ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ವೆಂಕಟರಮಣಗೌಡ, ಅಲಿಯಾಸ್ ಸ್ಟಾರ್ ಚಂದ್ರು ಪರ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಮಾತನಾಡಿದರು.
ಹಿಂದಿನಿಂದಲೂ ನಮ್ಮ ಕುಟುಂಬವನ್ನು ಆಶೀರ್ವದಿಸಿಕೊಂಡು ಬಂದಿದ್ದೀರಿ. ಇವತ್ತಿಗೂ ನನ್ನನ್ನು ಬಂಡಿಸಿದ್ದೇಗೌಡರ ಮಗ ಎಂದು ಗುರುತಿಸುತ್ತೀರಿ. ನಿಮ್ಮ ಪ್ರೀತಿ, ವಾತ್ಸಲ್ಯ ನನ್ನ ಇಡೀ ಕುಟುಂಬಕ್ಕಿದ್ದು, ಮತ್ತೊಮ್ಮೆ ನನ್ನನ್ನು ಮೂರನೇ ಬಾರಿಗೆ ಶಾಸಕರಾಗಿ, ಸೆಸ್ಕಾಂ ಅಧ್ಯಕ್ಷರಾಗಿಯೂ ಆಯ್ಕೆಯಾಗಲು ಅವಕಾಶ ಕಲ್ಪಿಸಿದ್ದೀರಿ ಎಂದು ಹೇಳಿದರು.ನನ್ನ ಮನದಲ್ಲಿರುವುದು ನನ್ನ ಕ್ಷೇತ್ರ ಹಾಗೂ ನನ್ನ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಮಂತ್ರವೊಂದೇ. ಸಾಕಷ್ಟು ಅನುದಾನಗಳನ್ನು ಜಿಲ್ಲೆಗೆ ತರಲು ಶ್ರಮ ಪಡುತ್ತಿದ್ದೇನೆ. ನನ್ನ ಜೊತೆ ಹಿಂದಿನಿಂದಲೂ ಬಂದ, ಈಗ ಬಂದಿರುವ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಬಯಕೆ ನನ್ನದು. ನಿಮ್ಮ ಜೊತೆಗೆ ಹೆಚ್ಚಿನ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಭಾವುಕರಾದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ರಾಜ್ಯ ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ 5 ಗ್ಯಾರಂಟಿ ಘೋಷಣೆಗಳನ್ನು ಘೋಷಿಸಿದಂತೆ ಜಾರಿಗೆ ತಂದಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈಗಾಗಲೇ ನೀಲಿ ನಕ್ಷೆ ತಯಾರಿಸಿದ್ದು ಶೀಘ್ರದಲ್ಲಿಯೇ ಜಾರಿಗೆ ತರಲಿದೆ ಎಂದರು.ಮರಿತಿಬ್ಬೇಗೌಡ ಮಾತನಾಡಿ, ಬಿಜೆಪಿ ಸರ್ಕಾರ ಕೇಂದ್ರ ಹಾಗೂ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನ ತಾವು ನೀಡಿದ್ದ ಘೋಷಣೆಗಳನ್ನು ಇಂದಿಗೂ ಜಾರಿಗೆ ತಂದಿಲ್ಲ. ಕೇವಲ ಮಂದಿರ ನಿರ್ಮಾಣ ಹಾಗೂ ಮೂರ್ತಿ ಪ್ರತಿಷ್ಠಾಪನೆಯಲ್ಲಿಯೇ ಕಾಲ ಕಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಭಾವ್ಯ ಅಭ್ಯರ್ಥಿ ವೆಂಕಟರಮಣಗೌಡ ಅಲಿಯಾಸ್ ಸ್ಟಾರ್ ಚಂದ್ರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಜಿಲ್ಲೆಯ ಋಣ ತೀರಿಸಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.ಸಭೆಯಲ್ಲಿ ಜಿಲ್ಲಾ ಮಾಧ್ಯಮ ಸಂಚಾಲಕ ಎಂ.ಪುಟ್ಟೇಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಮನ್ಮುಲ್ ಅಧ್ಯಕ್ಷ ಬೋರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನಂದೀಶ್, ಕೆಪಿಸಿಸಿ ಸದಸ್ಯ ರಾಜಣ್ಣ, ಗಂಗಾಧರ್, ಮಹದೇವಸ್ವಾಮಿ, ಸಾವಿತ್ರಿ, ಸ್ವಾಮಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.