ ಗ್ರಂಥಪಾಲಕರ ಸಂಘ ಹಾಗೂ ಇತರ ಗ್ರಂಥಾಲಯ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಹೋರಾಟಕ್ಕೆ ದಕ್ಷಿಣ ಕನ್ನಡ ಮತ್ತು ಕೊಡಗು ಗ್ರಂಥಾಲಯ ಸಂಘ, ಉಡುಪಿ ಬೆಂಬಲ ಸೂಚಿಸಿದೆ.

ಕರ್ನಾಟಕ ರಾಜ್ಯದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಹಾಗೂ ಪಿಎಚ್.ಡಿ. ಪದವಿ ಪಡೆದಿರುವ ಅನೇಕ ಅರ್ಹ ಅಭ್ಯರ್ಥಿಗಳು ಉದ್ಯೋಗಾವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದ ವಿವಿಧ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಹಲವು ವರ್ಷಗಳಿಂದ ಗ್ರಂಥಪಾಲಕರ ಹುದ್ದೆಗಳು ಖಾಲಿ ಉಳಿದಿರುವುದು ಗ್ರಂಥಾಲಯ ಸೇವೆಗಳ ಪರಿಣಾಮಕಾರಿ ನಿರ್ವಹಣೆಯ ಜೊತೆಗೆ ಅರ್ಹ ಅಭ್ಯರ್ಥಿಗಳ ಉದ್ಯೋಗಾವಕಾಶಗಳ ಮೇಲೂ ಪರಿಣಾಮ ಬೀರುತ್ತಿದೆ. ದೀರ್ಘಕಾಲದಿಂದ ನೇಮಕಾತಿ ನಡೆಯದಿರುವುದರಿಂದ ಹಲವು ಅಭ್ಯರ್ಥಿಗಳು ವಯೋಮಿತಿ ಮೀರುವ ಪರಿಸ್ಥಿತಿಯನ್ನೂ ಎದುರಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಗ್ರಂಥಪಾಲಕರ ಜವಾಬ್ದಾರಿಗಳು ಪುಸ್ತಕಗಳ ನಿರ್ವಹಣೆಗೆ ಮಾತ್ರ ಸೀಮಿತವಾಗಿರದೆ, ಇ-ಸಂಪನ್ಮೂಲಗಳು, ಡಿಜಿಟಲ್ ಗ್ರಂಥಾಲಯ ಸೇವೆಗಳು, ಮಾಹಿತಿ ಸಾಕ್ಷರತೆ ಹಾಗೂ ಸಂಶೋಧನಾ ಬೆಂಬಲದವರೆಗೆ ವಿಸ್ತರಿಸಿವೆ. ಆದ್ದರಿಂದ ಅರ್ಹ ಮತ್ತು ತರಬೇತಿ ಪಡೆದ ಗ್ರಂಥಾಲಯ ವೃತ್ತಿಪರರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಗ್ರಂಥಪಾಲಕರ ಸಂಘ ಹಾಗೂ ಇತರ ಗ್ರಂಥಾಲಯ ಸಂಘಟನೆಗಳು ದಿನಾಂಕ ಅ.5ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಹಮ್ಮಿಕೊಂಡಿರುವ ಹೋರಾಟಕ್ಕೆ ದಕ್ಷಿಣ ಕನ್ನಡ ಮತ್ತು ಕೊಡಗು ಗ್ರಂಥಾಲಯ ಸಂಘ ಉಡುಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ.

ಗ್ರಂಥಾಲಯಗಳು ಬಲಿಷ್ಠವಾದರೆ ಜ್ಞಾನಾಧಾರಿತ ಸಮಾಜ ನಿರ್ಮಾಣ ಸಾಧ್ಯ. ಗ್ರಂಥಾಲಯಗಳ ಸಮರ್ಪಕ ಕಾರ್ಯನಿರ್ವಹಣೆಗೆ ಅರ್ಹ ಗ್ರಂಥಪಾಲಕರ ಸೇವೆ ಅತ್ಯಗತ್ಯ. ಆದ್ದರಿಂದ ರಾಜ್ಯದ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಮತ್ತು ಕೊಡಗು ಗ್ರಂಥಾಲಯ ಸಂಘ, ಉಡುಪಿ ಆಗ್ರಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.